ಸೋಮರಡ್ಡಿ ಅಳವಂಡಿ ಕೊಪ್ಪಳ
ಹೌದು, ಕಳೆದ ಐದು ದಿನಗಳಿಂದ ಕೊಪ್ಪಳ ಜಿಲ್ಲೆಗೆ ಒಂದೇ ಒಂದು ವಾಣಿಜ್ಯ ಬಳಕೆ ಸಿಲಿಂಡರ್ ಬಂದಿಲ್ಲ. ಹೀಗಾಗಿ, ತೀವ್ರ ಸಮಸ್ಯೆ ಎದುರಾಗಿದ್ದು, ಹೋಟೆಲ್‌ನಲ್ಲಿ ದೋಸೆ ಹಾಕುವುದನ್ನು ಕಡಿಮೆ ಮಾಡಿ, ಇತರ ಸಾಮಾನ್ಯ ತಿಂಡಿ ಮಾತ್ರ ಮಾಡುತ್ತಿದ್ದಾರೆ.
ಈಗ ಇರುವ ಸಿಲಿಂಡರ್ ಎರಡು ದಿನಗಳ ಕಾಲ ಸಾಲಬಹುದು. ಅದಾದ ಮೇಲೆ ಹೋಟೆಲ್ ಬಂದ್ ಮಾಡಬೇಕಾದ ಸ್ಥಿತಿ ನಿರ್ಮಾಣವಾಗುವುದು ಮಾತ್ರ ಗ್ಯಾರಂಟಿ.ಹೋಟೆಲ್ ಬಂದ್ ಮಾಡುವ ಬದಲು ಎಲೆಕ್ಟ್ರಿಕಲ್ ಒಲೆ ಬಳಕೆ ಮಾಡಲಾರಂಭಿಸಿದ್ದು, ಅದರಲ್ಲಿ ಬರಿ ಟಿ, ಕಾಫಿ ಮಾಡಿಕೊಡಬಹುದು ಎನ್ನುತ್ತಾರೆ ಕೊಪ್ಪಳ ಜಿಲ್ಲೆಯ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಶಶಿಕರ ಶೆಟ್ಟಿ ಅವರು.
ನಾವೇನು ಮಾಡುವ ಸ್ಥಿತಿಯಲ್ಲಿ ಇಲ್ಲ, ಒಂದೇ ಒಂದು ವಾಣಿಜ್ಯ ಬಳಕೆಯ ಸಿಲಿಂಡರ್ ಪೂರೈಕೆಯಾಗಿಲ್ಲ. ಹೀಗಾಗಿ, ನಾವು ಎಲ್ಲಿಂದ ಕೊಡುವುದು ಎನ್ನುತ್ತಾರೆ. ಅಷ್ಟಕ್ಕೂ ವಾಣಿಜ್ಯ ಬಳಕೆಯ ಇದುವರೆಗೂ ಬಂದೇ ಇಲ್ಲ. ಹೀಗಾಗಿ, ಸಮಸ್ಯೆಯಾಗಿದೆ ಎನ್ನುತ್ತಾರೆ ಸಿಲಿಂಡರ್ ವಿತರಕರು.
ಡಬಲ್ ಬುಕ್ಕಿಂಗ್:ಸಿಲಿಂಡರ್ ಅಭಾವ ಎದುರಾಗುತ್ತದೆ ಎನ್ನುವ ಗುಮಾನಿ ಈಗ ಭಾರಿ ಸಮಸ್ಯೆಯಾಗುವುದಕ್ಕೆ ಕಾರಣವಾಗಿದೆ. ಬುಕ್ಕಿಂಗ್ ಮಾಡುವವರ ಸಂಖ್ಯೆ ದುಪ್ಪಟ್ಟು ಆಗಿದ್ದರಿಂದ ಸರ್ವರ್ ಹ್ಯಾಂಗ್ ಆಗುತ್ತಿದೆ. ಸರ್ವರ್ ಕೈಕೊಡುತ್ತಿದೆ. ಇದು ಮತ್ತಷ್ಟು ಆತಂಕವನ್ನುಂಟು ಮಾಡಿದೆ. ಕೊಪ್ಪಳ ನಗರದ ಗುರುಪ್ರಸಾದ ಎಜೆನ್ಸಿಯಲ್ಲಿ ನಿತ್ಯವೂ 500 ಬುಕ್ಕಿಂಗ್ ಮಾಡುತ್ತಿದ್ದವರು ಏಕಕಾಲದಲ್ಲಿ ಸಾವಿರಕ್ಕೂ ಅಧಿಕ ಬುಕ್ಕಿಂಗ್ ಮಾಡಲು ಮುಂದಾಗಿದ್ದಾರೆ. ಹೀಗೆ ದೇಶದಾದ್ಯಂತ ಬುಕ್ಕಿಂಗ್ ದುಪ್ಪಟ್ಟಾಗಿದ್ದರಿಂದ ಬುಕ್ಕಿಂಗ್ ನಂಬರ್ ಸ್ವಿಚ್ ಆಫ್ ಎಂದು ಬರುತ್ತಿರುವುದು ಭಾರಿ ಆತಂಕವನ್ನುಂಟು ಮಾಡಿದೆ.
ಸ್ವಿಚ್ ಆಫ್:ಮನೆ ಮನೆಗೆ ಸಿಲಿಂಡರ್ ಪೂರೈಕೆ ಮಾಡುತ್ತಿದ್ದ ಡಿಲೆವರಿ ಬಾಯ್‌ಗಳ ನಂಬರ್ ಸಹ ಸ್ವಿಚ್ ಆಗಿದೆ. ಬುಕ್ಕಿಂಗ್ ನಂಬರ್ ಸ್ವಿಚ್ ಆಫ್ ಆಗುತ್ತಿದ್ದಂತೆ ಡಿಲೆವರಿ ಬಾಯ್‌ಗಳಿಗೆ ಕರೆ ಮಾಡುವವರ ಸಂಖ್ಯೆ ಮಿತಿಮೀರಿದ್ದರಿಂದ ಸಾಕುಬೇಕಾಗಿ ಅನೇಕರು ಸ್ವಿಚ್ ಮಾಡಿದ್ದಾರೆ. ಬ್ಯಾಟರಿ ಚಾರ್ಜ್ ಖಾಲಿಯಾತ್ತಿರುವುದರಿಂದ ಸ್ವಿಚ್ ಆಗುತ್ತಿವೆ ಎಂದು ಡಿಲೇವರಿ ಬಾಯ್‌ಗಳು ಹೇಳುತ್ತಿದ್ದಾರೆ.
ನಮ್ಮ ಬಳಿ ಇರುವುದು ಇನ್ನೆರಡು ದಿನಗಳ ಕಾಲ ಮಾತ್ರ ಆಗುತ್ತದೆ. ಆನಂತರ ಬಂದ್ ಮಾಡಬೇಕಾಗುತ್ತದೆ ಎಂದು ಎಲೆಕ್ಟ್ರಿಕಲ್ ಒಲೆ ಬಳಕೆ ಮಾಡುತ್ತಿದ್ದೇವೆ. ಅದರ ಮೇಲೆ ಬರಿ, ಟಿ, ಕಾಫಿ ಮಾತ್ರ ಮಾಡಬಹುದು ಎಂದು ಕೊಪ್ಪಳ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಶಶಿಕರ ಶೆಟ್ಟಿ ತಿಳಿಸಿದ್ದಾರೆ.