ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿಯಾಗಿರುವ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ಗುರುವಾರ ಶ್ರೀಮಠದಲ್ಲಿ ಬಸವಪಟ ಆರೋಹಣ ಮಾಡುವ ಮೂಲಕ ವಿಧ್ಯುಕ್ತ ಚಾಲನೆ ನೀಡಲಾಯಿತು.
ನಮ್ಮದು ಕೃಷಿ ಪ್ರಧಾನ ನಾಡು ಆಗಿರುವುದರಿಂದ ನಂದಿ, ಈಶ್ವರ, ಸೂರ್ಯ, ಚಂದ್ರ, ವರುಣ, ಪ್ರಕೃತಿ ಪೂಜೆ ಸಲ್ಲಿಸುವದು ನಮ್ಮ ಪ್ರಥಮ ಕರ್ತವ್ಯವಾಗಿದೆ. ಶ್ರೀ ಗವಿಸಿದ್ಧನ ಸನ್ನಿಧಿಯ ಈ ನಾಡಿನಲ್ಲಿ ಸದಾಕಾಲ ಉತ್ತಮ ಮಳೆ, ಉತ್ತಮ ಬೆಳೆಯಾಗಿ ರೈತಾಪಿ ವರ್ಗಕ್ಕೆ ಸುಖ, ಶಾಂತಿ, ಸಮೃದ್ಧಿ ಸದಾ ದೊರೆಯಲೆಂಬ ಆಶಯಕ್ಕಾಗಿ ಬಸವಪಟ ಆರೋಹಣ ಕಾರ್ಯಕ್ರಮವು ಜರುಗುತ್ತದೆ. ಶ್ರೀಮಠದ ಜಾತ್ರಾ ಪರಂಪರೆಯಲ್ಲಿ ಬಸವಪಟ ಆರೋಹಣ ಕಾರ್ಯಕ್ರಮದ ಮೂಲಕವೇ ಜಾತ್ರೆಗೆ ವಿಧ್ಯುಕ್ತವಾಗಿ ಚಾಲನೆ ಸಿಕ್ಕಂತಾಗುತ್ತದೆ.
ಕಳಸಾರೋಹಣ:ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಗವಿಸಿದ್ಧೇಶ್ವರ ಗದ್ದುಗೆಯ ಗೋಪುರದಲ್ಲಿ ಪಂಚಕಳಸಗಳು ಗುರುವಾರ ಶೋಭಾಯಮಾನವಾದವು. ಸಾಮಾನ್ಯವಾಗಿ ಎಲ್ಲ ಮಠಮಾನ್ಯಗಳಿಗೆ ಒಂದೇ ಕಳಸವಿರುತ್ತದೆ. ಆದರೆ ಕೊಪ್ಪಳದ ಗವಿಮಠದ ಕರ್ತೃ ಗವಿಸಿದ್ಧೇಶ್ವರ ಗದ್ದುಗೆಯ ಮೇಲೆ ಐದು ಕಳಸಗಳು ಶೋಭಾಯಮಾನ ಆಗಿರುತ್ತವೆ. ರಥೋತ್ಸವದ ದಿನ ಸಮೀಪಿಸುತ್ತಿರುವಾಗ ಈ ಐದು ಕಳಸ ಒಂದು ವಾರದ ಮೊದಲೇ ಕೆಳಗೆ ಇಳಿಸಿಕೊಂಡು ಆಯಾ ಓಣಿಯ ದೈವದವರು ಕೊಂಡೊಯ್ಯುತ್ತಾರೆ.ನಂತರ ಅವುಗಳನ್ನು ಶೃಂಗಾರಗೊಳಿಸಿ ಗವಿಮಠಕ್ಕೆ ಶ್ರದ್ಧಾಭಕ್ತಿಯಿಂದ ಭಜನೆ, ಡೋಲು ವಾದ್ಯಗಳೊಂದಿಗೆ ತರುತ್ತಾರೆ. ಈ ಪಂಚ ಕಳಸಗಳನ್ನು ಆಯಾ ಓಣಿಯ ದೈವದವರು ಗವಿಮಠಕ್ಕೆ ತಂದು ಪೂಜೆ ಮಾಡಿಸಿ ಕಳಸಾರೋಹಣ ಮಾಡುವುದು ಪ್ರತಿವರ್ಷದ ಸಂಪ್ರದಾಯ. ಅದರಂತೆ ಗುರುವಾರ ಕತೃ ಗದ್ದುಗೆಯ ಗೋಪುರದಲ್ಲಿ ಪಂಚ ಕಳಸ ಆರೋಹಣ ಮಾಡಲಾಯಿತು. ಪಂಚ ಕಳಸಾರೋಹಣ ಬಳಿಕ ಸ್ಥಳೀಯ ಎಲ್ಲ ಜಂಗಮ ಪುಂಗವರಿಗೆ ಭೋಜನ ಪ್ರಸಾದ, ಜಂಗಮರಾಧನೆ ಕಾರ್ಯ ನಡೆದು ಬಂದಿದೆ.
ಮಹಾದಾಸೋಹಕ್ಕೆ ಚಾಲನೆ:ಮಹಾದಾಸೋಹ ಮಂಟಪದಲ್ಲಿ ಮಹಾದಾಸೋಹಕ್ಕೆ ಬಿಜಕಲ್‍ನ ಶ್ರೀ ಶಿವಬಸವ ಮಹಾಸ್ವಾಮಿಗಳು ಚಾಲನೆ ನೀಡಿದರು. ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ್, ಎಸ್ಪಿ ರಾಮ್ ಎಲ್.ಅರಸಿದ್ಧಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸೇರಿದಂತೆ ಭಕ್ತರ ಭಾಗವಹಿಸಿದ್ದರು. ಸುಮಾರು 6 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಮಹಾದಾಸೋಹದಲ್ಲಿ ಸಾವಿರಾರು ಭಕ್ತರು ಏಕಕಾಲಕ್ಕೆ ಪ್ರಸಾದ ಸ್ವೀಕರಿಸಲು ವ್ಯವಸ್ಥೆ ಮಾಡಲಾಗಿದೆ. ಈ ವರ್ಷ ಸುಮಾರು 76 ಕೌಂಟರ್ ನಿರ್ಮಿಸಲಾಗಿದೆ. ಅದರಲ್ಲಿ 40 ಕೌಂಟರ್ ಅನ್ನ ಸಾರು, 36 ಕೌಂಟರ್‌ಗಳಲ್ಲಿ ಸಿಹಿ ಪದಾರ್ಥ ವಿತರಣೆಗೆ ಮಾಡಲಾಗುತ್ತದೆ.ಈ ಮಹಾದಾಸೋಹದಲ್ಲಿ ದಿನಕ್ಕೆ ಸುಮಾರು 300 ರಿಂದ 400ರ ವರೆಗೆ ಭಕ್ತರು ಪ್ರಸಾದ ತಯಾರಿಸುವ ಸೇವೆ ಮಾಡಲಿದ್ದಾರೆ. ಪ್ರಸಾದ ವಿತರಣೆಯಲ್ಲಿ ಸುಮಾರು 500 ರಿಂದ 600 ಭಕ್ತರು ಪಾಲ್ಗೊಳ್ಳುವರು. ಜಾತ್ರಾ ಮಹೋತ್ಸವ ಪ್ರಾರಂಭದಿಂದ ಮುಕ್ತಾಯದವರೆಗೆ ಮಹಾದಾಸೋಹ ಮಂಟಪದಲ್ಲಿ ಸುಮಾರು 25 ಸಾವಿರ ಭಕ್ತರು ವಿವಿಧ ಸೇವೆಯಲ್ಲಿ ಪಾಲ್ಗೊಳ್ಳುವರು. ಜಾತ್ರೆಯ ಅವಧಿಯಲ್ಲಿ ಸುಮಾರು 15 ರಿಂದ 18 ಲಕ್ಷ ಭಕ್ತರು ಪ್ರಸಾದ ಸ್ವೀಕರಿಸುವ ನಿರೀಕ್ಷೆ ಇದೆ.
ಬೃಹತ್ ರಕ್ತದಾನ ಶಿಬಿರ: ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಕೊಪ್ಪಳ ಜಿಲ್ಲಾ ಘಟಕ ಹಾಗೂ ಜಗದ್ಗುರು ಗವಿಸಿದ್ಧೇಶ್ವರ ಆಯುರ್ವೇದಿಕ್ ಮಹಾವಿದ್ಯಾಲಯದಿಂದ ಜ.5 ರಿಂದ ಜ. 8ರ ವರೆಗೆ 4 ದಿನಗಳ ಕಾಲ ಜಗದ್ಗುರು ಗವಿಸಿದ್ಧೇಶ್ವರ ಆಯುರ್ವೇದಿಕ ಮಹಾವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ.