ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು, ಆಟೋರಿಕ್ಷಾ ಚಾಲಕರು ಕಡ್ಡಾಯವಾಗಿ ಚಾಲನಾ ಪರವಾನಗಿ ಹೊಂದಿರಬೇಕು. ಅತಿವೇಗದ ಚಾಲನೆ ಮಾಡಬಾರದು, ಮದ್ಯಪಾನ ಮಾಡಿ ವಾಹನ ಚಲಾಯಿಸಬಾರದು ಹಾಗೂ ವಾಹನದ ಸಾಮರ್ಥ್ಯ ಮತ್ತು ನಿಯಮಗಳಲ್ಲಿ ಅನುಮತಿಸಿರುವುದಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಸಾಗಿಸಬಾರದು ಎಂದು ಸೂಚಿಸಿದರು. ಅಲ್ಲದೆ, ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ರಸ್ತೆ ಅಪಘಾತಗಳನ್ನು ತಡೆಗಟ್ಟಲು ಸಹಕರಿಸಬೇಕು ಎಂದು ತಿಳಿಸಿದರು.
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ನಗರದ ಪೊಲೀಸ್ ಠಾಣೆ ವ್ಯಾಪ್ತಿ ಆಟೋರಿಕ್ಷಾ ಚಾಲಕರಿಗೆ ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿಯಮಗಳ ಪಾಲನೆ ಕುರಿತು ನಗರ ಪೊಲೀಸರು ಜಾಗೃತಿ ಮೂಡಿಸಿದರು.
ನಗರ ಪೊಲೀಸ್ ಠಾಣೆಗೆ ಆಟೋ ಚಾಲಕರನ್ನು ಕರೆಸಿಕೊಂಡು ಹಾಗೂ ವಿವಿಧ ಆಟೋ ನಿಲ್ದಾಣಗಳಿಗೆ ಭೇಟಿ ನೀಡಿದ ವೃತ್ತ ನಿರೀಕ್ಷಕ ಅಂಜನ್ ಕುಮಾರ್ ಅವರು, ಆಟೋರಿಕ್ಷಾಗಳ ದಾಖಲೆಗಳನ್ನು ಪರಿಶೀಲಿಸಿದರು. ವಾಹನಗಳ ಅಗತ್ಯ ದಾಖಲೆಗಳು ಸಮರ್ಪಕವಾಗಿರುವುದನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಪರಿಶೀಲನೆ ನಡೆಸಿ, ಚಾಲಕರಿಗೆ ಸಂಚಾರ ನಿಯಮಗಳ ಕುರಿತು ಮಾಹಿತಿ ನೀಡಿ ಸಂಚಾರಿ ನಿಯಮ ಉಲ್ಲಂಘನೆ ಮಾಡದಂತೆ ಖಡಕ್ ಎಚ್ಚರಿಕೆ ನೀಡಿದರು.
ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು, ಆಟೋರಿಕ್ಷಾ ಚಾಲಕರು ಕಡ್ಡಾಯವಾಗಿ ಚಾಲನಾ ಪರವಾನಗಿ ಹೊಂದಿರಬೇಕು. ಅತಿವೇಗದ ಚಾಲನೆ ಮಾಡಬಾರದು, ಮದ್ಯಪಾನ ಮಾಡಿ ವಾಹನ ಚಲಾಯಿಸಬಾರದು ಹಾಗೂ ವಾಹನದ ಸಾಮರ್ಥ್ಯ ಮತ್ತು ನಿಯಮಗಳಲ್ಲಿ ಅನುಮತಿಸಿರುವುದಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಸಾಗಿಸಬಾರದು ಎಂದು ಸೂಚಿಸಿದರು. ಅಲ್ಲದೆ, ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ರಸ್ತೆ ಅಪಘಾತಗಳನ್ನು ತಡೆಗಟ್ಟಲು ಸಹಕರಿಸಬೇಕು ಎಂದು ತಿಳಿಸಿದರು.
ಸಾರ್ವಜನಿಕರ ಸುರಕ್ಷತೆಯಲ್ಲಿ ಆಟೋ ಚಾಲಕರ ಪಾತ್ರ ಮಹತ್ವದ್ದಾಗಿದ್ದು, ವಾಹನ ಚಲಾಯಿಸುವಾಗ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು. ಸಂಚಾರ ನಿಯಮಗಳ ಉಲ್ಲಂಘನೆಯಿಂದ ಉಂಟಾಗುವ ಅಪಾಯಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಸಿಪಿಐ ಅಂಜನ್ ಕುಮಾರ್ ಜಾಗೃತಿ ಮೂಡಿಸಿದರು.
ಅತಿವೇಗದ ಚಾಲನೆ, ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಹಾಗೂ ವಾಹನದ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ಯುವುದು ಅಪಾಯಕಾರಿ. ನಿಯಮಬಾಹಿರ ಚಟುವಟಿಕೆಗಳು ಇಂತಹ ಚಾಲಕರ ಜೀವಕ್ಕೆ ಮಾತ್ರವಲ್ಲದೆ ಪ್ರಯಾಣಿಕರು ಮತ್ತು ಇತರೆ ರಸ್ತೆ ಬಳಕೆದಾರರ ಸುರಕ್ಷತೆಗೂ ಅಪಾಯ ಉಂಟುಮಾಡುತ್ತವೆ. ಆದ್ದರಿಂದ ಚಾಲಕರು ಯಾವುದೇ ಕಾರಣಕ್ಕೂ ಸಂಚಾರ ನಿಯಮಗಳನ್ನು ನಿರ್ಲಕ್ಷಿಸಬಾರದು ಎಂದು ಎಚ್ಚರಿಸಿದರು.
ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಿ:
ಆಟೋ ಚಾಲಕರು ಪ್ರತಿನಿತ್ಯ ಸಾರ್ವಜನಿಕರೊಂದಿಗೆ ನೇರ ಸಂಪರ್ಕ ಹೊಂದಿರುತ್ತಾರೆ. ಹೀಗಾಗಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಅವರ ಗಮ್ಯಸ್ಥಾನಕ್ಕೆ ತಲುಪಿಸುವುದು ಚಾಲಕರ ಪ್ರಮುಖ ಜವಾಬ್ದಾರಿಯಾಗಿದೆ. ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ ಸೇರಿದಂತೆ ಗಮನ ಬೇರೆಡೆ ಸೆಳೆಯುವ ಚಟುವಟಿಕೆಗಳಿಂದ ದೂರವಿರಬೇಕು. ರಸ್ತೆ ಪರಿಸ್ಥಿತಿಯನ್ನು ಗಮನಿಸಿ ವೇಗ ನಿಯಂತ್ರಣ ಮಾಡಬೇಕು ಹಾಗೂ ಸಂಚಾರ ಸಂಕೇತಗಳನ್ನು ಪಾಲಿಸಬೇಕು ಎಂದು ತಿಳಿಸಿದರು.
ಅಪಘಾತ ತಡೆಗೆ ಪೊಲೀಸರ ಜಾಗೃತಿ:
ಸಂಚಾರ ನಿಯಮಗಳ ಕುರಿತು ಅರಿವು ಮೂಡಿಸುವುದು ಮತ್ತು ನಿಯಮ ಉಲ್ಲಂಘನೆಗಳನ್ನು ತಡೆಯುವುದು ಇಂತಹ ಜಾಗೃತಿ ಕಾರ್ಯಕ್ರಮಗಳ ಮುಖ್ಯ ಉದ್ದೇಶವಾಗಿದೆ. ಆಟೋ ಚಾಲಕರು ನಿಯಮಗಳನ್ನು ಪಾಲಿಸುವುದರ ಜೊತೆಗೆ ಸಾರ್ವಜನಿಕರಿಗೂ ರಸ್ತೆ ಸುರಕ್ಷತೆಯ ಮಹತ್ವವನ್ನು ತಿಳಿಸುವ ಮೂಲಕ ಜವಾಬ್ದಾರಿ ಯುತ ಸಂಚಾರ ವ್ಯವಸ್ಥೆ ರೂಪಿಸಲು ಸಹಕರಿಸಬೇಕು ಎಂದು ಪೊಲೀಸರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಗರ ಪೊಲೀಸ್ ಠಾಣೆಯ ಪಿಎಸ್ಐ ವರಲಕ್ಷ್ಮಿ, ಅಪರಾಧ ವಿಭಾಗದ ಪಿಎಸ್ಐ ಲಲಿತಮ್ಮ ಹಾಗೂ ಆಟೋ ಚಾಲಕರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.