ಮೂಢ ನಂಬಿಕೆಯಿಂದಾಗಿ ಸರ್ಕಾರಿ ಕಟ್ಟಡ ಪಾಳು !

KannadaprabhaNewsNetwork |  
Published : Mar 12, 2026, 01:00 AM ISTUpdated : Mar 12, 2026, 09:12 AM IST
Hostel

ಸಾರಾಂಶ

ಸರ್ಕಾರಗಳು ಗ್ರಾಮೀಣ ಭಾಗದ ಬಾಲಕಿಯರ ಶಿಕ್ಷಣಕ್ಕೆ ಅನುಕೂಲವಾಗಲೆಂದು ಲಕ್ಷಾಂತರ ರುಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ವಸತಿ ನಿಲಯವೊಂದು ಮೂಢ ನಂಬಿಕೆಯ ಕಾರಣಕ್ಕೆ 8 ವರ್ಷದಿಂದ ಪಾಳು ಬಿದ್ದಿದೆ.

ಎಚ್.ಎನ್.ನಾಗರಾಜು

  ಕೊರಟಗೆರೆ :  ಸರ್ಕಾರಗಳು ಗ್ರಾಮೀಣ ಭಾಗದ ಬಾಲಕಿಯರ ಶಿಕ್ಷಣಕ್ಕೆ ಅನುಕೂಲವಾಗಲೆಂದು ಲಕ್ಷಾಂತರ ರುಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ವಸತಿ ನಿಲಯವೊಂದು ಮೂಢ ನಂಬಿಕೆಯ ಕಾರಣಕ್ಕೆ 8 ವರ್ಷದಿಂದ ಪಾಳು ಬಿದ್ದಿದೆ. ತುಮಕೂರು ಜಿಲ್ಲೆ ಕೊರಟಗೆರೆ ವತಾಲೂಕಿನ ಹೊಳವನಹಳ್ಳಿ ಹೋಬಳಿಯ ಅಕ್ಕಿರಾಂಪುರ ಗ್ರಾಮದಲ್ಲಿ ೮ ವರ್ಷಗಳ ಹಿಂದೆ ಜಿಲ್ಲಾ ಪಂಚಾಯಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ₹69 ಲಕ್ಷ ವೆಚ್ಚದಲ್ಲಿ ಕಸ್ತೂರಿ ಬಾ ಗಾಂಧಿ ಬಾಲಿಕಾ ವಿದ್ಯಾರ್ಥಿ ನಿಲಯ ನಿರ್ಮಿಸಲಾಗಿತ್ತು. ಇದರಲ್ಲಿ ವಸತಿ ಕೊಠಡಿಗಳು, ಅಡುಗೆ ಕೋಣೆ, ಶೌಚಾಲಯ ಹಾಗೂ ಸೋಲಾರ್ ವ್ಯವಸ್ಥೆಯಂತಹ ಎಲ್ಲಾ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿತ್ತು.

ಅಡ್ಡಿಯಾದ ಮೂಢ ನಂಬಿಕೆ:

ವಿದ್ಯಾರ್ಥಿ ನಿಲಯದ ಸಮೀಪದಲ್ಲೇ ಗ್ರಾಮ ದೇವತೆ ಏಳುಮಂದೆಮ್ಮನ ದೇವಸ್ಥಾನವಿದೆ. ದೇವಿಯ ಪಾರಂಪರಿಕ ಕಟ್ಟುಪಾಡುಗಳ ಪ್ರಕಾರ, ಋತು ಸ್ರಾವವಾದ ಮಹಿಳೆಯರು ಅಥವಾ ಬಾಣಂತಿಯರು ಈ ಭಾಗದಲ್ಲಿ ಸಂಚರಿಸಬಾರದು ಎಂಬ ಬಲವಾದ ನಂಬಿಕೆ ಗ್ರಾಮಸ್ಥರಲ್ಲಿದೆ. ನಿಯಮ ಮೀರಿದರೆ ದೇವಿಯ ಮುನಿಸಿಗೆ ಗುರಿಯಾಗಿ ಅನಾಹುತಗಳು ಸಂಭವಿಸಬಹುದು ಎಂಬ ಭಯವಿದೆ. ಈ ಕಾರಣದಿಂದಾಗಿ ಹೆಣ್ಣು ಮಕ್ಕಳನ್ನು ಈ ವಸತಿ ನಿಲಯಕ್ಕೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಹಿಂದಿನ ಬಿಇಒ ಹಾಗೂ ಪ್ರಸಿದ್ಧ ವಿಚಾರವಾದಿ ಹುಲಿಕಲ್ ನಟರಾಜು ಗ್ರಾಮಕ್ಕೆ ಭೇಟಿ ನೀಡಿ, ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿದ್ದರೂ ಜನರಲ್ಲಿ ಭಯ ದೂರವಾಗಿಲ್ಲ. ನಿಲಯ ಬಳಕೆಯಾಗದ ಕಾರಣ ಕಟ್ಟಡದ ಕಿಟಕಿ-ಬಾಗಿಲುಗಳು ಸಂಪೂರ್ಣ ಹಾಳಾಗಿದ್ದು, ಸೋಲಾರ್ ವ್ಯವಸ್ಥೆ ಕೂಡ ಹಾಳಾಗುತ್ತಿದೆ.

ಗ್ರಾಮದ ಮಧ್ಯಭಾಗದಲ್ಲಿರುವ ವಿದ್ಯಾರ್ಥಿ ನಿಲಯವನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಿ, ಬಾಲಕಿಯರ ವಸತಿ ನಿಲಯವನ್ನು ಗ್ರಾಮದ ಒಳಗಿನ ಸುರಕ್ಷಿತ ಜಾಗಕ್ಕೆ ಬದಲಾಯಿಸಿದರೆ, ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ಸ್ಥಳೀಯರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಹಿಂದಿನ ಕಾಲದಿಂದಲೂ ಆ ದೇವಿಗೆ ಇಲ್ಲಿನ ಜನರು ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಅದರಿಂದ ಜನರು ತಮ್ಮ ಮಕ್ಕಳನ್ನು ಇಲ್ಲಿಗೆ ಸೇರಿಸಲು ಹಿಂಜರಿಯುತ್ತಿದ್ದಾರೆ. ಗ್ರಾಮದಲ್ಲಿರುವ ಬಾಲಕರ ವಸತಿ ನಿಲಯ ಹಾಗೂ ಹೊಸ ಬಾಲಕಿಯರ ಹೊಸ ಕಟ್ಟಡವನ್ನು ಅದಲು ಬದಲು ಮಾಡಿದರೆ ಸಮಸ್ಯೆಗೆ ಪರಿಹಾರ ಸಿಗಲಿದೆ. ಆದರೆ ಅಧಿಕಾರಿಗಳು ಇದನ್ನು ಮಾಡದೆ ದಿನ ಕಳೆಯುತ್ತಿದ್ದಾರೆ.

-ಎ.ಆರ್.ಮಧುಸೂದನ್, ಗ್ರಾಪಂ ಮಾಜಿ ಸದಸ್ಯ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಬೆಂಗ್ಳೂರು-ಹೈದ್ರಾಬಾದ್‌ ಹೈಸ್ಪೀಡ್‌ ರೈಲಿಗೆ ಒಪ್ಪಿಗೆ?
ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಇನ್ಮುಂದೆ ‘ಸಮಗ್ರ ಪ್ರಗತಿ ಪತ್ರ’