ಯಶಸ್ವಿ ಜೆಡಿಎಸ್‌ ಸದಸ್ಯತ್ವ ಅಭಿಯಾನಕ್ಕೆ ಸಜ್ಜು

KannadaprabhaNewsNetwork | Published : Sep 22, 2024 1:51 AM

ಸಾರಾಂಶ

ಜೆಡಿಎಸ್ ಸಂಘಟನೆ ಹಾಗೂ ಬಲವರ್ಧನೆಯ ದೃಷ್ಟಿಯಿಂದ ರಾಜ್ಯಾದ್ಯಂತ ಸದಸ್ಯತ್ವ ಅಭಿಯಾನ ಆರಂಭಗೊಂಡಿದ್ದು, ಕುಮಟಾ-ಹೊನ್ನಾವರ ವಿಧಾನಸಭೆ ಕ್ಷೇತ್ರದಲ್ಲಿ ಸದಸ್ಯತ್ವ ಅಭಿಯಾನ ಮುನ್ನಡೆಸಲಾಗುವುದು ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸೂರಜ ನಾಯ್ಕ ತಿಳಿಸಿದರು.

ಕುಮಟಾ: ಜೆಡಿಎಸ್ ಸಂಘಟನೆ ಹಾಗೂ ಬಲವರ್ಧನೆಯ ದೃಷ್ಟಿಯಿಂದ ರಾಜ್ಯಾದ್ಯಂತ ಸದಸ್ಯತ್ವ ಅಭಿಯಾನ ಆರಂಭಗೊಂಡಿದ್ದು, ನಮ್ಮ ಕುಮಟಾ-ಹೊನ್ನಾವರ ವಿಧಾನಸಭೆ ಕ್ಷೇತ್ರದ ಎಲ್ಲ ೨೧೫ ಬೂತ್‌ಗಳಲ್ಲಿ ಅತ್ಯಂತ ಯಶಸ್ವಿಯಾಗಿ ಸದಸ್ಯತ್ವ ಅಭಿಯಾನ ಮುನ್ನಡೆಸಲಾಗುವುದು ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸೂರಜ ನಾಯ್ಕ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದ ಅವರು, ಸದಸ್ಯತ್ವ ಅಭಿಯಾನಕ್ಕಾಗಿ ಸಭೆ ನಡೆಸಿ, ಚರ್ಚಿಸಿ, ಹಲವು ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಎಲ್ಲ ೨೯ ಪಂಚಾಯಿತಿಯ ಬೂತ್‌ಗಳಲ್ಲಿ ೧೫ರಿಂದ ೨೦ ಮಂದಿಯನ್ನು ಸದಸ್ಯತ್ವ ಅಭಿಯಾನಕ್ಕೆ ಸಜ್ಜುಗೊಳಿಸಲಾಗಿದೆ. ಅಭಿಯಾನದ ಯಶಸ್ಸಿನ ಜತೆಯಲ್ಲೇ ಮುಂಬರುವ ಅಕ್ಟೋಬರ್-ನವೆಂಬರ್‌ನಲ್ಲಿ ಸದಸ್ಯತ್ವ ಅಭಿಯಾನದಡಿ ಬೃಹತ್ ಸಮಾವೇಶವನ್ನು ನಡೆಸಲಿದ್ದು, ಪಕ್ಷದ ರಾಜ್ಯಾಧ್ಯಕ್ಷ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಇನ್ನಿತರ ವರಿಷ್ಠರು ಆಗಮಿಸಲಿದ್ದಾರೆ. ಅಭಿಯಾನದ ಜಿಲ್ಲೆಯ ಉಸ್ತುವಾರಿಗಳಾಗಿ ವೈಎಸ್‌ವಿ ದತ್ತಾ, ಗುರುರಾಜ ಹುಣಸಿಮರದ ಕಾರ್ಯನಿರ್ವಹಿಸುತ್ತಿದ್ದು, ಕಳೆದ ಚುನಾವಣೆಯಲ್ಲಿ ನಾವು ಗಳಿಸಿದ ಗೆಲುವಿಗೆ ತೀರಾ ಅಂಚಿನಲ್ಲಿದ್ದ ಮತ ಸಂಖ್ಯೆಯನ್ನು ಮೀರಿ ಹೆಚ್ಚಿನ ಸದಸ್ಯರನ್ನು ನೋಂದಾಯಿಸುವತ್ತ ಗುರಿ ಹಾಕಿಕೊಂಡಿದ್ದೇವೆ ಎಂದರು.

ಮುಖ್ಯವಾಗಿ ಕುಮಟಾ ಹಾಗೂ ಹೊನ್ನಾವರದಲ್ಲಿ ಅಗ್ನಿಶಾಮಕ ಠಾಣೆಯಲ್ಲಿ ಸಿಬ್ಬಂದಿ ಇದ್ದರೂ ಅಗ್ನಿಶಾಮಕದ ಸುಸಜ್ಜಿತ ವಾಹನ ವರ್ಷಗಳಿಂದ ಇಲ್ಲದಂತಾಗಿದೆ. ಇಷ್ಟೊಂದು ಜನಸಂಖ್ಯೆ ಇರುವ ವಿಶಾಲ ಪ್ರದೇಶಕ್ಕೆ ಅಗ್ನಿಶಾಮಕ ವ್ಯವಸ್ಥೆ ತೀರಾ ದುರ್ಬಲ ಸ್ಥಿತಿಯಲ್ಲಿರುವುದು ಕಳವಳಕಾರಿ. ಆದ್ದರಿಂದ ಕೂಡಲೇ ಅಗ್ನಿಶಾಮಕ ವಾಹನವನ್ನು ಕೂಡಲೇ ಒದಗಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದರು.

ತಾಲೂಕಾಧ್ಯಕ್ಷ ಸಿ.ಜಿ. ಹೆಗಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದತ್ತಾ ಪಟಗಾರ, ಮಹೇಂದ್ರ ನಾಯ್ಕ, ಮಹಾಬಲೇಶ್ವರ ಗೋಕರ್ಣ, ಗೋವಿಂದರಾಯ ಶಾನಭಾಗ, ಬಲೀಂದ್ರ ಗೌಡ, ಸತೀಶ ಮಹಾಲೆ, ರಾಘವೇಂದ್ರ ನಾಯ್ಕ, ಶಶಿಧರ ಹಾಡುಗೋಳಿ, ವಸಂತ ಗೌಡ, ಅಣ್ಣಪ್ಪ ನಾಯ್ಕ ಇನ್ನಿತರರು ಇದ್ದರು.

Share this article