ಗೌರಿ ಹುಣ್ಣಿಮೆ: 3 ಲಕ್ಷಕ್ಕೂ ಅಧಿಕ ಜನ ಭಕ್ತರಿಂದ ಹುಲಿಗೆಮ್ಮ ದರ್ಶನ

KannadaprabhaNewsNetwork |  
Published : Nov 16, 2024, 12:35 AM IST
ಭಕ್ತರು ಹುಲಿಗೆಮ್ಮ ದೇವಿ ದರ್ಶನ ಪಡೆದರು. | Kannada Prabha

ಸಾರಾಂಶ

ಗೌರಿ ಹುಣ್ಣಿಮೆ ಪ್ರಯುಕ್ತ ಶುಕ್ರವಾರ ಶ್ರೀ ಹುಲಿಗೆಮ್ಮ ದೇವಿ ದರ್ಶನಕ್ಕೆ 3 ಲಕ್ಷಕ್ಕೂ ಅಧಿಕ ಭಕ್ತಾದಿಗಳು ಆಗಮಿಸಿ ಅಮ್ಮನವರ ದರ್ಶನ ಪಡೆದರು.

ಮುನಿರಾಬಾದ್: ಗೌರಿ ಹುಣ್ಣಿಮೆ ಪ್ರಯುಕ್ತ ಶುಕ್ರವಾರ ಶ್ರೀ ಹುಲಿಗೆಮ್ಮ ದೇವಿ ದರ್ಶನಕ್ಕೆ 3 ಲಕ್ಷಕ್ಕೂ ಅಧಿಕ ಭಕ್ತಾದಿಗಳು ಆಗಮಿಸಿ ಅಮ್ಮನವರ ದರ್ಶನ ಪಡೆದರು.

ಸತತ ಎರಡನೇ ಬಾರಿ ಹುಣ್ಣಿಮೆ ದಿನದಂದು 3 ಲಕ್ಷಕ್ಕೂ ಅಧಿಕ ಭಕ್ತರು ಅಮ್ಮನವರ ದರ್ಶನ ಪಡೆದಿದ್ದಾರೆ. ಕಳೆದ ತಿಂಗಳು ಸೀಗಿ ಹುಣ್ಣಿಮೆಗೆ 3 ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಿದ್ದರು.

ಸೀಗಿ ಹುಣ್ಣಿಮೆಯಿಂದ ಭಾರತ ಹುಣ್ಣಿಮೆ ವರೆಗೂ ಅಮ್ಮನವರ ದರ್ಶನ ಪಡೆದರೆ ತಮ್ಮ ಇಷ್ಟಾರ್ಥಗಳು ಈಡೇರುತ್ತೇವೆ ಎಂಬ ಬಲವಾದ ನಂಬಿಕೆ ಭಕ್ತರಲ್ಲಿದ್ದು, ಹುಣ್ಣಿಮೆ ದಿನದಂದು ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಶುಕ್ರವಾರ ಬೆಳಗಿನ ಜಾವ ದೇವಸ್ಥಾನದ ಅರ್ಚಕರು ಬಾಗಿಲು ತೆರೆಯುತ್ತಿದ್ದಂತೆ ಭಕ್ತಾದಿಗಳು ಅಮ್ಮನವರ ದರ್ಶನವನ್ನು ಪ್ರಾರಂಭಿಸಿದರು.

ಸುಮಾರು 10ಕ್ಕೆ ಅಮ್ಮನವರ ದರ್ಶನ ಪಡೆದ ಭಕ್ತಾದಿಗಳ ಸಂಖ್ಯೆ 1 ಲಕ್ಷ ದಾಟಿತ್ತು. ಮಧ್ಯಾಹ್ನ 1ರ ಸುಮಾರಿಗೆ 2 ಲಕ್ಷ, ಸಂಜೆ 4ರ ವೇಳೆಗೆ 3 ಲಕ್ಷ ದಾಟಿತು.

ರಾಜ್ಯ ರಸ್ತೆ ಸಾರಿಗೆ ನಿಗಮ ಗಂಗಾವತಿ, ಕೊಪ್ಪಳ ಹಾಗೂ ಹೊಸಪೇಟೆಯಿಂದ ಹುಲಿಗಿ ಗ್ರಾಮಕ್ಕೆ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಿತ್ತು. ಇದಲ್ಲದೆ ಈ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಓಡುತ್ತಿರುವ ರೈಲ್ವೆ ಸೌಲಭ್ಯದಿಂದಾಗಿ ದೂರದೂರುಗಳಿಂದ ಭಕ್ತಾದಿಗಳು ಆಗಮಿಸುತ್ತಿದ್ದಾರೆ. ಇದಲ್ಲದೆ ಭಕ್ತರು ಟಂಟಂ, ಟಾಟಾ ಏಸ್ ಹಾಗೂ ಮಿನಿ ಲಾರಿಗಳಲ್ಲಿ ಆಗಮಿಸಿ ದೇವಸ್ಥಾನದ ಹಿಂದೆ ಬೀಡು ಬಿಟ್ಟು ನದಿಯಲ್ಲಿ ಸ್ನಾನ ಮಾಡಿ ದರ್ಶನ ಪಡೆಯುತ್ತಿದ್ದಾರೆ.

ಟ್ರಾಫಿಕ್ ಜಾಮ್ ಸಮಸ್ಯೆ

ಹುಣ್ಣಿಮೆ ದಿನದಂದು ಭಾರಿ ಪ್ರಮಾಣದಲ್ಲಿ ಭಕ್ತಾದಿಗಳು ಹುಲಿಗಿ ಗ್ರಾಮಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಹಿಟ್ನಾಳ್ ಕಡೆಯಿಂದ ಹುಲಿಗೆ ಬರುವ ರಸ್ತೆಯಲ್ಲಿ ಭಾರಿ ಟ್ರಾಫಿಕ್ ಜಾಮ್ ಸಂಭವಿಸಿತು. ಇದಲ್ಲದೆ ಹುಲಿಗಿ ಗ್ರಾಮದಲ್ಲಿ ಪದೇ ಪದೇ ರೈಲ್ವೆ ಗೇಟ್ ಹಾಕುತ್ತಿದ್ದ ಹಿನ್ನೆಲೆಯಲ್ಲಿ ಟ್ರಾಫಿಕ್ ಜಾಮ್ ಸಂಭವಿಸಿತು. ಜನ ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿ ಒದ್ದಾಡಿದರು.

ಹುಲಿಗಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಭರದಿಂದ ನಡೆದಿದ್ದು, ಇದು ಪೂರ್ಣಗೊಳ್ಳಲು ಎಂಟರಿಂದ ಹತ್ತು ತಿಂಗಳು ಬೇಕಾಗುತ್ತದೆ. ಅಲ್ಲಿ ವರೆಗೆ ಭಕ್ತರಿಗೆ ಈ ಟ್ರಾಫಿಕ್ ಜಾಮ್ ತಪ್ಪಿದ್ದಲ್ಲ. ಹುಲಿಗಿ ಹಿಟ್ನಾಳ್ ರಸ್ತೆ ತುಂಬಾ ಇಕ್ಕಟ್ಟಾಗಿದ್ದು, ಇದರಿಂದ ರಸ್ತೆ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಈ ರಸ್ತೆ ಅಗಲ ಹೆಚ್ಚಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದು, ಹುಲಿಗಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕಾಗಿದೆ.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ