ಚಳ್ಳಕೆರೆಯಲ್ಲಿ ಶುರುವಾಯ್ತು ಗ್ಯಾಸ್ ಟ್ರಬಲ್

KannadaprabhaNewsNetwork |  
Published : Mar 25, 2026, 03:15 AM IST
ಚಿತ್ರದುರ್ಗ ಎರಡನೇ ಪುಟದ ಲೀಡ್     | Kannada Prabha

ಸಾರಾಂಶ

ವಾಣಿಜ್ಯ ಸಿಲಿಂಡರ್ ಇಲ್ಲದೇ ಹೋಟೆಲ್ ಉದ್ಯಮಕ್ಕೆ ದೊಡ್ಡ ಪೆಟ್ಟು ಬೀಳುತ್ತಿರುವ ಹೊತ್ತಿನಲ್ಲೆ ಚಳ್ಳಕೆರೆಯಲ್ಲಿ ಅಡುಗೆ ಸಿಲಿಂಡರ್ ಪಡೆಯಲು ಗ್ರಾಹಕರು ಮುಂಜಾನೆಯೇ ಗ್ಯಾಸ್ ವಿತರಣಾ ಕೇಂದ್ರದ ಮುಂದೆ ಬಂದು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಶಾಸಕರ ಭವನದ ಆಸುಪಾಸಿನಲ್ಲೇ ಇರುವ ಕೈಲಾಸ್ ಗ್ಯಾಸ್ ಏಜನ್ಸಿ ಮುಂದೆ ಮಹಿಳೆಯರು ಸೇರಿದಂತೆ ವಯಸ್ಸಾದವರೂ ಸಾಲುಗಟ್ಟಿ ಖಾಲಿ ಸಿಲಿಂಡರ್ ಗಳನ್ನು ಪಕ್ಕಕ್ಕೆ ಇಟ್ಟುಕೊಂಡು ನಿಂತಿರುವ ದೃಶ್ಯ ಸಾಮಾನ್ಯವಾಗಿದೆ. ಸಿಲಿಂಡರ್ ಸಿಗುತ್ತೋ ಇಲ್ಲವೋ? ಮನೆಯಲ್ಲಿ ಅಡುಗೆಗೆ ತೊಂದರೆ ಆದರೆ ಹೇಗಪ್ಪಾ? ಎಂಬ ಚಿಂತೆ ಮಹಿಳೆಯರನ್ನಾವರಿಸಿದೆ.

ಜಡೇಕುಂಟೆ ಮಂಜುನಾಥ್

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ವಾಣಿಜ್ಯ ಸಿಲಿಂಡರ್ ಇಲ್ಲದೇ ಹೋಟೆಲ್ ಉದ್ಯಮಕ್ಕೆ ದೊಡ್ಡ ಪೆಟ್ಟು ಬೀಳುತ್ತಿರುವ ಹೊತ್ತಿನಲ್ಲೆ ಚಳ್ಳಕೆರೆಯಲ್ಲಿ ಅಡುಗೆ ಸಿಲಿಂಡರ್ ಪಡೆಯಲು ಗ್ರಾಹಕರು ಮುಂಜಾನೆಯೇ ಗ್ಯಾಸ್ ವಿತರಣಾ ಕೇಂದ್ರದ ಮುಂದೆ ಬಂದು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಶಾಸಕರ ಭವನದ ಆಸುಪಾಸಿನಲ್ಲೇ ಇರುವ ಕೈಲಾಸ್ ಗ್ಯಾಸ್ ಏಜನ್ಸಿ ಮುಂದೆ ಮಹಿಳೆಯರು ಸೇರಿದಂತೆ ವಯಸ್ಸಾದವರೂ ಸಾಲುಗಟ್ಟಿ ಖಾಲಿ ಸಿಲಿಂಡರ್ ಗಳನ್ನು ಪಕ್ಕಕ್ಕೆ ಇಟ್ಟುಕೊಂಡು ನಿಂತಿರುವ ದೃಶ್ಯ ಸಾಮಾನ್ಯವಾಗಿದೆ. ಸಿಲಿಂಡರ್ ಸಿಗುತ್ತೋ ಇಲ್ಲವೋ? ಮನೆಯಲ್ಲಿ ಅಡುಗೆಗೆ ತೊಂದರೆ ಆದರೆ ಹೇಗಪ್ಪಾ? ಎಂಬ ಚಿಂತೆ ಮಹಿಳೆಯರನ್ನಾವರಿಸಿದೆ.

ಸಿಲಿಂಡರ್ ಪಡೆಯಲು ಆನ್ ಲೈನ್ ನಲ್ಲಿ ಬುಕ್ಕಿಂಗ್ ಮಾಡಲು ಸಮಯ ನಿಗಧಿ ಮಾಡಲಾಗಿದೆ. ಈ ಸಮಯದಲ್ಲಿ ಮಾತ್ರ ನೊಂದಾಯಿಸಿಕೊಳ್ಳಬೇಕು. ಬೇರೆ ಸಮಯದಲ್ಲಿ ಆನ್ ಲೈನ್ ಮೂಲಕ ನೊಂದಾಯಿಸಲು ಅವಕಾಶ ಇಲ್ಲ. ಮಾಹಿತಿ ಇಲ್ಲದವರು ಗ್ಯಾಸ್ ಅಂಗಡಿ ಮುಂದೆ ಬಂದು ಜಮಾಯಿಸಿದ್ದಾರೆ. ಬೆಳಗಿನ ಜಾವ 5ರಿಂದ 7ರವರೆಗೆ ಮತ್ತು ರಾತ್ರಿ 8ರಿಂದ 12ರವರೆಗೆ ಸಿಲಿಂಡರ್ ಗಾಗಿ ನೊಂದಾಯಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ, ನೊಂದಾಯಿಸಿದ ಮೇಲೆ ಸಂದೇಶ ಬರುತ್ತದೆ. ಆ ಸಂದೇಶದಲ್ಲಿ ಬುಕ್ಕಿಂಗ್ ಆಗಿದೆ ಅಂತ ಮಾತ್ರ ಇರುತ್ತದೆ. ಇದನ್ನು ತಂದು ವಿತರಕರಲ್ಲಿ ತೋರಿಸಿದರೆ ಇನ್ನೂ ನಿಮ್ಮ ಸಿಲಿಂಡರ್ ಸಿಗಲು ಎರಡು ಮೂರು ದಿನಗಳು ಬೇಕು ಎಂಬ ಉತ್ತರ ಸಿಗುತ್ತದೆ. ಇಂತಹ ಉತ್ತರಗಳಿಂದ ಗ್ರಾಹಕರು ಮತ್ತಷ್ಟು ಆತಂಕಕ್ಕೆ ಒಳಗಾಗುತ್ತಿದ್ದಾರೆ.

ಕೈಲಾಸ ಇಂಡಿಯನ್ ಗ್ಯಾಸ್ ಏಜನ್ಸಿ ತುಂಬಾ ಹಳೆಯದು. ಇಲ್ಲಿ ಗ್ರಾಹಕರಿಗೆ ಸರಿಯಾದ ಸ್ಪಂದನೆ ಸಿಗುತ್ತಿಲ್ಲ ಎಂದು ಸ್ಥಳದಲ್ಲಿ ಇದ್ದ ಅನೇಕರು ದೂರುತ್ತಿರುವುದು ಸಾಮಾನ್ಯವಾಗಿತ್ತು. ಮಂಗಳವಾರ ಮುಂಜಾನೆಯಿಂದಲೂ ಸಾಲುಗಟ್ಟಿ ನಿಂತಿರುವ ಗ್ರಾಹಕರು ತಿಂಡಿ ಊಟ ಮಾಡುವುದನ್ನು ಮರೆತು ತಮ್ಮ ಸರತಿ ಕಾಯುತ್ತಲೇ ಇದ್ದರು. ಹೋಟೇಲ್ ಉದ್ಯಮಕ್ಕೆ ಬೇಕಾಗುವ ವಾಣಿಜ್ಯ ಸಿಲಿಂಡರ್ ಗೆ ಮಾತ್ರ ಸಮಸ್ಯೆ ಆಗುತ್ತಿದೆ. ಮನೆಗೆ ಬಳಸುವ ಅಡುಗೆ ಅನಿಲಕ್ಕೆ ಸಮಸ್ಯೆ ಆಗುವುದಿಲ್ಲ ಎಂಬ ಭರವಸೆಯಿಂದ ಇದ್ದ ಗ್ರಾಹಕರು ಚಳ್ಳಕೆರೆಯ ಕೈಲಾಸ ಗ್ಯಾಸ್ ಏಜನ್ಸಿ ಮುಂದೆ ನಿಂತು ಕೈಲಾಸಕ್ಕೆ ಬಂದರೂ ಸರ್ವರ್ ಸಮಸ್ಯೆ ತಪ್ಪುತ್ತಿಲ್ಲ ಎಂದು ಬೇಸರಿಸಿಕೊಳ್ಳುತ್ತಿದ್ದಾರೆ.

ಸಿಲಿಂಡರ್ ಕೊರತೆ ಇಲ್ಲ, ಆತಂಕ ಬೇಡ

ಕೈಲಾಸ್ ಇಂಡಿಯನ್ ಗ್ಯಾಸ್ ಏಜನ್ಸಿಯಲ್ಲಿ ಸಿಲಿಂಡರ್ ಸಮಸ್ಯೆ ಇಲ್ಲ. ಆದರೆ, ಗ್ರಾಹಕರು ಆತಂಕಕ್ಕೆ ಒಳಗಾಗಬಾರದು. ಆನ್ ಲೈನ್ ಬುಕ್ಕಿಂಗ್ ಗಾಗಿ ಸಮಯ ನಿಗದಿ ಮಾಡಿರುವ ಸಮಯದಲ್ಲಿ ಗ್ರಾಹಕರು ನೊಂದಾಯಿಸಿಕೊಂಡು ಮೊಬೈಲ್‌ಗೆ ಬಂದ ಸಂದೇಶವನ್ನು ಸರಿಯಾಗಿ ಓದಿಕೊಳ್ಳಬೇಕು. ನಿಮ್ಮ ಸಿಲಿಂಡರ್ ಬುಕ್ ಆಗಿದೆ ಎಂಬ ಸಂದೇಶ ಬಂದರೆ ಅದನ್ನೇ ನೋಡಿ ಸಿಲಿಂಡರ್ ನೀಡುವುದಿಲ್ಲ. ನೊಂದಾಯಿಸಿದ ಸಂಖ್ಯೆಗೆ ವಿತರಣೆ ಮಾಡುವ ದಿನಾಂಕದ ಸಮೇತ ಸಂದೇಶ ಬರುತ್ತದೆ ಆಗ ಗ್ರಾಹಕರು ಬಂದು ಸಿಲಿಂಡರ್ ತೆಗೆದುಕೊಳ್ಳಬೇಕು.ವಿತರಣಾ ಕೇಂದ್ರದ ಸಿಬ್ಬಂದಿಯೂ ಕೂಡ ಗ್ರಾಹಕರೊಂದಿಗೆ ಸೌಹಾರ್ದತೆಯಿಂದ ವರ್ತಿಸಬೇಕು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ತಾಲೂಕು ಅಧಿಕಾರಿ ಶ್ರೀನಿವಾಸ್‌ ಹೇಳಿದರು.

ಸಿಲಿಂಡರ್ ಬುಕ್ ಮಾಡಿ ಒಂದು ವಾರ ಆದರೂ ಸಿಲಿಂಡರ್ ಬಂದಿಲ್ಲ ಅಂತ ಹೇಳುತ್ತಾರೆ. ಏನು ಮಾಡೋದು..? ಇಲ್ಲಿ ಅದೇನೋ ಸರ್ವರ್ ಸಮಸ್ಯೆ ಅಂತಾರೆ. ನಮ್ಮ ಸಮಸ್ಯೆ ಬಗೆಹರಿಸಿದರೆ ಸಾಕು. ಬೆಳಗಿನ ಜಾವಕ್ಕೆ ಎದ್ದು ಸಿಲಿಂಡರ್ ಬುಕ್ ಮಾಡೀವಿ. ಮತ್ತೆ ರಾತ್ರಿ ಹನ್ನೆರೆಡು ಗಂಟೆವರೆಗೂ ಬುಕ್ ಮಾಡೋಕೆ ಹರಸಾಹಸ ಪಟ್ಟೀವಿ. ಮೆಸೇಜೂ ಬಂದೈತೆ. ಆದರೂ ಸಿಲಿಂಡರ್ ಕೊಡುತ್ತಿಲ್ಲ.

ಚಂದ್ರಣ್ಣ ಗ್ರಾಹಕ, ಚಳ್ಳಕೆರೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಗಜೀವನ್ ರಾಂ, ಅಂಬೇಡ್ಕರ್ ಜಯಂತಿ ಅರ್ಥಪೂರ್ಣ ಆಚರಣೆ: ಜಿಲ್ಲಾಧಿಕಾರಿ ಟಿ.ವೆಂಕಟೇಶ್
ಕನ್ನಡ ಕಾವ್ಯ ಕಲಿಕೆಯಿಂದ ಸಂವೇದನೆ ಹೆಚ್ಚಳ: ಕರಿಯಪ್ಪ ಮಾಳಗಿ