ಗಿರೀಶ್ ಮಾದೇನಹಳ್ಳಿ
ಬೆಂಗಳೂರು : ವಿದೇಶಿಗರು ವೀಸಾ ಪಡೆದು ಕರ್ನಾಟಕಕ್ಕೆ ಆಗಮಿಸುವ ಮುನ್ನವೇ ಅವರು ನೆಲೆಸುವ ಸ್ಥಳ ಸೇರಿ, ಪೂರ್ವಾಪರ ಮಾಹಿತಿ ಸಂಗ್ರಹಿಸುವ ವ್ಯವಸ್ಥೆಯನ್ನು ಪೊಲೀಸರು ಹಾಗೂ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‌ಆರ್‌ಆರ್‌ಓ) ಅಧಿಕಾರಿಗಳು ಜಂಟಿಯಾಗಿ ಆರಂಭಿಸಿದ್ದಾರೆ.
ಮಾದಕ ವಸ್ತು ಮಾರಾಟ ಜಾಲದಲ್ಲಿ ವಿದೇಶಿಯರ ಬಂಧನ ಹೆಚ್ಚಾದ ಹಿನ್ನೆಲೆಯಲ್ಲಿ ವಿದೇಶಿ ಪ್ರಜೆಗಳ ಮೇಲೆ ಕಣ್ಗಾವಲು ವ್ಯವಸ್ಥೆಯನ್ನು ಪೊಲೀಸರು ಹಾಗೂ ಎಫ್‌ಆರ್‌ಆರ್‌ಒ ಅಧಿಕಾರಿಗಳು ಬಿಗಿಗೊಳಿಸಿದ್ದಾರೆ. ಈ ಮೊದಲು ರಾಜ್ಯಕ್ಕೆ ಬಂದು ನೆಲೆ ನಿಂತ ಬಳಿಕ ಎಫ್‌ಆರ್‌ಆರ್‌ಒ ಕಚೇರಿಗೆ ವಿದೇಶಿಯರು ವಿವರ ಸಲ್ಲಿಸಬೇಕಿತ್ತು. ಆದರೀಗ ಬೆಂಗಳೂರು ಸೇರಿ ರಾಜ್ಯಕ್ಕೆ ಬರುವ ವಿದೇಶಿಯರು ಸಲ್ಲಿಸುವ ದಾಖಲೆಗಳನ್ನು ಆಧರಿಸಿ ಅವರ ವಿಳಾಸ ಪರಿಶೀಲನೆ ಕಾರ್ಯ ನಡೆಸಲಾಗುತ್ತಿದೆ.
ವಿದೇಶಿ ಬಾಡಿಗೆದಾರರ ಕುರಿತು ಎಫ್‌ಆರ್‌ಆರ್‌ಓಗೆ ಕಟ್ಟಡಗಳ ಮಾಲಿಕರು ಅರ್ಜಿ ನಮೂನೆಯಲ್ಲಿ ಸಲ್ಲಿಸಬೇಕಿದೆ. ಅಲ್ಲದೆ, ಸ್ಥಳೀಯ ಪೊಲೀಸ್ ಠಾಣೆಗೂ ವಸತಿ ಹಾಗೂ ಪಿಜಿ ಕಟ್ಟಡಗಳ ಮಾಲಿಕರು ಮಾಹಿತಿ ಕೊಡಬೇಕು. ಈ ಮಾಹಿತಿ ಒದಗಿಸಲು ಅವರಿಗೆ ನಿಯಮಾನುಸಾರ ಏಳು ದಿನಗಳ ಸಮಯವಿರುತ್ತದೆ. ಆದರೆ ಬಹುತೇಕ ಮಾಲೀಕರು ಮಾಹಿತಿ ನೀಡದೆ ನಿರ್ಲಕ್ಷ್ಯತನ ತೋರುತ್ತಿದ್ದಾರೆ. ಈ ಕಾರಣಕ್ಕೆ ಈಗ ಕಟ್ಟಡಗಳ ಮಾಲಿಕರ ಮೇಲೂ ಪೊಲೀಸರು ಪ್ರಕರಣ ದಾಖಲಿಸುತ್ತಿದ್ದಾರೆ.
ಸಿಸಿಬಿ ಪ್ರಸ್ತಾವನೆ ಒಪ್ಪಿದ ಎಫ್‌ಆರ್‌ಆರ್‌ಓ:
ವಿದೇಶದ ಪ್ರಜೆಗಳ ಪೂರ್ವಾಪರ ಮಾಹಿತಿ ಸಂಗ್ರಹಿಸುವ ಸಂಬಂಧ ಬೆಂಗಳೂರು ನಗರದ ಹೆಚ್ಚುವರಿ ಆಯುಕ್ತ (ಅಪರಾಧ) ಡಾ। ಚಂದ್ರಗುಪ್ತ ಅವರು ಸಲ್ಲಿಸಿದ್ದ ವರದಿಗೆ ಎಫ್‌ಆರ್‌ಆರ್‌ಒ ಸಮ್ಮತಿಸಿದೆ. ಸಿಸಿಬಿ ವರದಿ ಅನುಸಾರ ವಿದೇಶಿಯರು ರಾಜ್ಯಕ್ಕೆ ಆಗಮಿಸುವ ಮುನ್ನವೇ ಅವರ ವಸತಿ ನೆಲೆಗಳ ಬಗ್ಗೆ ಎಫ್‌ಆರ್‌ಆರ್‌ಒ ಜಾಲಾಡುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವೀಸಾ ಅವಧಿ ಮುಗಿದರೂ ಅಕ್ರಮ ವಾಸ ಹಾಗೂ ಡ್ರಗ್ಸ್ ಮಾರಾಟ ಸೇರಿ ಕಾನೂನುಬಾಹಿರ ಚಟುಟಿಕೆಗಳಲ್ಲಿ ವಿದೇಶಿಯರು ಸಕ್ರಿಯವಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿದೇಶದ ಪ್ರಜೆಗಳ ಮೇಲಿನ ಕಣ್ಗಾವಲು ವ್ಯವಸ್ಥೆಯನ್ನು ಸುಧಾರಿಸಲು ಹೆಚ್ಚುವರಿ ಪೊಲೀಸ್ ಆಯುಕ್ತ (ಅಪರಾಧ) ಚಂದ್ರಗುಪ್ತ ಮುಂದಾದರು. ಅಂತೆಯೇ ವಿದೇಶಿ ಪ್ರಜೆಗಳು ರಾಜ್ಯಕ್ಕೆ ಆಗಮಿಸುವ ಮುನ್ನವೇ ತಾವು ಉಳಿಯುವ ಜಾಗದ ಕುರಿತು ಮಾಹಿತಿ ನೀಡಿರುತ್ತಾರೆ. ಆ ದಾಖಲೆ ಆಧರಿಸಿ ಆ ನೆಲೆಗಳ ಬಗ್ಗೆ ಪರಿಶೀಲಿಸಿ ಮಾಹಿತಿ ಸಂಗ್ರಹಿಸಬೇಕು. ಒಂದು ವೇಳೆ ತಪ್ಪು ಮಾಹಿತಿ ನೀಡಿದ್ದರೆ ಕೂಡಲೇ ಕ್ರಮ ಜರುಗಿಸಬಹುದು. ಇದರಿಂದ ಅವರ ಚಲನವಲನಗಳ ಮೇಲೆ ಕಣ್ಣಿಡಲು ಬಾತ್ಮೀದಾರರಿಗೆ ನೆರವಾಗಲಿದೆ ಎಂದು ವರದಿ ನೀಡಿದ್ದರು. ಈ ವರದಿಗೆ ಒಪ್ಪಿಗೆ ಸೂಚಿಸಿದ ಎಫ್‌ಆರ್‌ಆರ್‌ಒ ಅಧಿಕಾರಿಗಳು, ಸ್ಥಳೀಯ ಪೊಲೀಸರ ಸಹಕಾರದಲ್ಲಿ ವಿದೇಶಿಯರು ವೀಸಾ ದಾಖಲೆ ಆಧರಿಸಿ ವಾಸ್ತವ್ಯದ ಸ್ಥಳಗಳ ಪರಿಶೀಲಿಸುತ್ತಿದೆ.
ಶಿಕ್ಷಣ ಸಂಸ್ಥೆಗಳಿಗೆ ಪೊಲೀಸರ ಬಿಸಿ
ಮನೆ ಮಾಲಿಕರು ಮಾತ್ರವಲ್ಲ, ವಿದೇಶಿ ವಿದ್ಯಾರ್ಥಿಗಳ ಕುರಿತು ಮಾಹಿತಿ ನೀಡದ ಶಿಕ್ಷಣ ಸಂಸ್ಥೆಗಳಿಗೂ ಬಿಸಿ ಮುಟ್ಟಿಸಲು ಪೊಲೀಸರು ಮುಂದಾಗಿದ್ದಾರೆ.
ಶೈಕ್ಷಣಿಕ ವೀಸಾದ ನೆಪದಲ್ಲಿ ಬಂದು ಕೆಲವರು ಡ್ರಗ್ಸ್ ಮಾರಾಟದಲ್ಲಿ ನಿರತರಾಗುತ್ತಿದ್ದಾರೆ. ತಮ್ಮ ಸಂಸ್ಥೆಗಳಿಗೆ ಪ್ರವೇಶ ಪಡೆಯುವ ವಿದೇಶಿ ವಿದ್ಯಾರ್ಥಿಗಳ ಕುರಿತು ಎಫ್‌ಆರ್‌ಆರ್‌ಒ ಹಾಗೂ ಪೊಲೀಸರಿಗೆ ಶಿಕ್ಷಣ ಸಂಸ್ಥೆಗಳು ಮಾಹಿತಿ ನೀಡಬೇಕಿದೆ. ಆದರೆ ಈ ನಿಯಮವನ್ನು ಬಹುತೇಕ ಶಿಕ್ಷಣ ಸಂಸ್ಥೆಗಳು ಪಾಲಿಸುತ್ತಿಲ್ಲ. ಹೀಗಾಗಿಯೇ ಮನೆ ಮಾಲಿಕರ ಜತೆ ಶಿಕ್ಷಣ ಸಂಸ್ಥೆಗಳ ಮೇಲೂ ಕ್ರಮ ಜರುಗಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ವಿದೇಶ ಪ್ರಜೆಗಳ ಪೂರ್ವಾಪರ ಮಾಹಿತಿ ಸಂಗ್ರಹ ಹಾಗೂ ನಿಗಾ ವ್ಯವಸ್ಥೆಗೆ ಚಾಲ್ತಿಯಲ್ಲಿರುವ ನಿಯಮಗಳನ್ನೇ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ. ಇದಕ್ಕೆ ಎಫ್‌ಆರ್‌ಆರ್‌ಓ ಕೂಡ ಸಹಕಾರ ನೀಡಿದೆ.
-ಡಾ। ಚಂದ್ರಗುಪ್ತ, ಹೆಚ್ಚುವರಿ ಪೊಲೀಸ್ ಆಯುಕ್ತ (ಅಪರಾಧ), ಬೆಂಗಳೂರು ನಗರ.