ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ಭೀಮನ ಅಮಾವಾಸ್ಯೆ ಪ್ರಯುಕ್ತ ಗುರುವಾರ ಮಧ್ಯರಾತ್ರಿ ಎರಡು ಗಂಟೆಯಿಂದ ಮಧ್ಯಾಹ್ನ ೨ ಗಂಟೆವರೆಗೆ ಅಮ್ಮನವರ ಮೂಲ ಮೂರ್ತಿಗೆ ಅಭಿಷೇಕ ಮಾಡಲು ಭಕ್ತರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿತ್ತು. ಅಮಾವಾಸ್ಯೆ ಪ್ರಯುಕ್ತ ದೇವಿಗೆ ಮೂರು ಮಹಾಮಂಗಳಾರತಿ ನಡೆದವು. ಮುಂಜಾನೆ ೪.೨೮ಕ್ಕೆ ತಾಯಿಗೆ ಮೊದಲ ಮಹಾ ಆರತಿ ಜರುಗಿತು. ಬೆಳಗ್ಗೆ ೭.೨೮ಕ್ಕೆ 2ನೇ ಮಂಗಳಾರತಿ ಹಾಗೂ ಮಧ್ಯಾಹ್ನ ೧೨.೨೮ ಗಂಟೆಗೆ 3ನೇ ಮಹಾಮಂಗಳಾರತಿ ಜರುಗಿತು. ಸಹಸ್ರಾರು ಭಕ್ತರು ದೇವಿಯ ದೀಪಾರತಿಯನ್ನು ಕಣ್ತುಂಬಿಕೊಂಡರು.
ತಾಯಿಗೆ ವಿಶೇಷ ಅಭಿಷೇಕ, ಅಲಂಕಾರ, ನೂರೆಂಟು ಹಾಲರವಿ ಸೇವೆ ನಡೆಯಿತು. ಮಧ್ಯಾಹ್ನ ರಥೋತ್ಸವಕ್ಕೆ ಕ್ಷೇತ್ರದ ಧರ್ಮದರ್ಶಿ ಡಾ.ಮಲ್ಲೇಶ್ ಗುರೂಜೀ ಹಾಗೂ ಶಾಸಕ ಸಿ.ಪಿ.ಯೋಗೇಶ್ವರ್ ಚಾಲನೆ ನೀಡಿದರು. ಗರ್ಭಗುಡಿಯಲ್ಲಿರುವ ಅಮ್ಮನವರ ಮೂಲ ವಿಗ್ರಹವನ್ನು ರಥದಲ್ಲಿ ಕುಳ್ಳರಿಸಿ ದೇವಸ್ಥಾನದ ಆವರಣದಲ್ಲಿ ಮೆರವಣಿಗೆ ಮಾಡಲಾಯಿತು. ರಥೋತ್ಸವಕ್ಕೆ ಭಕ್ತರು ಹಣ್ಣು ದವನ ಎಸೆದು ಹರಕೆ ಸಲ್ಲಿಸಿದರು. ನವ ವಧು-ವರರು ರಥೋತ್ಸವದಲ್ಲಿ ಹೆಚ್ಚಾಗಿ ಭಾಗವಹಿಸಿದ್ದು, ಈ ಬಾರಿಯ ವಿಶೇಷವಾಗಿತ್ತು.ಹರಿದುಬಂದ ಭಕ್ತಸಾಗರ:
ಕೃತಕ ಜಲಪಾತ ಲೋಕಾರ್ಪಣೆ:
ಭೀಮನ ಅಮಾವಾಸ್ಯೆ ಪ್ರಯುಕ್ತ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಿರುವ ಕೃತಕ ಜಲಪಾತವನ್ನು ಶಾಸಕ ಸಿ.ಪಿ.ಯೋಗೇಶ್ವರ್ ಉದ್ಘಾಟಿಸಿದರು. ದೇವಿಯ ಹಿಂಭಾಗದಲ್ಲಿರುವ ಕೃತಕ ಪರ್ವತದ ತುದಿಯಿಂದ ನೀರು ಧುಮ್ಮಿಕ್ಕಿ ಹರಿಯುವ ವ್ಯವಸ್ಥೆ ಭಕ್ತರ ಕಣ್ಮನ ಸೆಳೆಯಿತು. ವಿಶ್ವ ಒಕ್ಕಲಿಗರ ಮಠದ ನಿಶ್ಚಲಾನಂದನಾಥ ಸ್ವಾಮೀಜಿ, ಬೇವೂರು ಮಠದ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ, ಶೀಲಾ ಯೋಗೇಶ್ವರ್, ತಹಸೀಲ್ದಾರ್ ಗಿರೀಶ್, ಡಿವೈಎಸ್ಪಿ ಗಿರಿ ಇತರರು ಉಪಸ್ಥಿತರಿದ್ದರು.‘ಗೌಡಗೆರೆ ಚಾಮುಂಡೇಶ್ವರಿ ಕ್ಷೇತ್ರ ನಮ್ಮ ಜಿಲ್ಲೆಗೆ ಒಂದು ಕಿರೀಟವಿದ್ದಂತೆ. ಲಕ್ಷಾಂತರ ಮಂದಿಯ ಆರಾಧಾನಾ ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದ ಮಟ್ಟದಲ್ಲಿ ನೆರವು ಕೊಡಿಸುವ ಜವಾಬ್ದಾರಿ ವಹಿಸುತ್ತೇನೆ. ಈಗಾಗಲೇ ಚನ್ನಪಟ್ಟಣದಿಂದ ಕ್ಷೇತ್ರಕ್ಕೆ ಬರುವ ಮುಖ್ಯ ರಸ್ತೆ ಡಾಂಬರೀಕರಣ ಹಾಗೂ ಅಭಿವೃದ್ಧಿಗೆ ೩೨ ಕೋಟಿ ರು. ಹಣ ಮಂಜೂರು ಮಾಡಿಸಲಾಗಿದೆ. ಇನ್ನುಳಿದ ಅಭಿವೃದ್ಧಿಗೂ ಸಹಕರಿಸುವೆ’.-ಯೋಗೇಶ್ವರ್, ಶಾಸಕರು‘ಪ್ರತಿವರ್ಷವೂ ಭೀಮನ ಅಮಾವಾಸ್ಯೆ ಬಹಳ ವಿಶೇಷವಾಗಿ ನಡೆಯುತ್ತದೆ. ಈ ಬಾರಿ ಲಕ್ಷಕ್ಕೂ ಅಧಿಕ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. ಯಾವುದೇ ಸಮಸ್ಯೆಯಾಗದಂತೆ ಪೊಲೀಸ್ ಇಲಾಖೆ ಸೇರಿ ತಾಲೂಕು ಆಡಳಿತ ಸಹಕಾರ ನೀಡಿದೆ. ಇದಲ್ಲದೇ ಸಾವಿರಾರು ಭಕ್ತರು ಸ್ವಯಂಸೇವಕರಾಗಿ ಕಾರ್ಯಕ್ರಮ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ಕ್ಷೇತ್ರದ ವತಿಯಿಂದ ತುಂಬು ಹೃದಯದ ಧನ್ಯವಾದಗಳು’.
- ಡಾ.ಮಲ್ಲೇಶ್ ಗುರೂಜೀ, ಕ್ಷೇತ್ರದ ಧರ್ಮದರ್ಶಿಗಳು