ಶಿವಮೊಗ್ಗ : ಈ ಬಾರಿ ಮತದಾರರು ಗ್ಯಾರಂಟಿ ಮೇಲೆ ವಿಶ್ವಾಸವಿಟ್ಟಿದ್ದಾರೆ. ಗೀತಾ ಪರ ರಾಹುಲ್ ಗಾಂಧಿ ಬಂದು ಪ್ರಚಾರ ಮಾಡಿರುವುದು ಗೆಲುವಿನ ಅಂತರ ಹೆಚ್ಚಿಸಿದೆ. ಮೋದಿ ಅಲ್ಲ ಯಾರೆ ಬಂದರೂ ಗೀತಾ ಗೆಲ್ಲುವುದನ್ನು ತಡೆಯಲು ಸಾಧ್ಯವೇ ಇಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರದ ಉದ್ದಕ್ಕೂ ಹೋದ ಕಡೆಯಲ್ಲ ಸಕಾರಾತ್ಮಕ ಅಂಶ ಕಂಡುಬಂದಿದೆ. ಬೈಂದೂರಿನಲ್ಲಿ ನಡೆಸಿದ ಮಹಿಳಾ ಸಮಾವೇಶದಲ್ಲಿ ಅದ್ಭುತ ಯಶಸ್ಸು ಸಿಕ್ಕಿದ್ದು, ಸುಮಾರು 10 ರಿಂದ12 ಸಾವಿರದಷ್ಟು ಮಹಿಳೆಯರು ಇದರಲ್ಲಿ ಭಾಗವಹಿಸಿದ್ದರು. 8 ಕ್ಷೇತ್ರದಲ್ಲೂ ಗೀತಾ ಅವರಿಗೆ ಲೀಡ್ ಬರುತ್ತದೆ ಎಂದರು.
ರಾಹುಲ್ ಗಾಂಧಿಯವರ ಮಾತು ಮತದಾರರನ್ನು ತಲುಪಿವೆ. ಅವರು ಶಿವಮೊಗ್ಗ ಜಿಲ್ಲೆಯ ಜನರಿಗೆ ಅಲ್ಲ ಇಡೀ ದೇಶಕ್ಕೆ ಉತ್ತಮ ಸಂದೇಶ ನೀಡಿದ್ದಾರೆ. ಕೇಂದ್ರ ಬಿಜೆಪಿ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಸುಳ್ಳು ಭರವಸೆ ಮತ್ತು ಅವರ ಗ್ಯಾರಂಟಿಗಳ ಬಗ್ಗೆ ವಿವರಿಸಿದ್ದಾರೆ. ಜನರೂ ಸಹ ಈ ಬಾರಿ ಬದಲಾವಣೆ ಬಯಸಿದ್ದಾರೆ. ಗೀತಾ ನಡೆಸುತ್ತಿರುವ ಚುನಾವಣಾ ಹೋರಾಟದಲ್ಲಿ ಯಶಸ್ವಿಯಾಗುತ್ತಾರೆ ಎಂದರು.
ರಾಘವೇಂದ್ರ ಹಳೆಯ ಪ್ಲೇಟನ್ನೇ ತಿರುವಿ ಹಾಕುತ್ತಿದ್ದಾರೆ. ಅವರಲ್ಲಿ ಹೇಳಿಕೊಳ್ಳುವ ಯಾವ ಸಾಧನೆಯೂ ಇಲ್ಲ. ಹೊಸ ಕೈಗಾರಿಕೆ ಸ್ಥಾಪನೆಗೆ ಕೆಲಸ ಮಾಡಿಲ್ಲ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಅರ್ಧಂಬರ್ಧವಾಗಿದೆ. ಇವೆಲ್ಲವನ್ನೂ ಪೂರೈಸಿದ್ದರೆ ಹೆಚ್ಚಿನ ಪ್ರವಾಸೋದ್ಯಮ, ಕೈಗಾರಿಕೆ ಬರುತ್ತಿದ್ದವು. ಕಾಂಗ್ರೆಸ್ ಇದನ್ನು ಸಾಧಿಸಿ ತೋರಿಸಲಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಮುಖಂಡರಾದ ಪರ್ವೇಜ್ ಅಹಮದ್, ಜಿ.ಡಿ.ಮಂಜುನಾಥ, ಅನಿತಾ ಕುಮಾರಿ, ಶಿ.ಜು. ಪಾಶಾ, ಪದ್ಮನಾಭ ಮತ್ತಿತರರು ಇದ್ದರು.
ವಿಐಎಸ್‌ಎಲ್ ಪುನರಾರಂಭ: ದೇಶದಲ್ಲಿ ಕಾಂಗ್ರೆಸ್ ಹಾಗೂ ಜಿಲ್ಲೆಯಲ್ಲಿ ಗೀತಾ ಗೆದ್ದರೆ 100ಕ್ಕೆ 100ರಷ್ಟು ವಿಐಎಸ್‌ಎಲ್ ಕಾರ್ಖಾನೆಯನ್ನು ಪುನಃ ಪ್ರಾರಂಭಿ ಸುತ್ತೇವೆ. ವಿಮಾನ ನಿಲ್ದಾಣ ಉದ್ಘಾಟನೆ ಮಾಡಿ ಎರಡು ವಿಮಾನ ಹಾರಿಸಿದರೆ ಅದಕ್ಕೆ ಚಾಲನೆ ಕೊಟ್ಟಂತೆ ಅಲ್ಲ. ಇದನ್ನೇ ತಮ್ಮ ಸಾಧನೆ ಎಂಬಂತೆ ಬಿಜೆಪಿ ಸಂಸದರು ಹೇಳಿಕೊಳ್ಳುತ್ತಿದ್ದಾರೆ. ಪ್ರವಾಸೋದ್ಯಮ ಮತ್ತು ವ್ಯಾಪಾರ, ಕೈಗಾರಿಕೆಗೆ ಸಾಕಷ್ಟು ಒತ್ತು ಕೊಡಬೇಕಿದೆ. ಇದರಿಂದ ಇನ್ನಷ್ಟು ವಿಮಾನ ಯಾನ ಹೆಚ್ಚಿಸಲು ಸಾಧ್ಯವಾಗಲಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಈ ಕೆಲಸವನ್ನು ಮಾಡುತ್ತೇನೆ. ವ್ಯಾಪಾರ, ಅಭಿವೃದ್ಧಿಗೆ ನೆರವಾಗಲಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಗ್ಯಾರಂಟಿ ಯೋಜನೆ ಯಾವ ಕಾರಣಕ್ಕೂ ನಿಲ್ಲಲ್ಲ : ಗೀತಾ
ಶಿವಮೊಗ್ಗ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಎಲ್ಲ ವರ್ಗದವರಿಗೆ ವರದಾನವಾಗಿವೆ. ‘ಗ್ಯಾರಂಟಿ’ ಯೋಜನೆಗಳು ಬಡವರ ಕಾರ್ಯಕ್ರಮಗಳಾಗಿದ್ದು, ಅವುಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಮತದಾರರು ವದಂತಿಗೆ ಕಿವಿಕೊಡಕೂಡದು ಎಂದು ಕಾಂಗ್ರೆಸ್ ಅಭ್ಯರ್ಥಿ ಗೀತಾ ಹೇಳಿದರು.
ತಾಲೂಕಿನ ಆಯನೂರು, ಕುಂಸಿ, ಚೋರಡಿ, ಉಳವಿಯಲ್ಲಿ ಶುಕ್ರವಾರ ಆಯೋಜಿಸಿದ್ದ ರೋಡ್ ಶೋನಲ್ಲಿ ಮಾತನಾಡಿದ ಅವರು, ಕ್ಷೇತ್ರದ ಧ್ವನಿಯಾಗಿ ಸಂಸತ್ತಿನಲ್ಲಿ ಸಮಸ್ಯೆಗಳಿಗೆ ಪರಿಹಾರ ಒದಗಿಸುವೆ. ಆದ್ದರಿಂದ ಇಲ್ಲಿ ಒಂದು ಅವಕಾಶ ಕಲ್ಪಿಸಿಕೊಡಿ ಎಂದರು.ಕ್ಷೇತ್ರದಲ್ಲಿ ಬಗರ್ ಹುಕುಂ, ಶರಾವತಿ ಸಂತ್ರಸ್ತರ ಸಮಸ್ಯೆ ಸೇರಿ ಅನೇಕ ಸಮಸ್ಯೆಗಳು ಜೀವಂತವಾಗಿವೆ. ಆ ಎಲ್ಲಾ ಸಮಸ್ಯೆ ಪ್ರಾಮಾಣಿಕವಾಗಿ ಪರಿಹರಿಸುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ. ಆದ್ದರಿಂದ, ಇಲ್ಲಿ ಮತ ನೀಡಿ ಆಶೀರ್ವದಿಸಿ ಎಂದು ಕೋರಿದರು.
ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ ಮಾತನಾಡಿ, ಕೇವಲ ಚುನಾವಣೆಯಲ್ಲಿ ಮತಗಳಿಕೆ ರಾಜಕೀಯ ಸ್ವಾರ್ಥದಿಂದ ಐದು ಗ್ಯಾರಂಟಿ ಯೋಜನೆಗಳನ್ನು ನಾವು ಘೋಷಿಸಿಲ್ಲ. ಇಲ್ಲಿ ಭ್ರಷ್ಟಾಚಾರ, ಬೆಲೆ ಏರಿಕೆ, ನಿರುದ್ಯೋಗ ಮತ್ತು ದುರಾಡಳಿತದ ಫಲವನ್ನು ಉಣ್ಣುತ್ತಿರುವ ರಾಜ್ಯದ ಜನರ ಸಂಕಷ್ಟಗಳ ಹೊರೆಯನ್ನು ತುಸು ಹಗುರು ಗೊಳಿಸುವ ಸದಾಶಯದಿಂದ ಈ ಯೋಜನೆಗಳನ್ನು ಘೋಷಿಸಿದ್ದೇವೆ. ಅದರಂತೆ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಆದ್ದರಿಂದ ಗೀತಾ ಅವರಿಗೆ ಮತ ನೀಡಿ ಆಶೀರ್ವದಿಸಬೇಕು ಎಂದರು.ಕಾಂಗ್ರೆಸ್ ಮುಖಂಡ ಶ್ರೀನಿವಾಸ ಕರಿಯಣ್ಣ ಮಾತನಾಡಿ, ಐದು ಗ್ಯಾರಂಟಿ ಯೋಜನೆಗಳನ್ನು ಜಾತಿ-ಧರ್ಮ-ವರ್ಗ ನೋಡದೆ ಜಾರಿಗೊಳಿಸಿದ್ದೇವೆ. ಈ ಯೋಜನೆಗಳು ಅರ್ಹ ಫಲಾನುಭವಿಗಳ ಕೈಸೇರಿವೆ. ಆದ್ದರಿಂದ, ಈ ಋಣ ತೀರಿಸಲು ಗೀತಕ್ಕಗೆ ಮತ ನೀಡಬೇಕು ಎಂದರು.
ಚುನಾವಣೆ ಜಿಲ್ಲಾ ಉಸ್ತುವಾರಿ ಅನಿಲ್ ಕುಮಾರ್ ತಡಕಲ್, ಅಲೆಮಾರಿ ಅಭಿವೃದ್ಧಿ ನಿಗಮ ಅಧ್ಯಕ್ಷೆ ಜಿ.ಪಲ್ಲವಿ, ಭೋವಿ ಅಭಿವೃದ್ಧಿ ನಿಗಮ ಅಧ್ಯಕ್ಷ ರವಿಕುಮಾರ್, ಬಗರ್ ಹುಕುಂ ಸಮಿತಿ ಮಾಜಿ ಅಧ್ಯಕ್ಷ ಮಸ್ಕರ್ ರಾಜಪ್ಪ, ತುಪ್ಪೂರು ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣ ಮೂರ್ತಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಾಂತವೀರ ನಾಯ್ಕ್, ಕೆಪಿಸಿಸಿ ಸದಸ್ಯ ವೈ.ಎಚ್.ನಾಗರಾಜ, ಟಿ.ನೇತ್ರಾವತಿ, ಚೋರಡಿ ಗ್ರಾಮದ ಕಾಂಗ್ರೆಸ್ ಮುಖಂಡರಾದ ರಾಜೇಶ್, ಲೋಹಿತ್ ಬದನಗೋಡು ಸೇರಿ ನೂರಾರು ಕಾರ್ಯಕರ್ತರು ಇದ್ದರು.
ಗೀತಾ ಪರ ನಟ ವಿಜಯ್ ಮತಯಾಚನೆ ನಟ ದುನಿಯಾ ವಿಜಯ್ ಮಾತನಾಡಿ, ರಾಜ್ಯದ ಕಟ್ಟಕಡೆಯ ಮನುಷ್ಯನಿಗೂ ಪ್ರಾಥಮಿಕ ಅವಶ್ಯಕತೆಗಳಾದ ಅನ್ನ, ಆರೋಗ್ಯ, ಶಿಕ್ಷಣ, ವಸತಿ ಮತ್ತು ಉದ್ಯೋಗ ಭಾಗ್ಯ ಲಭಿಸಬೇಕು. ಬಡವ-ಬಲ್ಲಿದರೆಂಬ ಭೇದ ಇಲ್ಲದೆ ಎಲ್ಲರೂ ನಿರ್ಭಯವಾಗಿ ಘನತೆ ಮತ್ತು ಗೌರವದಿಂದ ಬದುಕುವ ವಾತಾವರಣವನ್ನು ನಿರ್ಮಾಣ ಮಾಡಬೇಕು. ಕೃಷಿ ಸಂಪತ್ತು ಬೆಳೆಯಬೇಕು. ಉದ್ಯಮ ಕ್ಷೇತ್ರದ ಪ್ರಗತಿಯಾಗಬೇಕು. ದುಡಿಯುವ ಕೈಗಳಿಗೆ ಉದ್ಯೋಗ ಸಿಗಬೇಕು. ಆದ್ದರಿಂದ, ಕ್ಷೇತ್ರದ ರಕ್ಷಣೆಗೆ ಗೀತಕ್ಕಗೆ ಮತ ನೀಡಿ ಆಶೀರ್ವದಿಸಿ ಎಂದರು.