ಮುಳಗುಂದದಲ್ಲಿ ನಿರ್ಮಿಸಲಾಗುವ 2X20 ಎಂವಿಎ ಸಾಮರ್ಥ್ಯದ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರವು ಈ ಪ್ರದೇಶದ ವಿದ್ಯುತ್ ಸರಬರಾಜು ವ್ಯವಸ್ಥೆಗೆ ಮಹತ್ವದ ಬಲ ತುಂಬಲಿದೆ.
ಮುಳಗುಂದ: ಪಟ್ಟಣದಲ್ಲಿ ವಿದ್ಯುತ್ ಗ್ರಿಡ್ ಸ್ಥಾಪನೆ ಕಳೆದ 20 ವರ್ಷಗಳ ಹೋರಾಟದ ಫಲವಾಗಿದೆ. ಇಂದು ಸಾಕಾರವಾಗುತ್ತಿರುವುದು ಅತ್ಯಂತ ಸಂತಸದ ಸಂಗತಿ. ಅಂದಾಜು ₹16.71 ಕೋಟಿ ಮೊತ್ತದ ಯೋಜನೆ ಈ ಭಾಗದ ರೈತರು ಹಾಗೂ ಸಾರ್ವಜನಿಕರಿಗೆ ಬಹಳ ಉಪಯುಕ್ತವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ತಿಳಿಸಿದರು.
ಪಟ್ಟಣದಲ್ಲಿ ಭಾನುವಾರ ಅಂದಾಜು ₹16.71 ಕೋಟಿ ವೆಚ್ಚದ 2X20 ಎಂವಿಎ ಸಾಮರ್ಥ್ಯದ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರ ನಿರ್ಮಾಣ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.ಮುಳಗುಂದದಲ್ಲಿ ನಿರ್ಮಿಸಲಾಗುವ 2X20 ಎಂವಿಎ ಸಾಮರ್ಥ್ಯದ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರವು ಈ ಪ್ರದೇಶದ ವಿದ್ಯುತ್ ಸರಬರಾಜು ವ್ಯವಸ್ಥೆಗೆ ಮಹತ್ವದ ಬಲ ತುಂಬಲಿದೆ. ವಿಶೇಷವಾಗಿ ರೈತರಿಗೆ ನಿರಂತರ ಮತ್ತು ಗುಣಮಟ್ಟದ ವಿದ್ಯುತ್ ಲಭ್ಯವಾಗುವ ಮೂಲಕ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ದೊರೆಯಲಿದೆ. ಈ ಗ್ರಿಡ್ ಕಾಮಗಾರಿ ಒಂದು ವರ್ಷದೊಳಗೆ ಪೂರ್ಣಗೊಳ್ಳುವ ವಿಶ್ವಾಸವಿದ್ದು, ಮುಂದಿನ ವರ್ಷದ ಮೇ 1ರೊಳಗೆ ಲೋಕಾರ್ಪಣೆ ಮಾಡುವ ಗುರಿ ಹೊಂದಲಾಗಿದೆ ಎಂದರು.ಮುಳಗುಂದದ ಜನರು ಜಾಣರು. ದೊಡ್ಡ ಮೊತ್ತದ ಯೋಜನೆಗಳನ್ನು ಒಟ್ಟಾಗಿ ಸಾಧಿಸುವ ಸಾಮರ್ಥ್ಯ ಹೊಂದಿದ್ದಾರೆ. ಇದೇ ಕಾರಣಕ್ಕೆ ವಿಜ್ ಟು ವ್ಯಾಲಿ ಯೋಜನೆಯಂತಹ ₹20 ಕೋಟಿ ಯೋಜನೆಯೂ ಯಶಸ್ವಿಯಾಗಿ ಅನುಷ್ಠಾನಗೊಂಡಿದೆ ಎಂದರು.
ನಂತರ ಜೈನ ಬಸದಿ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು. ಪಟ್ಟಣದ ಅಂಗನವಾಡಿ ಕೇಂದ್ರ-323 ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಯಿತು. ಅಲ್ಲದೇ ಶ್ರೀ ಪುರದ ಬಸವೇಶ್ವರ ಸಮುದಾಯ ಭವನ ನಿರ್ಮಾಣಕ್ಕೂ ಶಂಕುಸ್ಥಾಪನೆ ನೆರವೇರಿಸಲಾಯಿತು.
ಹೆಸ್ಕಾಂ ಅಧ್ಯಕ್ಷ ಅಜೀಮ್‌ಪೀರ್ ಎಸ್. ಖಾದ್ರಿ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ, ಜಿಪಂ ಮಾಜಿ ಅಧ್ಯಕ್ಷ ಸಿದ್ದು ಪಾಟೀಲ, ಮುಳಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಸುಂಕಾಪುರ, ಶಿವಣ್ಣ ನೀಲಗುಂದ, ಎಂ.ಡಿ. ಬಟ್ಟೂರ, ವಿಜಯ ನೀಲಗುಂದ, ಇಮ್ಮಣ್ಣ ಚವಳಿಕಾಯಿ, ಎನ್.ಆರ್. ದೇಶಪಾಂಡೆ, ಅಶೋಕ ಹುಣಸಿಮರದ, ಅಜ್ಜಪ್ಪ ಹುಗ್ಗೇಣ್ಣವರ, ಬಸವರಾಜ ಬಾತಾಖಾನಿ, ಬಸವರಾಜ ಬಡ್ನಿ, ಮನಸ್ಸೂರ ಹಣಗಿ, ಕೆ.ಎಲ್. ಕರಿಗೌಡರ, ಪ್ರವಾಸೋದ್ಯಮ ಇಲಾಖೆಯ ಕೊಟ್ರೇಶ ವಿಭೂತಿ ಸೇರಿದಂತೆ ಅಧಿಕಾರಿಗಳು, ಪಪಂ ಮಾಜಿ ಸದಸ್ಯರು, ಗಣ್ಯರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.