ಕೃಷಿ, ತೋಟಗಾರಿಕೆ ವಿವಿ ಸ್ಥಾಪನೆಗೆ ಸರ್ಕಾರ ಅಧಿಕೃತ ಅನುಮೋದನೆ

KannadaprabhaNewsNetwork |  
Published : Jan 30, 2025, 12:31 AM IST
ಚಲುವರಾಯಸ್ವಾಮಿ | Kannada Prabha

ಸಾರಾಂಶ

ಆರ್ಥಿಕ ಇಲಾಖೆ ಕೂಡ ಮಂಡ್ಯದ ವಿಸಿ ಫಾರಂನಲ್ಲಿ ಲಭ್ಯವಿರುವ ಮೂಲಭೂತ ಸೌಕರ್ಯಗಳನ್ನು ಬಳಸಿಕೊಂಡು ಮಂಡ್ಯ ಕೃಷಿ ವಿಶ್ವವಿದ್ಯಾಲಯ ಪ್ರಾರಂಭಿಸಲು ತಾತ್ವಿಕ ಅನುಮತಿ ನೀಡಿ ವಿಶ್ವವಿದ್ಯಾಲಯಕ್ಕೆ ಹಂತ ಹಂತವಾಗಿ ಅವಶ್ಯಕವಿರುವ ಮೂಲಭೂತ ಸೌಕರ್ಯಗಳಿಗೆ ಮಾತ್ರ ವಿಸ್ತೃತ ಅಂದಾಜು ಹಾಗೂ ಆವರ್ತಕ ವೆಚ್ಚದ ಅಂದಾಜನ್ನು ಸಲ್ಲಿಸಲು ತಿಳಿಸಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ಜಿಲ್ಲೆಯ ವಿ.ಸಿ ಫಾರಂನಲ್ಲಿ ನೂತನ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ (ಸಮಗ್ರ) ಸ್ಥಾಪನೆಗೆ ರಾಜ್ಯ ಸರ್ಕಾರ ತಾತ್ವಿಕ ಅನುಮೋದನೆ ನೀಡಿ ಆದೇಶ ಹೊರಡಿಸಿದ್ದು, ಮಂಡ್ಯ ಜಿಲ್ಲೆ ಸೇರಿದಂತೆ ಮೈಸೂರು ವಿಭಾಗದ ಜನರ ಬಹುದಿನಗಳ ಕನಸು ಈಡೇರಿದೆ.

2024-25ನೇ ಸಾಲಿನ ಬಜೆಟ್ ಭಾಷಣದ ಕಂಡಿಕೆ- 42ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡ್ಯ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಯ ಸಾಧ್ಯತೆ ಕುರಿತು ಪರಿಶೀಲನೆಗೆ ಸಮಿತಿ ರಚಿಸುವುದಾಗಿ ಘೋಷಣೆ ಮಾಡಿದ ಒಂದು ವರ್ಷದೊಳಗೆ ವಿವಿ ಪ್ರಾರಂಭಕ್ಕೆ ಆದೇಶ ಹೊರಬಿದ್ದಿದೆ. ಕೃಷಿ ಸಚಿವರ ವಿಶೇಷ ಕಾಳಜಿ, ನಿರಂತರ ಪರಿಶ್ರಮ ಶೀಘ್ರವೇ ಫಲ ನೀಡಿದೆ.

ನೂತನ ಬಜೆಟ್ ಘೋಷಣೆಯಂತೆ ಬೆಂಗಳೂರು ಕೃಷಿ ವಿವಿಯ ವಿಶ್ರಾಂತ ಕುಲಪತಿ ಡಾ.ರಾಜೇಂದ್ರ ಪ್ರಸಾದ್‌ರವರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿ ರಚಿಸಲಾಗಿತ್ತು. ಈ ತಂಡವು ಹಲವು ಬಾರಿ ಸ್ಥಳ ಪರಿಶೀಲಿಸಿ, ಸಭೆಗಳನ್ನು ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.

ಈ ಸಮಿತಿಯು ನೂತನ ಕೃಷಿ ವಿಶ್ವವಿದ್ಯಾಲಯಕ್ಕೆ ಬೆಂಗಳೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಮೈಸೂರು ಜಿಲ್ಲೆಯ ಸಂಸ್ಥೆಗಳಾದ ಸಾವಯವ ಕೃಷಿ ಸಂಶೋಧನಾ ಕೇಂದ್ರ, ನಾಗೇನಹಳ್ಳಿ, ಮೈಸೂರು, ವಿಸ್ತರಣಾ ಶಿಕ್ಷಣ ಘಟಕ, ನಾಗೇನಹಳ್ಳಿ. ಹಾಸನ ಜಿಲ್ಲೆಯ ಸಂಸ್ಥೆಗಳಾದ ಕಾರೆಕೆರೆಯ ಕೃಷಿ ಮಹಾವಿದ್ಯಾಲಯ, ಕಂದಲಿ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಸಂಶೋಧನಾ ಕೇಂದ್ರ, ಗುಂಜೇವು, ಹೊಳೆನರಸೀಪುರ ತಾಲೂಕು, ಕೃಷಿ ಸಂಶೋಧನಾ ಕೇಂದ್ರ, ಮಡೆನೂರು , ಜೈವಿಕ ಇಂಧನ ಸಂಶೋಧನಾ ಕೇಂದ್ರ. ಚಾಮರಾಜನಗರ ಜಿಲ್ಲೆಯ ಸಂಸ್ಥೆಗಳಾದ ಕೃಷಿ ಮಹಾವಿದ್ಯಾಲಯ, ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ), ಜೈವಿಕ ಇಂಧನ ಮಾಹಿತಿ ಕೇಂದ್ರ, ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ತೋಟಗಾರಿಕೆ ಕಾಲೇಜು, ಮೈಸೂರು, ಅರಸೀಕೆರೆ, ತೋಟಗಾರಿಕೆ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ, ಹಾಸನದ ಸೋಮನಹಳ್ಳಿ ಕಾವಲ್. ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಕೊಡಗು ಜಿಲ್ಲೆಯ ಅರಣ್ಯ ಮಹಾವಿದ್ಯಾಲಯ ಪೊನ್ನಂಪೇಟೆ, ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಪೊನ್ನಂಪೇಟೆ, ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಮಡಿಕೇರಿ, ವಿಸ್ತರಣಾ ಶಿಕ್ಷಣ ಘಟಕ, ಮಡಿಕೇರಿ ಕೇಂದ್ರಗಳನ್ನು ಮಂಡ್ಯ ವಿ.ಸಿ ಫಾರಂ ಕೃಷಿ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಸೇರಿಸುವಂತೆ ವರದಿಯಲ್ಲಿ ಶಿಫಾರಸ್ಸು ಮಾಡಲಾಗಿತ್ತು.

ಸಮಿತಿಯ ಅಭಿಪ್ರಾಯವನ್ನು ಕಳೆದ ವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಂದಿಟ್ಟು ಅನುಮೋದನೆ ಪಡೆದ ನಂತರ ಸರ್ಕಾರ ಮಂಡ್ಯದ ವಿ.ಸಿ.ಫಾರಂನಲ್ಲಿ ನೂತನ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ (ಸಮಗ್ರ) ಸ್ಥಾಪಿಸಲು ತಾತ್ವಿಕ ಅನುಮೋದನೆ ನೀಡಿದೆ.

ಆರ್ಥಿಕ ಇಲಾಖೆ ಕೂಡ ಮಂಡ್ಯದ ವಿಸಿ ಫಾರಂನಲ್ಲಿ ಲಭ್ಯವಿರುವ ಮೂಲಭೂತ ಸೌಕರ್ಯಗಳನ್ನು ಬಳಸಿಕೊಂಡು ಮಂಡ್ಯ ಕೃಷಿ ವಿಶ್ವವಿದ್ಯಾಲಯ ಪ್ರಾರಂಭಿಸಲು ತಾತ್ವಿಕ ಅನುಮತಿ ನೀಡಿ ವಿಶ್ವವಿದ್ಯಾಲಯಕ್ಕೆ ಹಂತ ಹಂತವಾಗಿ ಅವಶ್ಯಕವಿರುವ ಮೂಲಭೂತ ಸೌಕರ್ಯಗಳಿಗೆ ಮಾತ್ರ ವಿಸ್ತೃತ ಅಂದಾಜು ಹಾಗೂ ಆವರ್ತಕ ವೆಚ್ಚದ ಅಂದಾಜನ್ನು ಸಲ್ಲಿಸಲು ತಿಳಿಸಿದೆ.

ಈ ಎಲ್ಲಾ ಅಂಶಗಳ ಆಧಾರದ ಮೇರೆಗೆ ಸರ್ಕಾರವು ಮಂಡ್ಯ ಜಿಲ್ಲೆಯ ವಿಸಿ ಫಾರಂನಲ್ಲಿ ನೂತನ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ (ಸಮಗ್ರ) ಸ್ಥಾಪಿಸಲು ಅನುಮೋದನೆ ನೀಡಿದೆ. ಷರತ್ತು, ನಿಬಂಧನೆಗಳು ಹಾಗೂ ಆಡಳಿತಾತ್ಮಕ ಅನುಮೋದನೆಗಳನ್ನು ಮುಂದಿನ ಆದೇಶದಲ್ಲಿ ಹೊರಡಿಸಲಾಗುವುದೆಂದು ತಿಳಿಸಲಾಗಿದೆ.

ಶೀಘ್ರವೇ ವಿಶೇಷಾಧಿಕಾರಿಗಳನ್ನು ನೇಮಿಸಿ ಪ್ರಸಕ್ತ ಸಾಲಿನಲ್ಲಿಯೇ ವಿ.ವಿ ಕಾರ್ಯಾರಂಭ ಮಾಡಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುವುದು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ