ಕನ್ನಡಪ್ರಭ ವಾರ್ತೆ ಕೋಲಾರರಾಜ್ಯಾದ್ಯಂತ ಆಟೋಗಳಿಗೆ ಉಂಟಾಗಿರುವ ಗ್ಯಾಸ್ ಸಮಸ್ಯೆಗೆ ಕೇಂದ್ರ ಸರ್ಕಾರ ನಿರ್ವಹಣೆಯ ವೈಫಲ್ಯವೇ ಕಾರಣವಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ಆರೋಪಿಸಿದರು. ಶ್ರೀನಿವಾಸಪುರದ ಖಾಸಗಿ ಕಾರ್ಯಕ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ 3 ತಿಂಗಳಿಂದ ಕೇಂದ್ರ ಸರ್ಕಾರ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳದೆ ನಿರ್ಲಕ್ಷಿಸಿದೆ ಬಿಜೆಪಿ ಆಡಳಿತ ಇರುವ ರಾಜ್ಯಗಳಿಗೆ ಒಂದು ಕಾಯ್ದೆ ಇತರೆ ಪಕ್ಷಗಳ ಆಡಳಿತ ಇರುವ ರಾಜ್ಯಗಳಿಗೆ ಮತ್ತೊಂದು ಕಾಯ್ದೆ ಎಂಬಂತೆ ತಾರತಮ್ಯದ ಧೋರಣೆ ಮಾಡುವುದು ಬಿಟ್ಟು ಎಲ್ಲಾ ರಾಜ್ಯಗಳಿಗೆ ಒಂದೇ ಕಾನೂನು, ಒಂದೇ ನಿಯಮ ಜಾರಿಗೆ ತರುವ ಮೂಲಕ ಸಮಾನತೆ ಧೋರಣೆ ಹೊಂದುವಂತಾಗಿ ಆಡಳಿತ ನೀಡುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದರು.
ಪರಿಶಿಷ್ಟ ಜಾತಿ ಒಳಮೀಸಲಾತಿ ಜಾರಿಗೆ ರಾಜ್ಯ ಸರ್ಕಾರ ಸಂಪೂರ್ಣವಾಗಿ ಬದ್ದವಾಗಿದೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ೧೦೧ ಪರಿಶಿಷ್ಟ ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ಜಾರಿಗೊಳಿಸಿದ ನಂತರವೇ ರಾಜ್ಯದಲ್ಲಿ ಖಾಲಿ ಇರುವಂತ ೫೬,೪೩೨ ಹುದ್ದೆಗಳನ್ನು ನೇಮಕಾತಿ ಪ್ರಕ್ರಿಯೆ ನಡೆಸಲಾಗುವುದು ಎಂದರು.ಕೋಲಾರ-ಚಿಕ್ಕಬಳ್ಳಾಫುರ ಜೀವನಾಡಿಯಾಗಿರುವ ಎತ್ತಿನಹೊಳೆ ಯೋಜನೆಯು ೨೦೨೭ಕ್ಕೆ ಹರಿಸುವುದು ಖಚಿತವಾಗಿದೆ, ಈಗಾಗಲೇ ಕಾಮಗಾರಿಗಳು ಪ್ರಗತಿಯಲ್ಲಿದೆ, ಇಷ್ಟು ದಿನಗಳಿಂದ ಇದ್ದ ಸಮಸ್ಯೆ ಬಗೆಹರಿಸಲಾಗಿದೆ. ಈಗಾಗಲೇ ಕೆ.ಸಿ ಮತ್ತು ಎಚ್.ಎನ್ ವ್ಯಾಲಿಯ ಸಂಸ್ಕರಣೆಯ ನೀರು ಕೆರೆಗಳಿಗೆ ಹರಿಸಿ ಅಂತರ್ಜಲ ಅಭಿವೃದ್ದಿಪಡಿಸುತ್ತಿರುವುದರಿಂದ ೧೫೦೦ ಅಡಿ ಪಾತಳದಲ್ಲಿದ್ದ ನೀರನ್ನು ಈಗ ೫೦೦ ರಿಂದ ೬೦೦ ಅಡಿಗಳಿಗೆ ಸಿಗುತ್ತಿದೆ. ಎತ್ತಿನಹೊಳೆ ನೀರು ಸಹ ಇದರ ಜೊತೆಗೆ ಹರಿಸುವುದರಿಂದ ಭವಿಷ್ಯದಲ್ಲಿ ಬಯಲು ಸೀಮೆ ಪ್ರದೇಶಗಳು ಮಲೆನಾಡು ಆಗುವುದರಲ್ಲಿ ಯಾವುದೇ ಸಂಶವಿಲ್ಲ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.ರಾಜ್ಯದಲ್ಲಿ ಕೆಲವು ಕಡೆ ಇಂದಿರಾ ಕ್ಯಾಂಟೀನ್‌ಗಳಿಗೆ ಹಣಕಾಸು ಕೊರತೆ ಮತ್ತು ಬಾಕಿ ಪಾವತಿಯ ಸಮಸ್ಯೆಗಳಿಂದ ಸಂಕಷ್ಟಕ್ಕೆ ಒಳಗಾಗಿರುವುದು ಗಮನಕ್ಕೆ ಬಂದಿದೆ, ಈ ಸಂಬಂಧ ಸಿಎಂ ಗಮನಕ್ಕೆ ತರಲಾಗಿದೆ ಶೀಘ್ರವೇ ಇಂದಿರಾ ಕ್ಯಾಂಟೀನ್‌ಗಳ ನೆರವಿಗೆ ಸರ್ಕಾರವು ಬದ್ದವಾಗಿದ್ದು ಶೀಘ್ರದಲ್ಲೇ ಎಲ್ಲಾ ವ್ಯವಸ್ಥೆಗಳನ್ನು ಸರಿಪಡಿಸಲಾಗುವುದು ಎಂಬ ಆಶ್ವಾಸನೆ ನೀಡಿದರು. ಜಿಪಂ ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ದಳಸನೂರು ಎಸ್.ಶಿವಾರೆಡ್ಡಿ, ಗಾ.ಪಂ ಸದಸ್ಯರಾದ ಸುಮಿತ್ರಮ್ಮ, ಸಂಪತ್ ಕುಮಾರ್ ಹರೀಶ್, ಚೌಡರೆಡ್ಡಿ ವೆಂಕಟೇಶ್ ಗೌಡ, ಶ್ರೀನಿವಾಸ ಮಹೇಶ್, ಮುನಿಸ್ವಾಮಿ, ಮುರಳಿ ನಾರಾಯಣಸ್ವಾಮಿ, ವೆಂಕಟಾದ್ರಿ, ಗೋಪಾಲ್ ಇದ್ದರು.