ಇಂದಿನ ಮಕ್ಕಳನ್ನು ಕೇವಲ ಅಂಕಪಟ್ಟಿಗಳಿಗೆ ಸೀಮಿತಗೊಳಿಸುತ್ತಿರುವುದರಿಂದ ಅವರು ಧರ್ಮ, ಸಂಸ್ಕಾರ, ಸಂಸ್ಕೃತಿಗಳಿಂದ ದೂರ ಉಳಿಯುತ್ತಿದ್ದಾರೆ ಎಂದು ಎಲೆರಾಂಪುರ ಮಠದ ಪೀಠಾಧ್ಯಕ್ಷ ಡಾ.ಹನುಮಂತನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಮಧುಗಿರಿ
ಇಂದಿನ ಮಕ್ಕಳನ್ನು ಕೇವಲ ಅಂಕಪಟ್ಟಿಗಳಿಗೆ ಸೀಮಿತಗೊಳಿಸುತ್ತಿರುವುದರಿಂದ ಅವರು ಧರ್ಮ, ಸಂಸ್ಕಾರ, ಸಂಸ್ಕೃತಿಗಳಿಂದ ದೂರ ಉಳಿಯುತ್ತಿದ್ದಾರೆ ಎಂದು ಎಲೆರಾಂಪುರ ಮಠದ ಪೀಠಾಧ್ಯಕ್ಷ ಡಾ. ಹನುಮಂತನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.ತಾಲೂಕಿನ ಪುರವರ ಹೋಬಳಿಯ ಹಳೇ ತಿಮ್ಮನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶ್ರೀ ಬಸವೇಶ್ವರ ಸ್ವಾಮಿಯ ದೇಗುಲ ಜಿರ್ಣೋದ್ದಾರ, ಶಿಖರ ಕಳಶ ಸ್ಥಾಪನೆ ಹಾಗೂ ಕುಂಬಾಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದು ಮಕ್ಕಳಲ್ಲಿ ದ್ವೇಷದ ಬೀಜಗಳನ್ನು ಬಿತ್ತಲಾಗುತ್ತಿದೆ. ಅವರಲ್ಲಿ ಸಂಸ್ಕಾರ, ಸಂಸ್ಕೃತಿಗಳ ಬಗ್ಗೆ ಅರಿವು ಇಲ್ಲದಂತೆ ಆಗುತ್ತಿದೆ. ಮಕ್ಕಳಲ್ಲಿ ನೆಲ, ಜಲ, ಜ್ಞಾನದ ಬಗ್ಗೆ ತಿಳಿ ಹೇಳಬೇಕಾಗಿದೆ. ಇಂದು ಗ್ರಾಮಗಳಲ್ಲಿ ಗುರು ಹಿರಿಯರನ್ನು ಗೌರವಿಸುವಂತಹ ವಾತಾವರಣ ಸೃಷ್ಟಿಸಬೇಕಾಗಿದೆ. ತಂದೆ-ತಾಯಿಗಳನ್ನು ಅನಾಥಾಶ್ರಮಗಳಲ್ಲಿ ದಾಖಲಿಸಬಾರದು ಹಾಗೂ ದೇಶಕ್ಕಾಗಿ ಹೋರಾಡಿದ ಮಹನೀಯರ ತತ್ವ ಆದರ್ಶಗಳನ್ನು ನಾವೆಲ್ಲ ಆಳವಡಿಸಿಕೊಳ್ಳಕಾಗಿದೆ. ದೇವತಾ ಆರಾಧನೆಗಳಲ್ಲಿ ನಾವು ನೀವು ಭಾಗವಹಿಸಿರುವುದು ಬಹಳ ಹಿಂದಿನ ಪೂರ್ವ ಜನ್ಮದ ಪುಣ್ಯದ ಫಲವಾಗಿದೆ. ದಾನ ಧರ್ಮಗಳನ್ನು ಮಾಡಲು ಮುಂದಾಗಿ ಉತ್ತಮ ಸಮಾಜದ ನಿರ್ಮಾಣಕ್ಕೆ ಕೈ ಜೋಡಿಸಬೇಕು. ಇಂದು ಸುಳ್ಳು ಎಂಬುದು ಮನೆ ದೇವರಾಗಿರುವುದು ವಿಪರ್ಯಾಸವಾಗಿದೆ. ಗ್ರಾಮಸ್ಥರೆಲ್ಲ ಸೇರಿ ಉತ್ತಮವಾಗಿ ದೇವಾಲಯವನ್ನು ನಿರ್ಮಿಸಿದ್ದು ಸುಂದರವಾಗಿ ಮೂಡಿ ಬಂದಿದೆ. ಪೂಜಾ ವಿಧಿ ವಿಧಾನಗಳೊಂದಿಗೆ ದೇವರ ಆರಾಧನೆಯಲ್ಲಿ ತೊಡಗಿಕೊಳ್ಳುವಂತೆ ಕರೆ ನೀಡಿದರು.
ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಮುರುಳೀಧರ ಹಾಲಪ್ಪ ಮಾತನಾಡಿ, ದೇವಾಲಯಗಳ ಪೂಜಾ ಕೈಂಕರ್ಯದಲ್ಲಿ ಕೇವಲ ನೀವು ತೊಡಗಿಸಿಕೊಂಡರೆ ಸಾಲದು. ಜೊತೆಯಲ್ಲಿ ಮುಂದಿನ ಪೀಳಿಗೆಯ ಯುವ ಸಮೂಹವಾದ ಮಕ್ಕಳನ್ನು ಕರೆತಂದು ದೇವಾಲಯದ ವಿಧಿ, ವಿಧಾನ, ಪೂಜಾ ಪದ್ಧತಿಗಳನ್ನು ಅವರಿಗೆ ಪರಿಚಯಿಸುವಂತಹ ಕಾರ್ಯವಾಗಬೇಕಾಗಿದೆ. ಇಂದಿನ ಯುಗದಲ್ಲಿ ಮೊಬೈಲ್ ಬಳಕೆ ಹೆಚ್ಚಾಗುತ್ತಿದ್ದು ಯುವ ಸಮೂಹವು ಮೊಬೈಲ್ ನಲ್ಲಿಯೇ ಶುಭ ಸಂದೇಶಗಳನ್ನು ಹಾಕಿ ಶುಭ ಹಾರೈಸುವಂತಹ ವಾತಾವರಣ ಸೃಷ್ಟಿಯಾಗಿದೆ. ಇಂತಹ ಪದ್ಧತಿಗಳ ಆಚರಣೆ ನಮಗೆ ಬೇಡವಾಗಿದೆ. ಮುಂದಿನ ದಿನಗಳಲ್ಲಿ ಹಾಲಪ್ಪ ಪ್ರತಿಷ್ಠಾನದ ವತಿಯಿಂದ ದೇವಾಲಯದ ಮಂಡಳಿಯವರು ಆಚರಿಸುವಂತಹ ಪ್ರತಿಭಾ ಪುರಸ್ಕಾರಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಹೇಳಿದರು.ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಕೆ.ಸಿ.ತಿಮ್ಮಾರೆಡ್ಡಿ, ಉಪಾಧ್ಯಕ್ಷ ಎಚ್.ಕೆ. ವನರಾಜು, ಕಾರ್ಯದರ್ಶಿ ಎಚ್.ಟಿ. ಮಂಜುನಾಥ್, ಖಜಾಂಚಿ ವಿ. ಬಸವರಾಜು, ಜಂಟಿ ಕಾರ್ಯದರ್ಶಿ ಹರಿಪ್ರಸಾದ್, ಪದಾಧಿಕಾರಿಗಳಾದ ನಿವೃತ್ತ ಮುಖ್ಯ ಶಿಕ್ಷಕ ಶಿವಕುಮಾರ್, ಸೋಮಶೇಖರ್, ಕೋಟೆಕಲ್ಲಪ್ಪ, ಮಂಜುನಾಥ್, ಕಾಂತರಾಜು, ಜಗನ್ನಾಥ್, ಪ್ರಸನ್ನಕುಮಾರ್, ಜಗನ್ನಾಥ್, ರಂಗನಾಥ್, ಪುಟ್ಟನಂಜಪ್ಪ, ದೊಡ್ಡನರಸಿಂಹಯ್ಯ, ರಂಗರಾಜು, ನಾಗರತ್ನಮ್ಮ, ರಮೇಶ್, ಹನುಮಂತರಾಯ, ಡಿ.ಆರ್. ರಮೇಶ್ ಹಾಗೂ ನೂರಾರು ಮಂದಿ ಭಕ್ತರು ಇದ್ದರು.