ಕೊಪ್ಪಳ:
ನನ್ನ ಮಗ ಏನೂ ತಪ್ಪು ಮಾಡಿಲ್ಲ. ಪರಿಸ್ಪರ ಇಬ್ಬರು ಪ್ರೀತಿಸಿದ್ದರು. ಇದೀಗ ನನ್ನ ಮಗ ಮಾತ್ರ ಲವ್ ಮಾಡಿದ್ದು ಎಂದು ಹೇಳಲಾಗುತ್ತಿದೆ. ಇದರ ಹಿಂದೆ ಇರುವವರಿಗೆ ಶಿಕ್ಷೆಯಾಗಬೇಕು. ಹೀಗಾಗಿ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು.ತ್ರಿಕೋನ ಪ್ರೇಮ ಪ್ರಕರಣದಲ್ಲಿ ಕೊಲೆಯಾದ ಗವಿಸಿದ್ದಪ್ಪ ನಾಯಕ ತಾಯಿ ದೇವಮ್ಮನ ನುಡಿ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಲೆ ಖಂಡಿಸಿ ಆ.11ರಂದು ಸಮಾಜದ ವತಿಯಿಂದ ನಡೆಯುವ ಹೋರಾಟಕ್ಕೆ ಕುಟುಂಬದ ಬೆಂಬಲವಿದೆ ಎಂದು ಹೇಳುತ್ತಲೇ ಕಣ್ಣೀರು ಹಾಕಿದರು. ನಮಗೆ ನ್ಯಾಯ ಕೊಡಿ, ಪರಿಹಾರ ಬೇಡ. ಇಲ್ಲದಿದ್ದ ನಿಮ್ಮ ಪರಿಹಾರ ಹಾಕಿ ಪೆಟ್ರೋಲ್ ಸುರಿದುಕೊಂಡು ಸುಟ್ಟುಕೊಳ್ಳುತ್ತೇವೆ ಎಂದು ಎಚ್ಚರಿಸಿದರು.ನನ್ನ ಮಗನನ್ನು ಮೋಸದಿಂದ ಹಿಂಬದಿಯಿಂದ ಬಂದು ಹೊಡೆದಿದ್ದಾರೆ. ಅವನ ಮುಂದೆ ಬಂದಿದ್ದರೆ ಅವನೇ ಹೊಡೆಯುತ್ತಿದೆ. ನನ್ನ ಮಗ ಆ ಯುವತಿಯನ್ನು ಪ್ರೀತಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಆದರೆ, ಅವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಹೀಗಾಗಿ ಪಂಚಾಯಿತಿಯೂ ಆಗಿತ್ತು. ಆದರೂ ಸಹ ಗವಿಸಿದ್ದಪ್ಪ ತಪ್ಪು ಮಾಡಿದ್ದಾನೆಂದು ಹೇಳುತ್ತಿದ್ದಾರೆ. ಇದನ್ನು ಕೇಳಿ ಸಂಕಟವಾಗುತ್ತಿದೆ. ಇವರಿಂದ (ಪೊಲೀಸರು) ಏನೂ ಆಗುವುದಿಲ್ಲ. ಗಂಟೆಗೊಂದು ಹೇಳಿಕೆ ಕೊಡುತ್ತಿದ್ದಾರೆ.ಹೀಗಾಗಿ ಈ ಪ್ರಕರಣವನ್ನು ಸಿಬಿಐಗೆ ವಹಿಸಿದರೆ ಸತ್ಯಾಂಶ ಹೊರಬರಲಿದೆ ಎಂದು ಒತ್ತಾಯಿಸಿದರು.
ಕೊಲೆಯಾದ ದಿನ ಯುವತಿ ಗವಿಸಿದ್ದಪ್ಪನಿಗೆ 19 ಬಾರಿ ಕಾಲ್ ಮಾಡಿದ್ದಾರೆ. ಹೀಗಾಗಿ ನನ್ನ ಮಗ ಅಲ್ಲಿಗೆ ಹೋಗಿದ್ದಾನೆ. ಆ ಯುವತಿಯನ್ನು ಬಂಧಿಸಿ ತನಿಖೆಗೆ ಒಳಪಡಿಸಬೇಕೆಂದು ದೇವಮ್ಮ ಮನವಿ ಮಾಡಿದರು.ಗವಿಸಿದ್ದಪ್ಪನ ತಂದೆ ನಿಂಗಜ್ಜ ಮಾತನಾಡಿ, ಮಗನ ಕೊಲೆಗೆ ನ್ಯಾಯಕ್ಕಾಗಿ ಸೋಮವಾರ ನಡೆಯುವ ಪ್ರತಿಭಟನೆಯಲ್ಲಿ ಭಾಗವಹಿಸುತ್ತೇವೆ. ಆದರೆ, ನಾವು ಯಾವುದೇ ರಾಜಕೀಯ ಪಕ್ಷದ ಅಡಿ ನಡೆಯುವ ಪ್ರತಿಭಟನೆಗೆ ಭಾಗವಹಿಸುವುದಿಲ್ಲ. ಅದು ಪಕ್ಷಾತೀತ ಮತ್ತು ಜಾತ್ಯತೀತವಾಗಿ ನಡೆಯಲಿ. ಇದಕ್ಕೂ ನ್ಯಾಯ ಸಿಗದೆ ಇದ್ದರೆ ಕುಟುಂಬಸ್ಥರೇ ತಹಸೀಲ್ದಾರ್ ಕಚೇರಿ ಎದುರು ನಿರಂತರ ಪ್ರತಿಭಟನೆ ನಡೆಸುತ್ತೇವೆಂದು ತಿಳಿಸಿದರು.
ಪರಸ್ಪರರು ಇಬ್ಬರು ಪ್ರೀತಿಸಿದ್ದರು. ಆದರೆ, ಆಕೆ ಅಪ್ರಾಪ್ತೆಯಾಗಿದ್ದರಿಂದ ನಾವು ವಿರೋಧಿಸಿದ್ದೆವು. ಅವಳಿಗೆ 18 ವರ್ಷ ಆಗುವರೆಗೂ ಮಗನಿಗೆ ಕಾಯುವಂತೆ ಹೇಳಿದ್ದೆವು. ಅಷ್ಟರೊಳಗೆ ಎಲ್ಲರೂ ಸೇರಿಕೊಂಡು ಕೊಂದು ಹಾಕಿದರು ಎಂದು ಕಣ್ಣೀರು ಹಾಕಿದರು.ಬೃಹತ್ ಹೋರಾಟ:ಗವಿಸಿದ್ದಪ್ಪ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಮತ್ತು ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಆ. 8ರಂದು ನಗರದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯನ್ನು ಪೊಲೀಸರ ಮನವಿಯಂತೆ ಆ. 11ಕ್ಕೆ ಮುಂದೂಡಲಾಗಿದೆ. ಅಂದು ರಾಜ್ಯದ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆಂದು ವಾಲ್ಮಿಕಿ ನಾಯಕ ಮಹಾಸಭಾದ ಜಿಲ್ಲಾಧ್ಯಕ್ಷ ಕೆ.ಎನ್. ಪಾಟೀಲ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಸಂಘಟನೆಯ ಬಾವುಟ, ರಾಜಕೀಯ ಪಕ್ಷಗಳ ಬ್ಯಾನರ್ ತರುವಂತಿಲ್ಲ. ಇದು ಜಾತ್ಯತೀತವಾಗಿ ನಡೆಯುವ ಪ್ರತಿಭಟನೆಯಾಗಿದೆ ಎಂದು ತಿಳಿಸಿದರು.ಮುಖಂಡ ನಾಗರಾಜ ಬಿಲ್ಗಾರ ಮಾತನಾಡಿ, ಇದು ಪಕ್ಷಾತೀತ ಮತ್ತು ಜಾತ್ಯತೀತವಾಗಿ ನಡೆಯುವ ಪ್ರತಿಭಟನೆಯಾಗಿದ್ದು ಭಾಗವಹಿಸಿದವರು ಮಾತನಾಡಲು ಸ್ವಾತಂತ್ರ್ಯ ಇರುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಹಾಸಭಾ ಸಂಘಟನಾ ಕಾರ್ಯದರ್ಶಿ ಸುರೇಶ ಡೊಣ್ಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ನಾಯಕ, ಗೀತಾ ಮುತ್ತಾಳ, ಗವಿಸಿದ್ದಪ್ಪ ಸಹೋದರಿಯರಾದ ಅನ್ನಪೂರ್ಣ, ಉಮಾ ಇದ್ದರು.