ಕೊಪ್ಪಳದ ಗವಿಮಠದ ದಾಸೋಹಕ್ಕೆ ಗವಿಸಿದ್ಧೇಶ್ವರ ಗೆಳೆಯರ ಬಳಗದಿಂದ 251 ಕ್ವಿಂಟಲ್ ಮಾದಲಿ

KannadaprabhaNewsNetwork | Published : Jan 19, 2024 1:46 AM

ಸಾರಾಂಶ

ಗವಿಸಿದ್ದೇಶ್ವರ ಗೆಳೆಯರ ಬಳಗ ಕಳೆದ 14 ವರ್ಷದಿಂದ ಪ್ರತಿ ವರ್ಷವು ಮಹಾದಾಸೋಹಕ್ಕೆ ಮಾದಲಿಯನ್ನು ಭಕ್ತಿ ಸಲ್ಲಿಸುತ್ತಿದ್ದಾರೆ. ಆರಂಭದಲ್ಲಿ 51 ಕ್ವಿಂಟಲ್ ಮಾದಲಿ ಸಲ್ಲಿಸುವುದರ ಮೂಲಕ ಆರಂಭವಾದ ಈ ಸೇವೆ ಪ್ರಸ್ತುತ ವರ್ಷ 251 ಕ್ವಿಂಟಲ್ ಸಲ್ಲಿಸುತ್ತಿದ್ದಾರೆ.

ಕೊಪ್ಪಳ: ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಜರುಗಲಿರುವ ಮಹಾದಾಸೋಹಕ್ಕಾಗಿ ಗವಿಸಿದ್ಧೇಶ್ವರ ಗೆಳೆಯರ ಬಳಗ ಈ ವರ್ಷದ ಜಾತ್ರಾ ಮಹಾದಾಸೋಹಕ್ಕೆ 251 ಕ್ವಿಂಟಲ್ ಮಾದಲಿ ಅರ್ಪಿಸಲಿದ್ದಾರೆ.ಗವಿಸಿದ್ದೇಶ್ವರ ಗೆಳೆಯರ ಬಳಗ ಕಳೆದ 14 ವರ್ಷದಿಂದ ಪ್ರತಿ ವರ್ಷವು ಮಹಾದಾಸೋಹಕ್ಕೆ ಮಾದಲಿಯನ್ನು ಭಕ್ತಿ ಸಲ್ಲಿಸುತ್ತಿದ್ದಾರೆ. ಆರಂಭದಲ್ಲಿ 51 ಕ್ವಿಂಟಲ್ ಮಾದಲಿ ಸಲ್ಲಿಸುವುದರ ಮೂಲಕ ಆರಂಭವಾದ ಈ ಸೇವೆ ಪ್ರಸ್ತುತ ವರ್ಷ 251 ಕ್ವಿಂಟಲ್ ಸಲ್ಲಿಸುತ್ತಿದ್ದಾರೆ. ಮಾದಲಿಯನ್ನು ಸಿದ್ಧಗೂಳಿಸಲು ಸುತ್ತಮುತ್ತಲಿನ ಹಳ್ಳಿಗಳಿಗೆ ಸಾಮಗ್ರಿಗಳನ್ನು ನೀಡಲಾಗಿದೆ. ಮಾದಲಿ ತಯಾರಿಕೆಗೆ ಸುಮಾರು 125 ಕ್ವಿಂಟಲ್ ಬೆಲ್ಲ, 100 ಕ್ವಿಂಟಲ್ ಹಿಟ್ಟು ಬಳಸಲಾಗಿದೆ. 300ರಿಂದ 400 ಜನ ಸೇವೆಗೈದು ತಯಾರಿಸುತ್ತಿದ್ದಾರೆ.ಭಾಷಣ ಸ್ಪರ್ಧೆ ವಿಜೇತರು: ಕೊಪ್ಪಳ ನಗರದ ಸಂಸ್ಥಾನ ಗವಿಮಠವು ಜಾತ್ರಾ ಮಹೋತ್ಸವ ಅಂಗವಾಗಿ ಪ್ರತಿ ವರ್ಷ ಒಂದೊಂದು ಸಮಾಜಮುಖಿ ಚಿಂತನೆಯ ಜಾಥಾ ಏರ್ಪಡಿಸುವ ಮೂಲಕ ಜನಸ್ತೋಮದಲ್ಲಿ ಅರಿವು ಮೂಡಿಸುವ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಲಿದೆ. ಈ ವರ್ಷವು “ಕಾಯಕ ದೇವೋಭವ” ಎಂಬ ಶೀರ್ಷಿಕೆಯಡಿ ‘ಸ್ವಾವಲಂಬಿ ಬದುಕು-ಸಮೃದ್ಧಿ ಬದುಕು-ಸಂತೋಷದ ಬದುಕು‘ ಎಂಬ ಘೋಷವಾಕ್ಯದೊಂದಿಗೆ ಸ್ವಯಂ ಉದ್ಯೋಗ ಹಾಗೂ ವೃತ್ತಿ ಕೌಶಲ್ಯದ ಜಾಗೃತಿ ಅಭಿಯಾನವನ್ನು ನಡಿಗೆಯ ಜಾಥಾ ಮೂಲಕ ಹಮ್ಮಿಕೊಳ್ಳಲಾಗಿದೆ.ಇದರ ಅಂಗವಾಗಿ ಇಂದು ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಪ್ರೌಢ ಶಾಲೆ, ಪದವಿ ಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳಿಗಾಗಿ ‘ಸ್ವಯಂ ಉದ್ಯೋಗದಿಂದ ಸ್ವಾವಲಂಬಿ ಬದುಕು’ ಎಂಬ ವಿಷಯದ ಕುರಿತು ಭಾಷಣ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ಕೊಪ್ಪಳ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಶಾಲಾ ಮತ್ತು ಕಾಲೇಜು ಮಟ್ಟದಲ್ಲಿ ಸ್ಪರ್ಧೆ ಆಯೋಜಿಸಿ ಅದರಲ್ಲಿ ಆಯ್ಕೆಯಾದ 106 ವಿದ್ಯಾರ್ಥಿಗಳು ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.ವಿಜೇತರು: ಪದವಿ ವಿಭಾಗದಲ್ಲಿ ಕೊಪ್ಪಳದ ಎಸ್.ಜೆ.ಜಿ ವೈದ್ಯಕೀಯ ಮಹಾವಿದ್ಯಾಲಯದ ಅಭೀಷೇಕ್ ಅನ್ನದಾನಿ (ಪ್ರಥಮ ಸ್ಥಾನ), ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಭಾಗೀರಥಿ (ದ್ವಿತೀಯ), ಇರಕಲಗಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸವಿತಾ ತಳಭಾಳ (ತೃತೀಯ ಸ್ಥಾನ), ಪದವಿ ಪೂರ್ವ ವಿಭಾಗದಲ್ಲಿ ಹಲಗೇರಿ ಸರ್ಕಾರಿ ಪದವಿಪೂರ್ವ ಕಾಲೇಜು ಕವಿತಾ ಗುಳದಳ್ಳಿ (ಪ್ರಥಮ ಸ್ಥಾನ), ಕೊಪ್ಪಳ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಮಧುಮತಿ ಆರ್.ಕೆ. (ದ್ವಿತೀಯ ಸ್ಥಾನ), ಕೊಪ್ಪಳದ ಮರಿಶಾಂತವೀರ ಪದವಿ ಪೂರ್ವ ಕಾಲೇಜಿನ ಜಗದೀಶ ಎನ್.ಎಚ್. (ತೃತೀಯ ಸ್ಥಾನ), ಟನಕನಕಲ್ ಪ್ರೌಢಶಾಲಾ ಸರ್ಕಾರಿ ಆದರ್ಶ ವಿದ್ಯಾಲಯದ ಶಾಂಭವಿ ಪತ್ತಾರ (ಪ್ರಥಮ), ಹಲಗೇರಿಯ ರಾಜೇಶ್ವರಿ ಪ್ರೌಢಶಾಲೆಯ ಶ್ರೀದೇವಿ ಮೈನಳ್ಳಿ (ದ್ವಿತೀಯ), ಸಂಕನೂರ ಸರ್ಕಾರಿ ಪ್ರೌಢ ಶಾಲೆಯ ಸಂಗೀತ ಕಲ್ಲೂರ (ತೃತೀಯ) ಪಡೆದಿದ್ದಾರೆ ಎಂದು ಆಯೋಜನಾ ಸಮಿತಿ ತಿಳಿಸಿದೆ.

Share this article