ವಿಶೇಷ ವರದಿಕನ್ನಡಪ್ರಭ ವಾರ್ತೆ ಮಂಡ್ಯ
ಅಡುಗೆ ಅನಿಲಕ್ಕೆ ಸಬ್ಸಿಡಿ ಪಡೆಯುತ್ತಿರುವವರು ಕೆವೈಸಿ ಮಾಡಿಸುವುದು ಕಡ್ಡಾಯ. ಕೆವೈಸಿ ಮಾಡಿಸುವುದಕ್ಕೆ ಡಿ.೩೧ ಕೊನೆಯ ದಿನ. ಇಂತಹದೊಂದು ಸುಳ್ಳು ಸುದ್ದಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಾ ದೊಡ್ಡ ಅವಾಂತರವನ್ನೇ ಸೃಷ್ಟಿಸಿದೆ.ಈ ಸುಳ್ಳು ಸುದ್ದಿಯನ್ನು ನಂಬಿ ಅಡುಗೆ ಅನಿಲ ಸಬ್ಸಿಡಿದಾರರು ಗ್ಯಾಸ್ ಅಂಗಡಿಗಳಿಗೆ ಮುಗಿಬೀಳುತ್ತಿದ್ದಾರೆ. ನಿತ್ಯ ನೂರಾರು ಸಂಖ್ಯೆಯಲ್ಲಿ ಜನರು ಅಂಗಡಿಗಳ ಎದುರು ಜಮಾಯಿಸುತ್ತಿದ್ದು, ಕೆವೈಸಿ ಮಾಡಿಸುವುದಕ್ಕೆ ನೂಕುನುಗ್ಗಲು ನಡೆಸುತ್ತಿದ್ದಾರೆ. ಇದರ ಪರಿಣಾಮ ಎಲ್ಲಾ ಗ್ಯಾಸ್ ಅಂಗಡಿಗಳ ಮುಂದೆ ಜನರ ಉದ್ದನೆಯ ಸಾಲು ಕಂಡುಬರುತ್ತಿದೆ.
ಗ್ಯಾಸ್ ಸಬ್ಸಿಡಿ ಪಡೆಯುತ್ತಿರುವವರು ತಾವು ಪಡೆಯುತ್ತಿರುವ ಸೌಲಭ್ಯ ಎಲ್ಲಿ ಸ್ಥಗಿತವಾಗುವುದೋ ಎಂಬ ಭಯ ಮತ್ತು ಆತಂಕದಿಂದ ಮುಂಜಾನೆಯೇ ಎದ್ದು ಗ್ಯಾಸ್ ಅಂಗಡಿಗಳ ಎದುರು ದಾಖಲೆಗಳೊಂದಿಗೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಡಿ.೩೧ರೊಳಗೆ ಕೆವೈಸಿ ಮಾಡಿಸಿಕೊಳ್ಳುವುದಕ್ಕೆ ಎಲ್ಲ ಕೆಲಸ ಬಿಟ್ಟು ಕಾದು ಕೂರುತ್ತಿದ್ದಾರೆ. ಕೇಳಿದಷ್ಟು ಹಣ ಕೊಟ್ಟು ಕೆವೈಸಿ ಮಾಡಿಸಿಕೊಳ್ಳುತ್ತಿರುವುದು ಎಲ್ಲೆಡೆ ಕಾಣುತ್ತಿರುವ ಸಾಮಾನ್ಯ ದೃಶ್ಯವಾಗಿದೆ.ಕೊನೆಯ ದಿನಾಂಕ ನಿಗದಿಪಡಿಸಿಲ್ಲ:
ಗ್ಯಾಸ್ ಸಬ್ಸಿಡಿ ಪಡೆಯುತ್ತಿರುವವರು ಕೆವೈಸಿ ಮಾಡಿಸುವುದು ಕಡ್ಡಾಯ ಮಾಡಿದ್ದರೂ ಅದಕ್ಕೆ ಅಂತಿಮ ದಿನಾಂಕವನ್ನು ನಿಗದಿಪಡಿಸಿಲ್ಲ. ಈ ಸಂಬಂಧ ಅಡುಗೆ ಅನಿಲ ನಿಯಂತ್ರಣ ಇಲಾಖೆಯಾಗಲೀ, ಆಹಾರ ಇಲಾಖೆಯವರಾಗಲೀ ಅಧಿಕೃತ ಪ್ರಕಟಣೆಯನ್ನೂ ಹೊರಡಿಸಿಲ್ಲ. ಕೆವೈಸಿಯನ್ನು ಗ್ಯಾಸ್ ಅಂಗಡಿಗೆ ಬಂದು ಮಾಡಿಸುವ ಅಗತ್ಯವೂ ಇಲ್ಲ. ಅಡುಗೆ ಅನಿಲವನ್ನು ಮನೆಗೆ ಪೂರೈಸಲು ಬರುವವರಿಗೆ ದಾಖಲೆಗಳನ್ನು ಕೊಟ್ಟು ಕೆವೈಸಿ ಮಾಡಿಸಬಹುದು. ಆದರೆ, ಈ ವಿಚಾರ ಬಹುತೇಕರಿಗೆ ಗೊತ್ತಿಲ್ಲದ ಕಾರಣ ಎಲ್ಲರೂ ಒಮ್ಮೆಲೆ ಗ್ಯಾಸ್ ಅಂಗಡಿಗಳಿಗೆ ಮುಗಿಬೀಳಲಾರಂಭಿಸಿದ್ದಾರೆ.ಎಷ್ಟು ಹೇಳಿದರೂ ಕೇಳುತ್ತಿಲ್ಲ..!
ಕೆವೈಸಿ ಮಾಡಿಸುವುದಕ್ಕೆ ಸರ್ಕಾರ ಕೊನೆಯ ದಿನಾಂಕ ನಿಗದಿಪಡಿಸಿಲ್ಲ. ಮನೆಗೆ ಬಂದಾಗಲೂ ದಾಖಲೆಗಳನ್ನು ಕೊಟ್ಟು ಮಾಡಿಸಬಹುದಾಗಿದೆ ಎಂದು ಜನರಿಗೆ ಹೇಳುತ್ತಿದ್ದೇವೆ. ಆದರೆ, ಅವರು ನಮ್ಮ ಮಾತನ್ನು ಕೇಳುತ್ತಿಲ್ಲ. ಡಿ.೩೧ಕ್ಕೆ ಕೊನೆಯ ದಿನವಾಗಿದೆ. ಅದಕ್ಕಾಗಿ ಕೆವೈಸಿ ಮಾಡಿಕೊಡುವಂತೆ ಮುಗಿಬೀಳುತ್ತಿದ್ದಾರೆ ಎಂದು ಗ್ಯಾಸ್ ಏಜೆನ್ಸಿಯವರು ತಿಳಿಸಿದ್ದಾರೆ.ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಯನ್ನು ನಂಬಿ ಬೆಳಗ್ಗೆಯಿಂದ ಸಂಜೆಯವರೆಗೂ ಅಂಗಡಿಗಳ ಎದುರು ಜನರು ಕ್ಯೂ ನಿಲ್ಲುತ್ತಿದ್ದಾರೆ. ಜನರ ಒತ್ತಡಕ್ಕೆ ಮಣಿದು ಕೆವೈಸಿ ಮಾಡಿಕೊಡುತ್ತಿದ್ದೇವೆ. ಆದರೆ, ಜನರು ಮಾತ್ರ ದಿನೇ ದಿನೇ ಹೆಚ್ಚಾಗುತ್ತಿದ್ದಾರೆಯೇ ವಿನಃ ಕಡಿಮೆಯಾಗುತ್ತಿಲ್ಲ ಎಂದು ಹೇಳುತ್ತಿದ್ದಾರೆ.
ಗ್ಯಾಸ್ ಏಜೆನ್ಸಿಗಳೆದುರು ಜನವೋ ಜನ:ಕೆವೈಸಿ ಮಾಡಿಸಿಕೊಳ್ಳುವುದಕ್ಕೆ ನಗರ ಸೇರಿದಂತೆ ಜಿಲ್ಲೆಯ ಎಲ್ಲ ಗ್ಯಾಸ್ ಏಜೆನ್ಸಿಗಳ ಎದುರು ಜನರು ತುಂಬಿರುತ್ತಾರೆ. ನಗರದ ನೂರಡಿ ರಸ್ತೆ, ಚಾಮುಂಡೇಶ್ವರಿ ನಗರ, ಬಂದೀಗೌಡ ಬಡಾವಣೆ ಸೇರಿದಂತೆ ಎಲ್ಲೆಲ್ಲಿ ಗ್ಯಾಸ್ ಅಂಗಡಿಗಳಿವೆಯೋ ಅಲ್ಲೆಲ್ಲಾ ಜನದಟ್ಟಣೆ ಹೆಚ್ಚಾಗಿದೆ. ಇದರಿಂದ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಇದರ ಬಗ್ಗೆ ಜನರಿಗೆ ಸರಿಯಾಗಿ ಮಾಹಿತಿಯನ್ನು ನೀಡುವಲ್ಲಿಯೂ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಸೂಕ್ತ ಕ್ರಮವಹಿಸಿಲ್ಲದ ಕಾರಣ ಜನರಲ್ಲಿ ಗೊಂದಲ ಮನೆಮಾಡಿದೆ. ಗ್ಯಾಸ್ ಏಜೆನ್ಸಿಗಳ ಎದುರು ನಾಮಫಲಕ ಅಳವಡಿಸಿ ಕೆವೈಸಿ ಮಾಡಿಸುವ ಸಂಬಂಧ ಜನರಲ್ಲಿರುವ ಗೊಂದಲವನ್ನು ದೂರ ಮಾಡುವ ಕೆಲಸಕ್ಕೂ ಯಾರೂ ಮುಂದಾಗಿಲ್ಲ. ಇದರ ಬಗ್ಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ತ್ವರಿತ ಕ್ರಮ ಜರುಗಿಸುವುದು ಅಗತ್ಯವಾಗಿದೆ.
ಗ್ಯಾಸ್ ಸಬ್ಸಿಡಿದಾರರು ಕೆವೈಸಿ ಮಾಡಿಸುವುದಕ್ಕೆ ಆತುರಪಡುವುದು ಬೇಡ. ಡಿ.೩೧ ಕೊನೆಯ ದಿನವೂ ಅಲ್ಲ. ಈ ಬಗ್ಗೆ ಅಡುಗೆ ಅನಿಲ ನಿಯಂತ್ರಣ ಇಲಾಖೆಯಾಗಲೀ, ಆಹಾರ ಇಲಾಖೆಯವರಾಗಲೀ ಅಧಿಕೃತ ಪ್ರಕಟಣೆಯನ್ನೂ ಹೊರಡಿಸಿಲ್ಲ. ಕೆವೈಸಿಯನ್ನು ಮನೆಗೆ ಅಡುಗೆ ಅನಿಲ ಪೂರೈಸಲು ಬಂದಾಗಲೂ ಮಾಡಿಸಬಹುದು. ಗ್ಯಾಸ್ ಅಂಗಡಿಗಳಿಗೇ ಹೋಗಿ ಮಾಡಿಸಬೇಕಿಲ್ಲ. ಯಾರೋ ಸಾಮಾಜಿಕ ಜಾಲ ತಾಣದಲ್ಲಿ ಹರಡಿರುವ ಸುಳ್ಳು ಸುದ್ದಿಯನ್ನು ನಂಬಿ ಗಾಬರಿಗೊಳಗಾಗುವುದು ಬೇಡ.- ಎಂ.ಪಿ.ಕೃಷ್ಣಕುಮಾರ್, ಉಪ ನಿರ್ದೇಶಕರು, ಆಹಾರ ಇಲಾಖೆ