ಗೌರಿ ಹುಣ್ಣಿಮೆ: ಸಕ್ಕರೆ ಗೊಂಬೆಗೆ ಹೆಚ್ಚಿದ ಬೇಡಿಕೆ

KannadaprabhaNewsNetwork |  
Published : Nov 11, 2024, 01:07 AM IST
ಪೋಟೊ10ಕೆಎಸಟಿ2: ಕುಷ್ಟಗಿ ತಾಲೂಕಿನ ದೋಟಿಹಾಳದ ಈರಣ್ಣ ಖಾನಾಪೂರ ಮನೆಯಲ್ಲಿ ಸಕ್ಕರೆ ಆರತಿ ತಯಾರು ಮಾಡುತ್ತಿರುವದು.10ಕೆಎಸಟಿ2ಎ: ಕುಷ್ಟಗಿ ಪಟ್ಟಣದಲ್ಲಿ ಮಾರಾಟಕ್ಕಿಟ್ಟ ಸಕ್ಕರೆಯ ಗೊಂಬೆಗಳು. | Kannada Prabha

ಸಾರಾಂಶ

ಗೌರಿ ಹುಣ್ಣಿಮೆ ಸಮೀಪಿಸುತ್ತಿದ್ದು, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಮಹಿಳೆಯರಲ್ಲಿ ಸಡಗರ ಹಾಗೂ ಸಂಭ್ರಮ ಮನೆ ಮಾಡಿದೆ. ಇದರ ಜತೆಗೆ ಸಕ್ಕರೆಯ ಆರತಿಗೆ ಭಾರಿ ಬೇಡಿಕೆ ಬಂದಿದೆ.

ಮಹಿಳೆಯರ ಹಬ್ಬಕ್ಕೆ ಸಡಗರದ ತಯಾರಿ । ಬಗೆಬಗೆಯ ಗೊಂಬೆಗಳು ಸಿದ್ಧಕನ್ನಡಪ್ರಭ ವಾರ್ತೆ ಕುಷ್ಟಗಿ

ಗೌರಿ ಹುಣ್ಣಿಮೆ ಸಮೀಪಿಸುತ್ತಿದ್ದು, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಮಹಿಳೆಯರಲ್ಲಿ ಸಡಗರ ಹಾಗೂ ಸಂಭ್ರಮ ಮನೆ ಮಾಡಿದೆ. ಇದರ ಜತೆಗೆ ಸಕ್ಕರೆಯ ಆರತಿಗೆ ಭಾರಿ ಬೇಡಿಕೆ ಬಂದಿದೆ.

ಪಟ್ಟಣ ಸೇರಿದಂತೆ ದೋಟಿಹಾಳ, ಕೇಸೂರು, ಮುದೇನೂರು, ತಾವರಗೇರಾ ಹಾಗೂ ತಾಲೂಕಿನ ವಿವಿಧ ಗ್ರಾಮಗಳಲ್ಲಿನ ಕೆಲವು ಮನೆಗಳಲ್ಲಿ ಮಾತ್ರ ಪ್ರತಿಷ್ಠಾಪಿಸುವ ಗೌರಿ ವಿಗ್ರಹಕ್ಕೆ ಹುಣ್ಣಿಮೆ ಅಂಗವಾಗಿ ಐದು ದಿನಗಳ ಕಾಲ ರಾತ್ರಿ ಸಕ್ಕರೆ ಗೊಂಬೆಗಳಿಂದ ಆರತಿ ಬೆಳಗುವ ಮೂಲಕ ಹೆಣ್ಣು ಮಕ್ಕಳು ಹಾಗೂ ಮಹಿಳೆಯರು ಸಡಗರ ಹಾಗೂ ಸಂಭ್ರಮದಿಂದ ಆಚರಣೆ ಮಾಡುತ್ತಾರೆ.

ಸಕ್ಕರೆ ಗೊಂಬೆಗಳ ನೆನಪು:

ಸಕ್ಕರೆ ಗೊಂಬೆ ಇಲ್ಲದಿದ್ದರೆ ಗೌರಿ ಹುಣ್ಣಿಮೆ ಆಚರಣೆಯೇ ಅಪೂರ್ಣವಾದಂತೆ. ತಾಲೂಕಿನ ಅನೇಕ ಕುಟುಂಬಗಳು ಎರಡು ವಾರಗಳ ಮೊದಲೆ ಸಕ್ಕರೆ ಆರತಿ (ಗೊಂಬೆಗಳ) ತಯಾರಿಕೆಯಲ್ಲಿ ತೊಡಗಿ ಮಾರಾಟ ಮಾಡಲು ತಯಾರಿ ನಡೆಸಿದ್ದಾರೆ.

ಸಕ್ಕರೆ ಗೊಂಬೆ ತಯಾರಿಕೆ ಒಂದು ಕಲೆ. ಶುದ್ಧ ಸಕ್ಕರೆಗೆ ತಕ್ಕಂತೆ ನೀರು, ನಿಂಬೆರಸ, ಹಾಲು, ಏಲಕ್ಕಿ ಹಾಕಿ ಒಲೆಯ ಮೇಲೆ ಹದ ಬರುವ ಹಾಗೆ ಕಾಯಿಸಲಾಗುತ್ತದೆ. ಆ ಬಳಿಕ ಹದವನ್ನು ಗೊಂಬೆ ತಯಾರಿಕೆಯ ಕಟ್ಟಿಗೆ ಅಚ್ಚುಗಳಿಗೆ ಹಾಕಿದಾಗ ಕೆಲವೇ ಸಮಯದಲ್ಲಿ ಬಗೆಬಗೆಯ ಗೊಂಬೆಗಳು ಸಿದ್ಧವಾಗುತ್ತವೆ.

ವಿವಿಧ ಆಕರ್ಷಿಸುವ ವಿನ್ಯಾಸಗಳು:

ಜನರಲ್ಲಿರುವ ಭಕ್ತಿ, ಭಾವನೆಗಳಿಗೆ ತಕ್ಕಂತೆ ಶಿವ, ಪಾರ್ವತಿ, ಒಂಟೆ, ಆನೆ, ರಥ, ಅರ್ಜುನನ ಬಿಲ್ಲು, ಮಂಟಪ, ಆಂಜನೇಯ, ಬಸವಣ್ಣ, ವಿವಿಧ ರೀತಿಯ ಪಶುಪಕ್ಷಿಗಳು ಹೀಗೆ ಅನೇಕ ಕಲಾಕೃತಿಗಳಲ್ಲಿ ವಿಧ ವಿಧದ ಬಣ್ಣಗಳಲ್ಲಿ ಆಕರ್ಷಿಸುತ್ತಿವೆ.

ಹೊಸದಾಗಿ ಮದುವೆ ನಿಶ್ಚಯಗೊಂಡ ವರನ ಕಡೆಯವರು ವಧುವಿನ ಮನೆಗೆ ದಂಡಿಯ ಜೊತೆಗೆ ಸಕ್ಕರೆ ಗೊಂಬೆಗಳನ್ನು ತೆಗೆದುಕೊಂಡು ಬರುವ ಸಂಪ್ರದಾಯವು ಇಂದಿಗೂ ಮುಂದುವರಿದುಕೊಂಡು ಬಂದಿದೆ.

ಮಾರುಕಟ್ಟೆಗೆ ಲಗ್ಗೆ:

ಗೌರಿ ಹುಣ್ಣಿಮೆ ಇನ್ನೂ ನಾಲ್ಕೈದು ದಿನ ಬಾಕಿ ಇರುವಾಗಲೇ ಪಟ್ಟಣದ ಮಾರುಕಟ್ಟೆಗೆ ಸಕ್ಕರೆ ಆರತಿಗಳು ಲಗ್ಗೆ ಇಟ್ಟಿವೆ. ಸಕ್ಕರೆ ಗೊಂಬೆಯ ಆರತಿ ಒಂದು ಕೆಜಿಗೆ ₹100ರಿಂದ 120ರವೆಗೆ ಮಾರಾಟವಾಗುತ್ತಿದೆ. ಈ ವರ್ಷವೂ ದರದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಹಬ್ಬದ ದಿನದಂದು ₹120ರಿಂದ 160ರವರೆಗೆ ಮಾರಾಟ ಮಾಡಲಾಗುತ್ತದೆ ಎನ್ನುತ್ತಾರೆ ಪಟ್ಟಣದ ವ್ಯಾಪಾರಸ್ಥರು.

ನಮ್ಮ ತಾತನವರ ಕಾಲದಿಂದಲೂ ಸಕ್ಕರೆಯ ಆರತಿ ತಯಾರು ಮಾಡುತ್ತಿದ್ದು, ಆ ಸಂಪ್ರದಾಯ ಬಿಡಬಾರದು ಎಂಬ ಕಾರಣಕ್ಕೆ ಮಾಡಿಕೊಂಡು ಬರುತ್ತಿದ್ದೇವೆ ಎಂದು ದೋಟಿಹಾಳ ಗ್ರಾಮದ ಶಾಂತಮ್ಮ, ಅನಸೂಯಾ ಹಾಗೂ ವಿದ್ಯಾಶ್ರೀ ತಿಳಿಸಿದರು.

PREV

Recommended Stories

ಅಭಿಮಾನ್‌ ಸ್ಟುಡಿಯೋ ಬಳಿಯೇ ವಿಷ್ಣು ದರ್ಶನ ಕೇಂದ್ರ : ಕಿಚ್ಚ ಸುದೀಪ್‌ ಅವರಿಂದ ಜಾಗ ಖರೀದಿ
ಮುಸುಕುಧಾರಿಯು ಕಿಂದರಿ ಜೋಗಿ, ಎಸ್‌ಐಟಿ ಇಲಿ ಆಗದಿರಲಿ : ಸುರೇಶ್‌