ಚಿಕ್ಕಪ್ಪನಹಳ್ಳಿ ಷಣ್ಮುಖ
ಕನ್ನಡಪ್ರಭ ವಾರ್ತೆ ಚಿತ್ರದುರ್ಗಭದ್ರಾ ಮೇಲ್ದಂಡೆ ನೀರಿನ ಪಾಲಿಗೆ ಸಂಬಂಧಿಸಿದಂತೆ ಇದುವರೆಗೂ ದಾವಣಗೆರೆ ಜಿಲ್ಲೆಯ ರೈತಾಪಿ ಸಮುದಾಯದೊಂದಿಗೆ ಮಾತಿನ ಜಟಾಪಟಿಗೆ ಇಳಿಯುತ್ತಿದ್ದ ಚಿತ್ರದುರ್ಗ ಜಿಲ್ಲೆಯ ರೈತರಿಗೆ ನೆರೆ ಹೊರೆಯವರೊಂದಿಗೆ ಕಿತ್ತಾಡಿದ್ದು ಸಾಕು ಈಗ ತಮ್ಮಲ್ಲಿಯೇ ಜಗಳವಾಡಿಕೊಂಡಿರಿ ಎಂಬ ಸಂಘರ್ಷ ಸೃಷ್ಠಿಗೆ ರಾಜ್ಯ ಸರ್ಕಾರ ಮುಂದಾಯಿತಾ ಎಂಬ ಪ್ರಶ್ನೆ ಎದರಾಗಿದೆ.
ಭದ್ರಾ ಮೇಲ್ದಂಡೆಯಡಿ ಹಂಚಿಕೆಯಾದ ನೀರು ಬಳಕೆ ವಿಚಾರದಲ್ಲಿ ರಾಜ್ಯ ಸರ್ಕಾರ 12 ದಿನಗಳ ಹಿಂದೆ(ಜನವರಿ-17-2025) ವಿಶ್ವೇಶ್ವರಯ್ಯ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಬರೆದ ಪತ್ರ ಇಂತಹದ್ದೊಂದು ಕಳವಳಕಾರಿ ಸಂಗತಿ ರವಾನಿಸಿದೆ. ಹಿರಿಯೂರು ತಾಲೂಕಿನ ಗಾಯತ್ರಿ ಜಲಾಶಯ ಹಾಗೂ ಇತರೆ 13 ಕೆರೆಗಳಿಗೆ 0.5 ಟಿಎಂಸಿ ನೀರನ್ನು ಅಂತರ್ಜಲ ಅಭಿವೃದ್ಧಿ ಹಾಗೂ ಕುಡಿವ ನೀರಿಗಾಗಿ ಮರು ಹಂಚಿಕೆ ಮಾಡುವ ಪ್ರಸ್ತಾಪ ಇದಾಗಿದೆ. ಭದ್ರಾ ಮೇಲ್ದಂಡೆಯಡಿ ವಿವಿ ಸಾಗರ ಜಲಾಶಯಕ್ಕೆ ಹಂಚಿಕೆ ಮಾಡಲಾದ 2 ಟಿಎಂಸಿ ನೀರಲ್ಲಿ 0.5 ಟಿಎಂಸಿ ಬಳಕೆ ಮಾಡುವ ಉದ್ದೇಶ ಹೊಂದಲಾಗಿದೆ.ವಿವಿ ಸಾಗರ ಜಲಾಶಯಕ್ಕೆ ಹಂಚಿಕೆ ಮಾಡಲಾದ 2 ಟಿಎಂಸಿ ನೀರಲ್ಲಿ ಚಳ್ಳಕೆರೆಗೆ 0.25 ಟಿಎಂಸಿ ನೀರು ಹಂಚಿಕೆ ಮಾಡಲಾಗಿದೆ. ಉಳಿದ ನೀರಿನಲ್ಲಿ ಗಾಯತ್ರಿ ಜಲಾಶಯ ಹಾಗೂ ಇತರೆ 13 ಕೆರೆಗಳಿಗೆ 0.50 ಟಿಎಂಸಿ ನೀರು ಒದಗಿಸುವ ಕುರಿತು ಹಾಗೊಂದು ವೇಳೆ ಪರಿಗಣಿಸಿದರೆ ಈಗಾಗಲೇ ಯೋಜಿಸಲಾಗಿರುವ ಉದ್ದೇಶಗಳಿಗೆ ಇದರಿಂದ ಏನಾದರೂ ಪರಿಣಾವಾಗುತ್ತದೆಯೇ ಎಂಬ ನಿಖರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ವಿಶ್ವೇಶ್ವರಯ್ಯ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶರಿಗೆ ರಾಜ್ಯ ಸರ್ಕಾರ ತಾಕೀತು ಮಾಡಿದೆ.
*ರೈತ ಸಂಘಟನೆಗಳ ಒತ್ತಡ: ಗಾಯತ್ರಿ ಜಲಾಶಯ ಹಾಗೂ ಜವನಗೊಂಡನಹಳ್ಳಿ ಹೋಬಳಿಯ 13 ಕೆರೆಗಳಿಗೆ ವಿವಿ ಸಾಗರದ ಜಲಾಶಯದಿಂದ ನೀರು ಪೂರೈಕೆ ಮಾಡುವಂತೆ ರೈತ ಸಂಘಟನೆಗಳು ಕಳೆದ 223 ದಿನಗಳಿಂದ ಹಿರಿಯೂರಿನಲ್ಲಿ ಧರಣಿ ನಡೆಸುತ್ತಿದ್ದು ಪಟ್ಟು ಸಡಿಲಿಸಿಲ್ಲ. ರೈತರ ಸಂಘಟನೆಗಳ ಒತ್ತಾಯಕ್ಕೆ ಮಣಿದು ಸಚಿವ ಡಿ.ಸುಧಾಕರ್, ಭದ್ರಾ ಮೇಲ್ದಂಡೆ ಯೋಜನೆ ನೀರು ಮರು ಹಂಚಿಕೆ ಮಾಡುವಂತೆ ಒತ್ತಡ ಹೇರಿದ್ದರ ಪರಿಣಾಮ ರಾಜ್ಯ ಸರ್ಕಾರ ಈ ಕುರಿತು ನಿಖರ ಮಾಹಿತಿ ಕೋರಿದೆ ಎನ್ನಲಾಗಿದೆ.
ಗಾಯತ್ರಿ ಜಲಾಶಯಕ್ಕೆ ವಿವಿ ಸಾಗರದಿಂದ ನೀರು ಪೂರೈಕೆ ಸಂಬಂಧ ಸಚಿವ ಡಿ.ಸುಧಾಕರ್ ಗಣರಾಜ್ಯೋತ್ಸವ ದಿನದಂತೆ ಸುಳಿವು ನೀಡಿದ್ದರು. ಧ್ವಜಾರೋಹಣದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಚಿವ ಸುಧಾಕರ್, ಇರುವ ನೀರನ್ನೇ ಬಳಕೆ ಮಾಡಲು ಚಿಂತಿಸಲಾಗಿದೆ. ಇದರಿಂದ ಯಾರಿಗೂ ತೊಂದರೆಯಾಗುವುದಿಲ್ಲ ಎಂದು ಹೇಳಿದ್ದರು. ಆದರೆ ರಾಜ್ಯ ಸರ್ಕಾರ ನಿಖರ ಮಾಹಿತಿ ಕೋರಿರುವುದು ತಾಲೂಕುಗಳ ನಡುವೆ ಸಂಘರ್ಷದ ವಾತಾವರಣ ಸೃಷ್ಟಿಸುವ ಸಾಧ್ಯತೆಗಳಿವೆ.ಭದ್ರಾ ಮೇಲ್ದಂಡೆಯಡಿ ಹೆಚ್ಚಿನ ಪ್ರಮಾಣದ ನೀರಾವರಿ ಸೌಲಭ್ಯ ಹಿರಿಯೂರು ತಾಲೂಕಿಗೆ ಲಭ್ಯವಾಗಿದೆ. ಹಾಗೊಂದು ವೇಳೆ ಜಲಾಶಯದಲ್ಲಿ ಹೆಚ್ಚುವರಿ ನೀರು ಲಭ್ಯವಾದರೆ ಅದನ್ನು ಚಳ್ಳಕೆರೆ, ಮೊಳಕಾಲ್ಮುರು ತಾಲೂಕುಗಳಿಗೆ ನೀಡಲಿ. ಹಿರಿಯೂರಿಗೆ ಬೇಕಾ ಎಂಬ ವಾದ ಹಲವು ರೈತರದ್ದು. ಭದ್ರಾ ಮೇಲ್ಡಂಡೆಯಡಿ ಹಿರಿಯೂರು ತಾಲೂಕು ಮೊದಲ ಫಲಾನುಭವಿಯಾಗಿದೆ. ವಿವಿ ಸಾಗರಕ್ಕೆ ಮಾತ್ರ ನೀರು ಹರಿದು ಬಂದಿದೆ. ಉಳಿದ ಹೊಳಲ್ಕೆರೆ, ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮುರು, ಜಗಳೂರು ತಾಲೂಕಿನ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಕಾಮಗಾರಿ ಪೂರ್ಣಗೊಳಿಸಿ ಎಲ್ಲ ತಾಲೂಕುಗಳಿಗೂ ನೀರು ಪೂರೈಸಬೇಕಾದ ಸರ್ಕಾರ ತನ್ನ ಜವಾಬ್ದಾರಿ ಮರೆತು ನೀರು ಮರು ಹಂಚಿಕೆ ಮಾಡಲು ಮುಂದಾಗಿರುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಗಳು ಭುಗಿಲೆದ್ದಿವೆ.
ಅಧಿಕಾರಿಗಳ ಸಭೆ ಕರೆದ ಡಿ.ಸುಧಾಕರ್
ವಿವಿ ಸಾಗರದಿಂದ 0.5 ಟಿಎಂಸಿ ನೀರು ಒಯ್ಯಲೇಬೇಕೆಂಬ ನಿಲುವು ತಾಳಿರುವ ಸಚಿವ ಡಿ.ಸುಧಾಕರ್ ಗುರುವಾರ ತಮ್ಮ ಕಚೇರಿಯಲ್ಲಿ ನೀರಾವರಿ ನಿಗಮದ ಧಿಕಾರಿಗಳ ಸಭೆ ಕರೆದಿದ್ದಾರೆ. ಏನಕೇನ ನೀರು ಹಂಚಿಕೆಗೆ ಒಪ್ಪಿಗೆ ಪಡೆದು ಮುಂದುವರಿಯುವ ತೀರ್ಮಾನ ಅವರದ್ದು. ಆದರೆ ಇಲ್ಲದ ನೀರನ್ನು ಅಧಿಕಾರಿಗಳು ಹೇಗೆ ತೋರಿಸುತ್ತಾರೆ ಎಂಬ ಸಹಜ ಕುತೂಹಲಗಳು ಮೂಡಿವೆ.ಏತನ್ಮಧ್ಯೆ ವಿವಿ ಸಾಗರ ಜಲಾಶಯದಿಂದ 0.5 ಟಿಎಂಸಿ ನೀರು ಮರು ಹಂಚಿಕೆ ಮಾಡಲು ಶಾಸಕರಾದ ಬಿ.ಜಿ.ಗೋವಿಂದಪ್ಪ ಹಾಗೂ ರಘುಮೂರ್ತಿ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ವಿವಿ ಸಾಗರದಲ್ಲಿ ಸಂಗ್ರಹವಾಗುವ ಭದ್ರಾ ನೀರು ಇಡೀ ಜಿಲ್ಲೆಗೆ ಸಂಬಂಧಿಸಿದ್ದು. ಏಕ ವ್ಯಕ್ತಿ ನೀರು ಹಂಚಿಕೊಳ್ಳಲು ಅವಕಾಶವಿಲ್ಲವೆಂಬ ಸಂದೇಶವ ನೀರಾವರಿ ನಿಗಮದ ಉನ್ನತ ಅಧಿಕಾರಿಗಳಿಗೆ ಇಬ್ಬರು ಶಾಸಕರು ಸಂದೇಶ ರವಾನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.