ರಾಮನಗರ: ಸ್ವರ್ಣಗೌರಿ ಮತ್ತು ವರಸಿದ್ದಿ ವಿನಾಯಕ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಗಣೇಶ ಹಾಗೂ ಗೌರಿ ಮೂರ್ತಿಗಳ ತಯಾರಿಕೆ, ಸಂಗ್ರಹಣೆ, ಮಾರಾಟ, ಸಾಗಾಣಿಕೆ, ಪ್ರತಿಷ್ಠಾಪನೆ, ತಪಾಸಣೆ, ನಿಯಂತ್ರಣ, ವಿಸರ್ಜನೆ, ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆ ಹಾಗೂ ತಾಲೂಕು ಮಟ್ಟದ ಕಾರ್ಯಾಚರಣೆ ಮತ್ತು ಉಸ್ತುವಾರಿ ಸಮಿತಿ ರಚನೆ ಕುರಿತು ಮಾರ್ಗಸೂಚಿ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ತಿಳಿಸಿದ್ದಾರೆ.
ಮಾರ್ಗಸೂಚಿಗಳನ್ನು ತಾಲೂಕು ಮಟ್ಟದಲ್ಲಿ ಸಂಪೂರ್ಣ ಅನುಷ್ಠಾನಗೊಳಿಸಲು, ಅನುಮತಿ ನೀಡಲು ಹಾಗೂ ಹಬ್ಬದ ಪ್ರತಿಯೊಂದು ಚಟುವಟಿಕೆಗಳನ್ನು ಉಸ್ತುವಾರಿ ಮಾಡಲು ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ನಗರ ಸ್ಥಳೀಯ ಸಂಸ್ಥೆ, ವಿದ್ಯುತ್ ಇಲಾಖೆ, ಪೊಲೀಸ್ ಇಲಾಖೆ, ಅಗ್ನಿಶಾಮಕ ಇಲಾಖೆ, ಪರಿಸರ ಇಲಾಖೆ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ತಾಲೂಕು ಮಟ್ಟದ ಸಮಿತಿ ರಚಿಸಲಾಗಿದೆ.
ಅನುಸರಿಸಬೇಕಾದ ಮಾರ್ಗಸೂಚಿಗಳು:ಕರ್ನಾಟಕ ಸರ್ಕಾರ ಪರಿಸರ (ಸಂರಕ್ಷಣೆ) ಕಾಯ್ದೆ, 1986ರ ಕಲಂ 5ರ ಅಡಿಯಲ್ಲಿ ಸರ್ಕಾರಿ ಆದೇಶದ ಮೂಲಕ ಭಾರ ಲೋಹ ಆಧಾರಿತ ರಾಸಾಯನಿಕ ಬಣ್ಣಗಳಿಂದ ಲೇಪಿತವಾದ ಪಿಒಪಿ ಮೂರ್ತಿಗಳ ತಯಾರಿಕೆ, ಮಾರಾಟ ಮತ್ತು ವಿಸರ್ಜನೆ ರಾಜ್ಯಾದ್ಯಂತ ಸಂಪೂರ್ಣ ನಿಷೇಧಿಸಿ ಕಟ್ಟುನಿಟ್ಟಾಗಿ ಜಾರಿಗೊಳಿಸಲು ನಿರ್ದೇಶಿಸಿದೆ.
ನೈಸರ್ಗಿಕ ಜೇಡಿಮಣ್ಣು/ಮಣ್ಣು ಮತ್ತು ಇತರ ಜೈವಿಕವಾಗಿ ವಿಘಟನೀಯ ಪರಿಸರ ಸ್ನೇಹಿ ವಸ್ತುಗಳಿಂದ ಮೂರ್ತಿಗಳ ತಯಾರಿಕೆ ಮತ್ತು ಬಳಕೆಗೆ ಮಾತ್ರ ಅನುಮತಿ ನೀಡಬೇಕು. ನಗರ, ಪಟ್ಟಣ, ಗ್ರಾಮೀಣ ಸ್ಥಳೀಯ ಸಂಸ್ಥೆಗಳು, ಮಂಡಳಿಯ ಪ್ರಾದೇಶಿಕ ಕಚೇರಿಗಳು, ಪೊಲೀಸ್ ಇಲಾಖೆ, ಸಾರಿಗೆ ಇಲಾಖೆ (ಮೂರ್ತಿಗಳ ಸಂಚಾರ/ಸಾಗಾಣಿಕೆಗಾಗಿ) ಮತ್ತು ಇತರ ಸಂಬಂಧಪಟ್ಟ ಇಲಾಖೆಗಳೊಂದಿಗೆ ನಿಕಟ ಸಮನ್ವಯ ಸಾಧಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಹಬ್ಬಕ್ಕೆ ಮುಂಚಿತವಾಗಿಯೇ ಮೂರ್ತಿ ತಯಾರಿಕಾ ಘಟಕಗಳು, ಸಂಗ್ರಹಣಾ ಗೋದಾಮುಗಳು ಮತ್ತು ಮಾರಾಟ ಕೇಂದ್ರಗಳ ಮುಂಗಡ ತಪಾಸಣೆ ನಡೆಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ತಯಾರಿಸಿದ, ಸಂಗ್ರಹಿಸಿದ ಅಥವಾ ಮಾರಾಟಕ್ಕೆ ಇಟ್ಟಿರುವ ಪಿಒಪಿ ಮೂರ್ತಿಗಳನ್ನು ಜಪ್ತಿ ಮಾಡಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.
ಪರ ಊರುಗಳಿಂದ ಮತ್ತು ಹೊರ ರಾಜ್ಯಗಳಿಂದ ಬರುವ ಪಿಒಪಿ ವಿಗ್ರಹಗಳ ಸಾಗಾಣಿಕೆ ತಡೆಯಲು ಸಾರಿಗೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯವರು ಚೆಕ್ ಪೋಸ್ಟ್ ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಬೇಕು.
ಸಾರ್ವಜನಿಕ ಸ್ಥಳಗಳಲ್ಲಿ ವಿವಿಧ ಸಂಘ-ಸಂಸ್ಥೆಗಳು ಅಥವಾ ಸಾರ್ವಜನಿಕರು ಮೂರ್ತಿ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ಮಾಡಲು ಪೂರ್ವ ಸ್ಥಳ, ನಿಗದಿತ ದಿನ, ಸಮಯ ಕುರಿತು ಆಯೋಜಕರಿಂದ ಸೂಕ್ತ ಸುರಕ್ಷತಾ ಪ್ರಮಾಣ ಪತ್ರ ಪಡೆದು ಅನಮತಿ ನೀಡವುದು. ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡುವ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪರಿಶೀಲಿಸಿ ವಿತರಿಸಬೇಕು.
ಪಿಒಪಿ ಮೂರ್ತಿಗಳನ್ನು ನೇರ ಕೆರೆ, ನದಿ, ಕಾಲುವೆಗಳಿಗೆ ಬಿಡದಂತೆ ಕಾವೇರಿ ನೀರಾವರಿ ನಿಗಮ/ಸಣ್ಣ ನೀರಾವರಿ ನಿಗಮ ಹಾಗೂ ಸ್ಥಳೀಯ ಸಂಸ್ಥೆಗಳು ಕಟ್ಟುನಿಟ್ಟಿನ ಕ್ರಮ ವಹಿಸುವುದು. ಸ್ಥಳೀಯ ಸಂಸ್ಥೆಗಳು ತಾತ್ಕಾಲಿಕ ಕೃತಕ ವಿಸರ್ಜನಾ ತೊಟ್ಟಿಗಳನ್ನು ನಿರ್ಮಿಸಬೇಕು.
ಪರಿಸರಕ್ಕೆ ಮಾರಕ ಹಾಗೂ ಶಬ್ದ ಮಾಲಿನ್ಯ ಉಂಟು ಮಾಡುವ ಪಟಾಕಿ ಸಿಡಿಸಬಾರದು.
ವಿಸರ್ಜನಾ ಸಂದರ್ಭದಲ್ಲಿ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಹಾಗೂ ಹೆಚ್ಚುವರಿ ಪೊಲೀಸ್ ವ್ಯವಸ್ಥೆ ಮಾಡಿಕೊಳ್ಳಬೇಕು. ನಿರ್ದೇಶನಗಳನ್ನು ಉಲ್ಲಂಘಿಸುವ ವರ್ತಕರು ಅಥವಾ ಆಯೋಜಕರ ವಿರದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಎಚ್ಚರಿಕೆ ನೀಡಿದ್ದಾರೆ.ಡಿಜೆ ಮತ್ತು ಧ್ವನಿವರ್ಧಕಗಳ ನಿಯಂತ್ರಣ:
ಗಣೇಶ ವಿಗ್ರಹಗಳ ಪ್ರತಿಷ್ಠಾಪನೆ ಹಾಗೂ ಮರವಣಿಗೆ ಸಮಯದಲ್ಲಿ ಡಿಜೆ ಸೆಟ್‌ಗಳನ್ನು ಬಳಸಬಾರದು. ಧ್ವನಿವರ್ಧಕಗಳನ್ನು ಬಳಸಲು ಪೊಲೀಸ್ ಇಲಾಖೆಯ ಪೂರ್ವಾನುಮತಿ ಪಡೆಯಬೇಕು. ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆವರೆಗೆ ಧ್ವನಿವರ್ಧಕಗಳ ಬಳಕೆಗೆ ಅವಕಾಶ ಇಲ್ಲ.ಮೆರವಣಿಗೆ ಮಾರ್ಗ ಪರಿಶೀಲನೆ:
ವಿಸರ್ಜನೆ ದಿನದಂದು ಪ್ರತಿಷ್ಠಾಪನಾ ಸ್ಥಳದಿಂದ ವಿಸರ್ಜಿಸುವ ಸ್ಥಳದ ಮೆರವಣಿಗೆ- ಮಾರ್ಗವನ್ನು ಕಡ್ಡಾಯವಾಗಿ ಮೊದಲೇ ನಿಗದಿಪಡಿಸತಕ್ಕದ್ದು, ಪೊಲೀಸ್ ಇಲಾಖೆ ಖುದ್ದು ಸ್ಥಳ ಪರಿಶೀಲಿಸಿ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದಂತೆ, ವಿದ್ಯುತ್ ತಂತಿ ಹಾದು ಹೋಗುವುದನ್ನು ಪರಿಶೀಲಿಸಿ ಅನುಮತಿ ನೀಡಬೇಕು.ಶಾಂತಿ ಮತ್ತು ಕೋಮು ಸೌಹಾರ್ದತೆ:
ಮೆರವಣಿಗೆಯಲ್ಲಿ ಕೋಮು ಭಾವನೆಗಳಿಗೆ ಅಗೌರವ ಮತ್ತು ಧಕ್ಕೆ ಉಂಟು ಮಾಡುವ ಯಾವುದೇ ಪ್ರಚೋದನಾಕಾರಿ ಘೋಷಣೆಗಳಿಗೆ ಅವಕಾಶ ನೀಡಬಾರದು.7ಕೆಆರ್ ಎಂಎನ್ 2.ಜೆಪಿಜಿ
ಗಣಪತಿ ಮೂರ್ತಿಗಳು (ಸಂಗ್ರಹ ಚಿತ್ರ).