ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಲಿಂಗತ್ವ ಅಲ್ಪಸಂಖ್ಯಾತರು ಚುನಾವಣೆಯಲ್ಲಿ ಮತದಾನ ಮಾಡುವ ಮೂಲಕ ದೇಶದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ ಹೇಳಿದರು.ನಗರದ ಡಿಎಆರ್ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ರಕ್ಷ ಸಮುದಾಯ ಸಂಘ, ಅಭಯಧಾಮ, ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಲಿಂಗತ್ವ ಅಲ್ಪಸಂಖ್ಯಾತರಿಗೆ ಹಾಗೂ ದಮನಿತ ಮಹಿಳೆಯರಿಗೆ ಸ್ವೀಪ್ ಮತದಾರರ ಜಾಗೃತಿ ಕಾರ್ಯಕ್ರಮ ಮತ್ತು ಕಾನೂನು ಅರಿವು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿ, ಪ್ರತಿಯೊಬ್ಬರು ನೋಂದಣಿ ಮಾಡಿಕೊಳ್ಳಬೇಕು. ಸಮಾಜದಲ್ಲಿ ಪುರುಷ, ಮಹಿಳೆಯರ ಜೊತೆಯಲ್ಲಿ ತೃತೀಯ ಲಿಂಗಿಗಳು ಅಭಿವೃದ್ಧಿ ಆಗಬೇಕು. ನಿಮ್ಮ ಧ್ವನಿಯೂ ಸಂಸತ್ತಿನಲ್ಲಿ ಕೇಳಿಸ ಬೇಕು. ಅದಕ್ಕಾಗಿ ಎಲ್ಲ ಲಿಂಗತ್ವ ಅಲ್ಪಸಂಖ್ಯಾತರು ಮತದಾನ ಮಾಡುವಂತೆ ಪ್ರೇರೇಪಿಸಬೇಕು ಎಂದು ಲೋಖಂಡೆ ಹೇಳಿದರು.
ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಮತದಾನವನ್ನು ಮಾಡಬೇಕು ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮ ನಡೆಲಾಗುತ್ತಿದೆ. ಸಮಾಜದ ದಮನಿತರು ಮುಖ್ಯವಾಹಿನಿಗೆ ಬರಬೇಕು. ಲಿಂಗತ್ವ ಅಲ್ಪಸಂಖ್ಯಾತರು ಕೂಡ ಸಮಾಜದ ಒಂದು ಭಾಗ. ಲಿಂಗತ್ವ ಅಲ್ಪಸಂಖ್ಯಾತರು ಮತದಾರ ನೋಂದಣಿಯಲ್ಲಿ ಹಿಂದೆ ಉಳಿಯಬಾರದು ಎಂದರು.ಈ ಸಂದರ್ಭ ಜಿಪಂ ಮುಖ್ಯ ಯೋಜನಾಧಿಕಾರಿ ಗಾಯತ್ರಿ ಮಾತನಾಡಿ, ಸಂವಿಧಾನ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕುಗಳನ್ನು ನೀಡಿದೆ. ಆದರೆ, ನಾವು ನಮ್ಮ ಮೂಲಭೂತ ಕರ್ತವ್ಯಗಳನ್ನು ಮರೆಯಬಾರದು. ಮತದಾನ ನಮ್ಮ ಮೂಲಭೂತ ಕರ್ತವ್ಯವಾಗಿದೆ ಎಂದು ಭಾವಿಸಿ ಮತದಾನದಲ್ಲಿ ಭಾಗವಹಿಸಬೇಕು ಎಂದರು.
ಪಯಣ ಸಂಸ್ಥೆಯ ನಿರ್ದೇಶಕಿ ಚಾಂದಿನಿ ಮಾತನಾಡಿ, ತೃತೀಯ ಲಿಂಗ ಜನಾಂಗದವರು ಎಂದು ನಾವು ಮೊದಲು ಒಪ್ಪಿಕೊಳ್ಳಬೇಕು. ಸಮಾಜ ಕೂಡ ನಮ್ಮನ್ನು ಗೌರವಿಸಬೇಕು. ಮತದಾರರ ನೋಂದಣಿಯಲ್ಲಿ ತಮ್ಮ ಲಿಂಗ ನಮೂದಿಸಿಕೊಳ್ಳಲು ಹಿಂದೆ ಸರಿಯುತ್ತಿದ್ದು ಪುರಷ ಅಥವಾ ಮಹಿಳೆ ಎಂದು ಸೇರಿಕೊಳ್ಳುತ್ತಾರೆ. ತೃತೀಯ ಲಿಂಗ ಎಂದು ನಮೂದಿಸಲು ಯಾರೂ ಒಪ್ಪುವುದಿಲ್ಲ ಎಂದ ಅವರು ಸರ್ಕಾರ ಲಿಂಗತ್ವ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡಬೇಕಾಗಿದೆ ಎಂದರು.ಈ ಸಂದರ್ಭ ಜಿಪಂ ಮುಖ್ಯ ಯೋಜನಾಧಿಕಾರಿ ಗಾಯತ್ರಿ ಮತದಾನ ಪ್ರತಿಜ್ಞಾವಿಧಿ ಬೋಧಿಸಿದರು. ಸ್ವೀಪ್ ಕಾರ್ಯಕ್ರಮದ ಕುರಿತು ರಾಜ್ಯಮಟ್ಟದ ಸ್ವೀಪ್ ತರಬೇತುದಾರ ನವೀದ್ ಅಹಮದ್ ಪರ್ವೀಜ್ ಅವರು ಉಪನ್ಯಾಸ ಮತದಾನದ ಕುರಿತು ಜಾಗೃತಿ ಮೂಡಿಸಿದರು.
ಅನಂತರ ವಿವಿಧ ಕ್ರೀಡಾ ಚಟುವಟಿಗಳು, ಮತದಾನ ಜಾಗೃತಿ ಗೀತೆ ಹಾಗೂ ಅರಿವು ಮೂಡಿಸುವ ಕಾರ್ಯಾಗಾರವನ್ನು ನಡೆಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಬಿ.ಕೃಷ್ಣಪ್ಪ, ಜಿಲ್ಲಾ ರಕ್ಷ ಸಮಿತಿ ಅಧ್ಯಕ್ಷ ಮೊಹಮ್ಮದ್ ಸೈಯದ್, ಅಭಯಧಾಮ ಸಂಸ್ಥೆಯ ಜಯಲಕ್ಷ್ಮೀ ಮತ್ತಿತರರು ಇದ್ದರು.