ಉಡುಪಿ: ಉಡುಪಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ 2026–27ನೇ ಸಾಲಿನ ಅಧ್ಯಕ್ಷರಾಗಿ ಹಿರಿಯಡ್ಕದ ಆನಂದ್ ಪಾಲಿಮರ್ಸ್‌ನ ಮಟ್ಟಾರ್ ವಸಂತ ಕಿಣಿ ಅವರು ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ. ಸಂಘದ 34ನೇ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ಕಿಣಿ ಅವರ ಅಧ್ಯಕ್ಷತೆಯಲ್ಲಿ ಜರಗಿತು. ಸಂಘದ ಮಾಜಿ ಅಧ್ಯಕ್ಷ ಹರೀಶ್ ಕುಂದರ್ ಅವರು ಸರ್ ಎಂ. ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೆ ಮಾಲಾರ್ಪಣೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಪಾಧ್ಯಕ್ಷರಾಗಿ ಎಂ. ವಲ್ಲಭ ಭಟ್, ಹೃಷಿಕೇಶ್ ಹೆಗ್ಡೆ, ಕೃಷ್ಣಪ್ರಸಾದ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಕೆ. ರಂಜನ್ ಕಲ್ಕೂರ್, ಕೋಶಾಧಿಕಾರಿಯಾಗಿ ಆನಂದ್ ಶೆಟ್ಟಿ, ಜೊತೆ ಕಾರ್ಯದರ್ಶಿ ಸಮೀರ್ ಮೊಹಮ್ಮದ್, ಸುರೇಂದ್ರ ನಾಯಕ್, ವಿಠ್ಠಲ ಭಕ್ತ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಮಟ್ಟಾರ್ ವಸಂತ ಕಿಣಿ ಮಾತನಾಡಿ ಒಗ್ಗಟ್ಟಿನಿಂದ ಕೈಗಾರಿಕಾ ಅಭಿವೃದ್ಧಿ ಸಾಧ್ಯ, ಕೈಗಾರಿಕಾ ಅಭಿವೃದ್ಧಿಯಿಂದ ಜಿಲ್ಲೆಯ ಅಭಿವೃದ್ಧಿ ಸಾಧ್ಯಎಂಬ ಆಶಯದೊಂದಿಗೆ, ಸಂಘದ ಸದಸ್ಯರ ನಡುವೆ ಉತ್ತಮ ಸಹಕಾರ ಮತ್ತು ಒಗ್ಗಟ್ಟನ್ನು ಬೆಳೆಸುವುದು, ಯುವ ಉದ್ಯಮಿಗಳಿಗೆ ಆಧುನಿಕ ತಂತ್ರಜ್ಞಾನದ ತರಬೇತಿ ನೀಡುವುದು ಮುಂದಿನ ಗುರಿಯಾಗಿದ್ದು, ಇದಕ್ಕೆ ಪ್ರತಿಯೊಬ್ಬ ಸದಸ್ಯರ ಸಹಕಾರ ಅಗತ್ಯವಿದೆ ಎಂದರು. ಸಮಾರಂಭದಲ್ಲಿ ಸಂಘದ ಸ್ಥಾಪಕ ಅಧ್ಯಕ್ಷ ವಿನ್ಸೆಂಟ್ ಪಿಂಟೋ, ಮಾಜಿ ಅಧ್ಯಕ್ಷರುಗಳಾದ ಶ್ರೀಧರ್ ಶೇಣವ, ವಿಶ್ವನಾಥ್ ಭಟ್, ಪ್ರಶಾಂತ್ ಬಾಳಿಗಾ, ಗಣೇಶ್ ಕಿಣಿ, ಜಾನ್ ಡಿಸಿಲ್ವಾ, ಎಂ. ಚಿತ್ತರಂಜನ್ ಭಟ್ ಶುಭ ಹಾರೈಸಿದರು. ಅಧ್ಯಕ್ಷ ಮಟ್ಟಾರ್ ವಸಂತ್ ಕಿಣಿ ಸ್ವಾಗತಿಸಿದರು, ಕಾರ್ಯದರ್ಶಿ ಕೆ. ರಂಜನ್ ಕಲ್ಕೂರ್ ವರದಿ ವಾಚಿಸಿ ವಂದಿಸಿದರು, ಜಗನ್ನಾಥ ಮತ್ತು ವಾಮನ್ ಭಟ್ ಕಾರ್ಯಕ್ರಮ ನಿರೂಪಿಸಿದರು.