ಜಿಲ್ಲಾ ಕಾರಾಗೃಹದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ಮತ್ತು ಧಾರ್ಮಿಕ ಚಿಂತನೆಗಳ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಚಾಮರಾಜನಗರಪ್ರಸ್ತುತ ಸನ್ನಿವೇಶದಲ್ಲಿ ಸುಸಂಸ್ಕೃತರಾಗಲು ಕಾನೂನು ಅರಿವಿನ ಜೊತೆಗೆ ಧಾರ್ಮಿಕ ಚಿಂತನೆಗಳು ಅಗತ್ಯವಾಗಿದೆ ಎಂದು ಜಿಲ್ಲಾ ಉಚಿತ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ, ಕಾರ್ಯದರ್ಶಿ ಹಾಗೂ ಸತ್ರ ನ್ಯಾಯಾಧೀಶ ಎಂ. ಶ್ರೀಧರ್ ಹೇಳಿದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜನಾರ್ಧನ ಪ್ರತಿಷ್ಠಾನದ ವತಿಯಿಂದ ನಗರದ ಜಿಲ್ಲಾ ಕಾರಾಗೃಹದಲ್ಲಿ ವಿಚಾರಾಧೀನ ಕೈದಿಗಳಿಗೆ ಹಮ್ಮಿಕೊಂಡಿದ್ದ ಕಾನೂನು ಅರಿವು ಮತ್ತು ಧಾರ್ಮಿಕ ಚಿಂತನೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹುಟ್ಟಿನಿಂದ ಸಾಯುವವರೆಗೂ ಮನುಷ್ಯ ಒಂದಲ್ಲ ಒಂದು ಕಾನೂನಿನ ಅಡಿ ಬದುಕಲೇ ಬೇಕು, ಈ ಕಾನೂನಿನ ಅರಿವಿನ ಜೊತೆಗೆ, ನಮ್ಮ ಸಾಂಸ್ಕೃತಿಕ ಪರಂಪರೆ ಧಾರ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡಾಗ ನಾವು ಸುಸಂಸ್ಕೃತ ಜೀವನನದ ಜೊತಗೆ ಒಳ್ಳೆಯ ಸಮಾಜವನ್ನು ಕಟ್ಟಬಹುದು ಎಂದರು.ಎಲ್ಲಾ ಮಾನವರು ಒಂದೇ, ಎಲ್ಲಾ ಧರ್ಮಗಳಲ್ಲೂ ಅದರದೇ ಆದ ಧಾರ್ಮಿಕ ಆಚರಣೆಗಳು, ಧಾರ್ಮಿಕ ಚಿಂತನೆಗಳು ಇವೆ, ಇವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಾವು ಯಾವ ತಪ್ಪುಗಳನ್ನು ಮಾಡುವುದಿಲ್ಲ ಎಂದರು. ಏನೋ ಅರಿಯದೇ ದುಡುಕಿನಿಂದ ಮಾಡಿದ ತಪ್ಪಿನಿಂದಾಗಿ ಕಾನೂನಿನಡಿಯಲ್ಲಿ ಶಿಕ್ಷೆ ಅನುಭವಿಸಲು ನೀವು ಇಲ್ಲಿಗೆ ಬಂದಿದ್ದೀರಿ, ಇದು ನಿಮ್ಮ ಮನಪರಿರ್ತನೆಯ ಕೇಂದ್ರ, ನಮ್ಮೊಳಗೆ ಒಂದು ಆತ್ಮವಿದೆ, ಈ ಆತ್ಮ ನಮ್ಮ ಜೀವನದಲ್ಲಿ ಒಳ್ಳೆಯದಿರಬೇಕಾದರೆ ಧಾರ್ಮಿಕ ಚಿಂತನೆಗಳು ಅತಿ ಮುಖ್ಯ ಎಂದರು.ಜಿಲ್ಲಾ ಉಚಿತ ಕಾನೂನು ಸೇವೆಗಳ ಪ್ರಾಧಿಕಾರದಿಂದ ನಿಮ್ಮ ಪ್ರಕರಣಗಳಿಗೆ ಸಂಬಂಧಿಸಿದಂತೆ ಉಚಿತ ಕಾನೂನು ನೆರವು ಇದೆ, ಎಲ್ಲರೂ ಶಾಂತಿ ನೆಮ್ಮದಿಯಿಂದ ಇರಬೇಕೆಂದು ಬಯಸಿ, ಅದಕ್ಕಾಗಿ ಜನಾರ್ಧನ ಪ್ರತಿಷ್ಠಾನದವರು ಜ.೨೨ ರಂದು ನಡೆಯುವ ಶ್ರೀ ರಾಮ ಪ್ರತಿಷ್ಠಾಪನಾ ಅಂಗವಾಗಿ ರಾಮಕಥಾ ಮಹಿಮೆ, ರಾಮಜಪದ ಬಗ್ಗೆ ತಿಳಿಸಿಕೊಡುವ ಒಳ್ಳೆಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.
ಜನಾರ್ಧನ ಪ್ರತಿಷ್ಠಾನದ ಅನಂತಪ್ರಸಾದ್ ಮಾತನಾಡಿ ಕೆಲ ದುಡುಕಿನ ನಿರ್ಧಾರದಿಂದಾಗಿ ನೀವು ಇಲ್ಲಿಗೆ ಬಂದಿದ್ದೀರಿ, ನಿಮ್ಮ ಮನಸ್ಸು ಶುದ್ಧಿಯಾಗಿ ಮುಂದಿನ ನಿಮ್ಮ ಜೀವನ ನೆಮ್ಮದಿಯಾಗಿರಬೇಕೆಂಬ ಉದ್ದೇಶದಿಂದ ಈ ಧಾರ್ಮಿಕ ಚಿಂತನೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಭಗವಂತ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ, ಅದೇ ರೀತಿ ಜ.೨೨ ರಂದು ಅಯೋಧ್ಯೆಯಲ್ಲಿ ಶ್ರೀರಾಮ ಚಂದ್ರನ ಪ್ರತಿಷ್ಠಾಪನೆಯಾಗುತ್ತಿದೆ, ಇದರ ಮಹತ್ವವೇನು ಎಂಬುದು ನಿಮಗೂ ತಿಳಿಯಬೇಕು ಎಂಬ ಉದ್ದೇಶದಿಂದ ಶ್ಯಾಮಲಾ ಪ್ರಕಾಶ್ ನೀಡಿರುವ ರಾಮಕಥಾ ಮಹಿಮೆ, ಪುಸ್ತಕ ನೀಡಿ, ರಾಮಜಪ ಹೇಳಿಕೊಡಲಾಗುತ್ತಿದ್ದು, ಮುಂದಿನ ನಿಮ್ಮ ಜೀವನ ಶಾಂತಿ ನೆಮ್ಮದಿಯಿಂದ ಇರಲಿ ಎಂದು ಆಶಿಸಿದರು. ರಾಮ ಜಪದಿಂದ ವಾಲ್ಮೀಕಿಯಾಗಿ ಪರಿವರ್ತನೆಗೊಂಡು, ರಾಮಾಯಾಣವನ್ನು ಬರೆದು ವಾಲ್ಮೀಕಿ ಮಹರ್ಷಿಗಳಾದರು, ಅದರಂತೆ ನಿಮ್ಮ ಮನಸ್ಸು ಪರಿವರ್ತನೆಗೊಳ್ಳಲಿ ಎಂದರು. ಸೇವಾಭಾರತಿಯ ವಾಸುದೇವರಾವ್, ರಮೇಶ್, ಪ್ರಕಾಶ್ ಹಾಗೂ ಜೈಲರ್ ಶಿವಕುಮಾರ್ ಇದ್ದರು. ಇದೇ ಸಂದರ್ಭದಲ್ಲಿ ಕೈದಿಗಳಿಗೆ ರಾಮಕಥಾ ಮಹಿಮೆ, ಪುಸ್ತಕ ನೀಡಿ, ರಾಮಜಪ ಹೇಳಿಕೊಡಲಾಯಿತು.