ಕೊಪ್ಪಳ: ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳ ಕನಸಿನ ಕೂಸು, ಕೊಪ್ಪಳದಿಂದ 11 ಕಿಮೀ ದೂರದಲ್ಲಿರುವ ವಿದ್ಯಾರ್ಥಿನಿಯರ ಉಚಿತ ವಸತಿ ಕಾಲೇಜು "ಶ್ರೀ ಗವಿಸಿದ್ಧೇಶ್ವರ ಗುರುಕುಲ " ಆರಂಭವಾಗಿದೆ. ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿನಿಯರಿಗಾಗಿ ಉಚಿತ ವಸತಿಸಹಿತ ಪಿಯು ಹೈಟೆಕ್ ಕಾಲೇಜನ್ನು ಮಠಾಧೀಶರು ಮತ್ತು ಜನಪ್ರತಿನಿಧಿಗಳ ಸಮ್ಮುಖದಲ್ಲಿ ಭಾನುವಾರ ಲೋಕಾರ್ಪಣೆ ಮಾಡಲಾಯಿತು.
ಸುಮಾರು 48 ಎಕರೆ ವಿಸ್ತಾರವಾದ ಕ್ಯಾಂಪಸ್‌ನಲ್ಲಿ ₹60 ಕೋಟಿ ವೆಚ್ಚದಲ್ಲಿ ತಲೆ ಎತ್ತಿರುವ ಹೈಟೆಕ್ ವಸತಿ ಕಾಲೇಜು ಯಾವುದೇ ಖಾಸಗಿ ಶಿಕ್ಷಣ ಸಂಸ್ಥೆಗಳಿಗಿಂತಲೂ ಕಡಿಮೆ ಇಲ್ಲ ಎನ್ನುವಂತಿದೆ.
ವಿದ್ಯಾರ್ಥಿನಿಯರಿಗೆ ಇಲ್ಲಿ ಪಿಯು ವಿಜ್ಞಾನ, ಕಲಾ ವಿಭಾಗ ಇದ್ದು, ಜತೆಗೆ ಸಿಇಟಿ, ನೀಟ್, ಜೆಇಇ ಸೇರಿದಂತೆ ಹಲವಾರು ವೃತ್ತಿ ತರಬೇತಿ ಕೋರ್ಸ್ ಉಚಿತ ಕೋಚಿಂಗ್ ಸಹ ಲಭ್ಯವಿರುತ್ತದೆ. ಕಾಲೇಜು, ತರಬೇತಿ ಮತ್ತು ವಸತಿ ಸಂಪೂರ್ಣ ಉಚಿತವಾಗಿರುತ್ತದೆ. ಆದರೆ, ವಿದ್ಯಾರ್ಥಿನಿಯರು ಊಟದ ವೆಚ್ಚ ಭರಿಸಬೇಕಾಗುತ್ತದೆ.ವಿದ್ಯಾಕಾಶಿಯಾಗಲಿ: ಸಂಸದ ಬಸವರಾಜ ಬೊಮ್ಮಾಯಿ ಗುರುಕುಲ ಲೋಕಾರ್ಪಣೆ ಮಾಡಿ ಮಾತನಾಡಿ, ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳು ಕೈಗೊಳ್ಳುತ್ತಿರುವ ಶೈಕ್ಷಣಿಕ ಕ್ರಾಂತಿಯಿಂದ ಕೊಪ್ಪಳ ವಿದ್ಯಾಕಾಶಿಯಾಗಲಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಅಪಾರ ಸಂಖ್ಯೆಯಲ್ಲಿ ಆಶ್ರಯ ಕೋರಿ ಬರುತ್ತಾರೆ. ಆದರೆ, ಅವರಿಗೆ ಅನ್ನ ನೀಡಬಹುದಾದರೂ ಆಶ್ರಯ ನೀಡುವುದು ಕಷ್ಟವಾಗುತ್ತದೆ ಎಂದು ದುಃಖ ವ್ಯಕ್ತಪಡಿಸಿದ್ದರು. ಅದನ್ನು ನೋಡಿದ ನಾನು ತಡಮಾಡದೆ ಸರ್ಕಾರದಿಂದ ಅಲ್ಪಪ್ರಮಾಣದ ನೆರವು ನೀಡಿದ್ದೆ. ಆದರೆ, ಇಷ್ಟು ದೊಡ್ಡ ಪ್ರಮಾಣದ ಶಿಕ್ಷಣ ಸಂಸ್ಥೆಯೊಂದು ಮಹಿಳೆಯರಿಗಾಗಿ ತಲೆ ಎತ್ತಲಿದೆ ಎಂದು ನಾನು ಅಂದುಕೊಂಡಿರಲಿಲ್ಲ. ಅವರ ಶುದ್ಧ ಮನಸ್ಸಿನ ಸೇವೆಗಾಗಿ ಅಪಾರ ಪ್ರಮಾಣದ ನೆರವು ಹರಿದುಬರುತ್ತಿದೆ. ಅದರಲ್ಲೂ ಈಗ ಅವರು ಮಹಿಳೆಯರಿಗಾಗಿ ವಸತಿ ಪಿಯು ಕಾಲೇಜು ತೆರೆದಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ವೀರಶೈವ ಲಿಂಗಾಯತ ಶಿಕ್ಷಣ ಸಂಸ್ಥೆಗಳು ಶಿಕ್ಷಣಕ್ಕೆ ಕೊಟ್ಟಷ್ಟು ಕೊಡುಗೆ ಮತ್ಯಾವ ಸಂಸ್ಥೆಯೂ ನೀಡಿಲ್ಲ. ದುರ್ದೈವ ಎಂದರೆ ಅದರಿಂದ ಶಿಕ್ಷಣ ಪಡೆದವರು ಮರಳಿ ಏನು ಕೊಡುವುದು ಬೇಡ, ಕನಿಷ್ಠ ಸ್ಮರಿಸುವಿಕೆಯೂ ಇಲ್ಲದಿರುವುದು ನೋವಿನ ಸಂಗತಿ ಎಂದರು.
ಶಾಸಕ ರಾಘವೇಂದ್ರ ಹಿಟ್ನಾಳ, ವಿಪ ಸದಸ್ಯೆ ಹೇಮಲತಾ ನಾಯಕ, ಐಎಎಸ್ ಟಾಪರ್ ಚಿನ್ಮಯಿ ಪ್ರಶಾಂತ ಮಾತನಾಡಿದರು.
ಸಂಸದ ರಾಜಶೇಖರ ಹಿಟ್ನಾಳ, ಹಾಲಪ್ಪ ಆಚಾರ್, ಶರಣೇಗೌಡ ಪಾಟೀಲ್, ಸಂಗಣ್ಣ ಕರಡಿ, ಜಿ. ವೀರಪ್ಪ ಕೆಸರಟ್ಟಿ, ಪರಣ್ಣ ಮುನವಳ್ಳಿ, ಕೆ. ಶರಣಪ್ಪ, ಸಿ.ವಿ. ಚಂದ್ರಶೇಖರ, ಮಲ್ಲಿಕಾರ್ಡುನ ನಾಗಪ್ಪ, ಶಿವರಾಮಗೌಡ, ಡಾ. ಕೆ. ಬಸವರಾಜ, ಬಸವರಾಜ ದಢೇಸ್ಗೂರು, ಸುರೇಶ ಭೂಮರಡ್ಡಿ, ನವೀನ ಗುಳಗಣ್ಣವರ, ಪ್ರಸನ್ನ ಗಡಾದ, ವಿ.ಆರ್. ಪಾಟೀಲ್, ಎಸ್.ಆರ್. ಪಾಟೀಲ್ ಇದ್ದರು.
ಗುರುಕುಲ ಲೋಕಾರ್ಪಣೆಯಲ್ಲಿ ಗವಿಸಿದ್ಧೇಶ್ವರ ಮಹಾಸ್ವಾಮೀಜಿ
ಗವಿಸಿದ್ಧೇಶ್ವರ ಗುರುಕುಲ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಐದು ಸಾವಿರ ವಿದ್ಯಾರ್ಥಿಗಳನ್ನು ಪೂರ್ಣಗೊಳಿಸುವುದೇ ನಮ್ಮ ಆಶಯವಾಗಿತ್ತು. ಆದರೆ, ವಿದ್ಯಾರ್ಥಿನಿಯರಿಗೂ ಇಂಥದ್ದೊಂದು ವಸತಿ ಕಾಲೇಜು ಮಾಡಬೇಕು ಎಂದಾಗ ವಿದ್ಯಾರ್ಥಿನಿಯರಿಗಾಗಿ ಗುರುಕುಲ ಮಾಡುವ ಬಯಕೆ ಮಾಡಲಾಯಿತು. ಎಲ್ಲರ ಕಳಕಳಿ ಮತ್ತು ಕೊಡುಗೈ ದಾನಿಗಳಿಂದ ಇಂಥದ್ದೊಂದು ದೊಡ್ಡ ಶಿಕ್ಷಣ ಸಂಸ್ಥೆ ಹೆಣ್ಣುಮಕ್ಕಳಿಗಾಗಿ ತಲೆ ಎತ್ತಿದೆ ಎಂದರು.
ಮರಿಶಾಂತವೀರ ಮಹಾಸ್ವಾಮಿಜಿಗಳ ಸತ್ಪರಂಪರೆ ಮತ್ತು ಶಿವಶಾಂತವೀರ ಮಹಾಸ್ವಾಮೀಜಿಗಳು ಹಾಕಿಕೊಟ್ಟ ದಾರಿಯಂತೆ ನಾವು ನಡೆಯುತ್ತಿದ್ದೇವೆ ಎಂದರು.ಇದನ್ನು ನಾನು ನಿರಂತರವಾಗಿ ನಡೆಸಿಕೊಂಡು ಹೋಗುವುದು ಹೇಗೆ ಎನ್ನುವ ಚಿಂತೆ ನನಗೆ ಇಲ್ಲ. ಗವಿಸಿದ್ಧೇಶ್ವರ ಜೋಳಿಗೆಯ ಶಕ್ತಿ ಇರುವವರೆಗೂ ನಡೆಸಿಕೊಂಡು ಹೋಗುತ್ತದೆ. ಅದು ಇಲ್ಲದ ಕಾಲಕ್ಕೆ ಯಾರಿಗೆ ಶಕ್ತಿ ಇರುತ್ತದೆ ಅವರಿಗೆ ಅರ್ಪಿಸುತ್ತೇನೆ ಎಂದು ಹೇಳಿದರು.
ಈಗ ವಿದ್ಯಾರ್ಥಿನಿಯರಿಗಾಗಿ ಇಂಥದ್ದೊಂದು ಶಿಕ್ಷಣ ಸಂಸ್ಥೆ ಮಾಡಿದ್ದೇವೆ. ಮುಂದೆ ಗವಿಸಿದ್ಧ ಶಕ್ತಿ ನೀಡಿದರೆ ವಿದ್ಯಾರ್ಥಿಗಳಿಗೂ ಮಾಡುತ್ತೇನೆ. ಜೋಳಿಗೆ ಶಕ್ತಿ ಇರುವವರೆಗೂ ಹೀಗೆ ಮಾಡುತ್ತಲೇ ಇರುತ್ತೇನೆ ಎಂದರು.