ಕನ್ನಡಪ್ರಭ ವಾರ್ತೆ ಮೈಸೂರು
ಎರಡು ದಿನಗಳ ಮೇಳದಲ್ಲಿ ವಿವಿಧ ಬಗೆಯ ಕಾಡು ಮತ್ತು ನಾಡಿನ ಗೆಡ್ಡೆ ಗೆಣಸುಗಳು, ಮೌಲ್ಯವರ್ಧಿತ ಪದಾರ್ಥಗಳು, ಗೆಣಸಿನ ಅಡುಗೆಗಳು ಪ್ರದರ್ಶನ ಮತ್ತು ಮಾರಾಟಕ್ಕೆ ಬರಲಿವೆ. ಮಾವಿನ ಶುಂಠಿ, ಕೂವೆ ಗೆಡ್ಡೆ, ಉತ್ತರಿ ಗೆಡ್ಡೆ, ಪರ್ಪಲ್ ಯಾಮ್, ಬಿಳಿ ಸಿಹಿ ಗೆಣಸು, ಬಳ್ಳಿ ಬಟಾಟೆ, ಕಪ್ಪು ಹರಿಷಿಣ, ಕಪ್ಪು ಶುಂಠಿ, ಕಾಡು ಗೆಣಸು, ಮುಳ್ಳು ಗೆಣಸು, ಸುವರ್ಣ ಗೆಡ್ಡೆ, ಕೆಸು, ಹಳದಿ ಮತ್ತು ಕೆಂಪು ಸಿಹಿ ಗೆಣಸು ಮಾರಾಟಕ್ಕೆ ಸಿಗಲಿವೆ.
ಈ ಮೇಳವನ್ನು ಫೆ.8ರ ಬೆಳಗ್ಗೆ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ. ಅಶೋಕ್ ದಳವಾಯಿ ಉದ್ಘಾಟಿಸುವರು. ರೋಟರಿ ಕ್ಲಬ್ ಮೈಸೂರು ಪಶ್ಚಿಮದ ಅಧ್ಯಕ್ಷ ಎಂ.ಎಲ್. ನಾಗೇಶ್ ಅಧ್ಯಕ್ಷತೆ ವಹಿಸುವರು. 300 ಹೆಚ್ಚಿನ ಗೆಡ್ಡೆ ಗೆಣಸು ತಳಿಗಳ ಸಂರಕ್ಷಿಸಿರುವ ಕೇರಳದ ಎನ್.ಎಂ. ಶಾಜಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ವೇಳೆ ಸೊಪ್ಪಿನ ಕ್ಯಾಲೆಂಡರ್ ಬಿಡುಗಡೆಯಾಗಲಿದೆ.ಫೆ.9ರ ಬೆಳಗ್ಗೆ 11ಕ್ಕೆ ರೈತರಿಗಾಗಿ ಗೆಡ್ಡೆ ಗೆಣಸು ಕೃಷಿ ತರಬೇತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಗೆಡ್ಡೆ ಗೆಣಸಿನ ವೈವಿಧ್ಯ , ಸಾಗುವಳಿ ವಿಧಾನಗಳು, ಮೌಲ್ಯವರ್ಧನೆಯ ಅವಕಾಶಗಳು ಮತ್ತು ಮಾರುಕಟ್ಟೆಯ ಸಾಧ್ಯತೆಗಳ ಬಗ್ಗೆ ತಿಳಿಸಿ ಕೊಡಲಾಗುವುದು.
ಔಷಧಿಯಾಗಿ ಗೆಡ್ಡೆ ಗೆಣಸು ಬಳಕೆ:
ಗೆಡ್ಡೆ ಗೆಣಸುಗಳು ಬರಗಾಲವನ್ನು ಎದುರಿಸಿ ನಿಲ್ಲುವ ಸಾಮರ್ಥ್ಯ ಹೊಂದಿವೆ. ಗೆಡ್ಡೆ ಗೆಣಸುಗಳನ್ನು ಸುಲಭನಾಗಿ ಹೊಲದ ಅಂಚಿನಲ್ಲಿ ಇಲ್ಲವೇ ಬೆಳೆಯ ಸಾಲಿನ ನಡುವೆ ಬೆಳೆದುಕೊಳ್ಳಬಹುದು. ಮನೆ ಹಿತ್ತಲು ಮತ್ತು ತಾರಸಿ ತೋಟದಲ್ಲೂ ಇವನ್ನು ಬೆಳೆಸಬಹುದು. ಹತ್ತಾರು ವರ್ಷ ನೆಲದಲ್ಲೇ ಬಿಟ್ಟರೂ ಕೆಡದೆ, ಕೊಳೆಯದೆ ಉಳಿಯುತ್ತವೆ.
ಪೋಷಕ ನಾರು ಹಾಗೂ ಶರ್ಕರ ಪಿಷ್ಟದಿಂದ ಹೇರಳವಾಗಿರುವ ಗೆಡ್ಡೆ ಗೆಣಸುಗಳು, ಶರೀರಕ್ಕೆ ಬೇಕಾದ ಚೈತನ್ಯವನ್ನು ಒದಗಿಸುತ್ತವೆ. ಇವುಗಳ ನಿರಂತರ ಬಳಕೆಯಿಂದ ಬೊಜ್ಜು, ಮಧುಮೇಹ, ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ದೂರವಿಡಬಹುದು. ಚರ್ಮದ ಮೈಕಾಂತಿ ವೃದ್ಧಿಸಲು ಮತ್ತು ವಯಸ್ಸನ್ನು ನಿಧಾನಿಸಲು ಗೆಡ್ಡೆ ಗೆಣಸು ಸಹಕಾರಿ. ಇವುಗಳಲ್ಲಿ ಕಾರ್ಬೋಹೈಡ್ರೇಟ್ ಸಂಯುಕ್ತ ರೂಪದಲ್ಲಿದೆ. ರಕ್ತದಲ್ಲಿ ಸಕ್ಕರೆ ಅಂಶ ಒಮ್ಮೆಲೇ ಹೆಚ್ಚುವುದಿಲ್ಲ. ಮಧುಮೇಹ ರೋಗಿಗಳು ಯಾವುದೇ ಆತಂಕವಿಲ್ಲದೆ ಗೆಡ್ಡೆ ಗೆಣಸು ಸವಿಯಬಹುದು.
ಮೈಸೂರು ಜಿಲ್ಲೆಯ ನಾಗರಹೊಳೆ ಕಾಡು ಪ್ರದೇಶ ಗೆಡ್ಡೆ ಗೆಣಸು ವೈವಿಧ್ಯಕ್ಕೆ ಹೆಸರುವಾಸಿ. ಜೇನು ಕುರುಬ, ಬೆಟ್ಟ ಕುರುಬ, ಸೋಲಿಗ ಮತ್ತು ಇರುಳಿಗ ಸಮುದಾಯಗಳು ಗೆಡ್ಡೆ ಗೆಣಸನ್ನು ಇವತ್ತಿಗೂ ಆಹಾರವಾಗಿ ಬಳಸುತ್ತಿದ್ದಾರೆ. ಜಿಲ್ಲೆಯ ರೈತರು ಮರ ಗೆಣಸು, ಕೆಸು, ಸುವರ್ಣ ಗೆಡ್ಡೆ, ಶುಂಠಿ, ಹರಿಷಿಣ ಮತ್ತು ಸಿಹಿ ಗೆಣಸು ಉತ್ಪಾದನೆಯಲ್ಲಿ ಮಂಚೂಣಿಯಲ್ಲಿದ್ದಾರೆ. ನೈಸರ್ಗಿಕ ವಿಕೋಪ ಮತ್ತು ಬರಗಾಲದಲ್ಲಿ ಗೆಡ್ಡೆ ಗೆಣಸು ಜೀವ ಉಳಿಸುವ ಸಂಜೀವಿನಿಯಂತೆ ಕೆಲಸ ಮಾಡುತ್ತವೆ. ವಾತಾವರಣದ ವೈಪರೀತ್ಯವಿದ್ದಾಗ ಎಲ್ಲ ಬೆಳೆಗಳು ವಿಫಲವಾದಾಗ ಗೆಡ್ಡೆ ಗೆಣಸುಗಳು ರೈತರ ಕೈಹಿಡಿಯುತ್ತವೆ, ಆದಾಯ ತರುತ್ತವೆ. ನೈಸರ್ಗಿಕವಾಗಿ ಬೆಳೆಯುವ ಗೆಡ್ಡೆ ಗೆಣಸುಗಳು ನಮ್ಮ ಅನ್ನದ ತಟ್ಟೆಗೆ ಬರಬೇಕು.