ದೊಡ್ಡಬಳ್ಳಾಪುರ: ಜಗತ್ತಿಗೆ ಅಹಿಂಸೆ, ಕರುಣೆ ಮತ್ತು ಶಾಂತಿ ಮಾರ್ಗ ತೋರಿದ ಮಹಾನ್ ದಾರ್ಶನಿಕ ಗೌತಮ ಬುದ್ಧ ಎಂದು ತಹಸೀಲ್ದಾರ್ ಡಾ.ಮಲ್ಲಪ್ಪ ಕೆ. ಯರಗೋಳ ತಿಳಿಸಿದರು.
ಅಸಮಾನತೆ, ಕಂದಾಚಾರಗಳಂತಹ ಆಚರಣೆಗಳಿಂದ ನರಳುತ್ತಿದ್ದ ಜಗತ್ತಿಗೆ ಜ್ಞಾನದ ಬೆಳಕಾಗಿ, ಶಾಂತಿ, ಸಮಾನತೆಯ ದಾರಿ ತೋರಿದವರು ಭಗವಾನ್ ಬುದ್ಧ. ಜಗತ್ತಿಗೆ ಶಾಂತಿ ಬೋಧಿಸಿದ ಬುದ್ಧನ ಆದರ್ಶ, ವಿಚಾರಗಳ ಬಗ್ಗೆ ಎಲ್ಲರಿಗೂ ಅರಿವು ಮೂಡಿಸಬೇಕಾಗಿದೆ ಎಂದು ಹೇಳಿದರು.
ದೊಡ್ಡಬಳ್ಳಾಪುರ ತಾಲೂಕು ಬೌದ್ಧ ದಮ್ಮ ಸಮಾಜದ ಕಾರ್ಯದರ್ಶಿ ರಾಜೇಂದ್ರ ಮಾತನಾಡಿ, ದೊಡ್ಡಬಳ್ಳಾಪುರ ಅಂಬೇಡ್ಕರ್ ಭವನದಲ್ಲಿ ಜು.29 ರಂದು ಬುಧವಾರ ಸಂಜೆ ಗಂಟೆಗೆ ದಮ್ಮಚಕ್ಕ ಪವತ್ತನ ದಿನಾಚರಣೆ ನಡೆಯಲಿದೆ. ಗೌತಮ ಬುದ್ಧನು ಜ್ಞಾನೋದಯದ ನಂತರ ತನ್ನ ಮೊದಲ ಐದು ಶಿಷ್ಯರಿಗೆ ಸಾರಾನಾಥದ ಜಿಂಕೆ ವನದಲ್ಲಿ ಮೊದಲ ಧರ್ಮೋಪದೇಶ ನೀಡಿದ ಪವಿತ್ರ ದಿನವನ್ನು ದಮ್ಮ ಚಕ್ಕ ಪವತ್ತನ ದಿನಾಚರಣೆ ಎಂದು ಆಷಾಢ ಹುಣ್ಣಿಮೆಯಂದು ಆಚರಿಸಲಾಗುತ್ತದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸಿ.ಎನ್.ಶೇಷಾದ್ರಿ, ತಾ.ಕಸಾಪ ಅಧ್ಯಕ್ಷ ಪಿ.ಗೋವಿಂದರಾಜು, ಬೌದ್ಧ ದಮ್ಮ ಸಮಾಜ ಅಧ್ಯಕ್ಷ ನಾಗರಾಜು, ವಿಶ್ವ ಜ್ಞಾನಿ ಸೇವಾ ಟ್ರಸ್ಟ್ ಪದಾಧಿಕಾರಿಗಳಾದ ನಾರಾಯಣಪ್ಪ, ಚಿಕ್ಕಣ್ಣ, ಗಂಗಬೈಲಪ್ಪ, ವಿದ್ಯಾರ್ಥಿ ನಿಲಯ ಮೇಲ್ವಿಚಾರಕ ಶಿವಪ್ಪ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ದೊಡ್ಡಬಳ್ಳಾಪುರದ ಸರ್ಕಾರಿ ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಗೌತಮ ಬುದ್ದನ ಜೀವನ ಚರಿತ್ರೆ ಕುರಿತ ಪ್ರಬಂಧ ಸ್ಪರ್ಧೆ ಉದ್ಘಾಟನಾ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಡಾ.ಮಲ್ಲಪ್ಪ ಕೆ ಯರಗೋಳ ಮಾತನಾಡಿದರು.