ತುಮಕೂರು: ಕ್ಯಾನ್ಸರ್‌ಗೆ ಮೂಲ ಕಾರಣ ಕುಲಾಂತರಿ ತಳಿ ಎಂಬುದು ಹಲವಾರು ಸಂಶೋಧನೆಗಳಿಂದ ದೃಡಪಟ್ಟಿದೆ. ಹಾಗಾಗಿ ರೈತರು ಕುಲಾಂತರಿ ತಳಿ ಬೀಜಗಳನ್ನು ಬಳಸುವುದಿಲ್ಲ ಎಂಬ ನಿರ್ಧಾರವನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಸಿದ್ದಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.
ಕುಲಾಂತರಿ ಬೀಜಗಳಿಂದ ಜನರ ಮೇಲಾಗುತ್ತಿರುವ ದುಷ್ಪರಿಣಾಮ ಹೇಳತೀರದು. ಇದು ಇಡೀ ರಾಜ್ಯವಲ್ಲ, ದೇಶವನ್ನು ವ್ಯಾಪ್ತಿಸಬೇಕಿದೆ. ಮುಂದಿನ ಪೀಳಿಗೆಗೆ ಒಳ್ಳೆಯ ಪರಿಸರವನ್ನು ಬಿಟ್ಟು ಹೋಗಬೇಕಿದೆ. ಇದೇ ಈ ಸತ್ಯಾಗ್ರಹದ ಮೂಲ ಆಶಯವಾಗಿದೆ. ವಿಜ್ಞಾನಿಗಳು, ರೈತರು, ವಿದ್ಯಾರ್ಥಿಗಳು ಪಾಲ್ಗೊಳ್ಳುವ ಮೂಲಕ ನಾಡಿಗೆ ಒಳ್ಳೆಯ ಸಂದೇಶ ನೀಡುತ್ತಿದೆ ಎಂದರು.
ಕಬ್ಬು ಬೆಳೆಗಾರರ ಸಂಘದ ತೇಜಸ್ವಿ ಪಟೇಲ್ ಮಾತನಾಡಿ, ರಾಜಕಾರಣಿಗಳಲ್ಲಿ ಭಿನ್ನಾಭಿಪ್ರಾಯ ಸಹಜ, ಆದರೆ ಕುಲಾಂತರಿ ತಳಿ ಬೀಜಗಳ ಬಗ್ಗೆ ಕೃಷಿ ವಿಜ್ಞಾನಿಗಳಲ್ಲಿಯೂ ಭಿನ್ನಾಭಿಪ್ರಾಯವಿರುವುದು ದುರಂತವೇ ಸರಿ. ಇಲ್ಲಿನ ಕೂಗು ವಿಧಾನಸಭೆ, ಲೋಕಸಭೆ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಚರ್ಚೆಯಾಗಬೇಕು. ಆ ಮೂಲಕ ಒಂದು ಪ್ರಭಲವಾದ ವಿರೋಧ ಸರಕಾರಕ್ಕೆ ಮುಟ್ಟಬೇಕು. ವಿಷಮುಕ್ತ ಆಹಾರ, ಸಾಲ ಮುಕ್ತ ರೈತ ನಮ್ಮ ಉದ್ದೇಶವಾಗಬೇಕು. ಇದಕ್ಕೆ ಬೇಕಾದ ಎಲ್ಲಾ ರೀತಿಯ ನೆರವು ನೀಡುವುದಾಗಿ ತಿಳಿಸಿದರು.ವಿಧಾನಪರಿಷತ್ ಸದಸ್ಯ ಮಧು ಮಾದೇಗೌಡ ಮಾತನಾಡಿ, ಯಾವುದೇ ಹೋರಾಟಕ್ಕೆ ಬೆಲೆ ಬರಬೇಕೆಂದರೆ ಒಗ್ಗಟ್ಟು ಮುಖ್ಯ. ಮನುಷ್ಯ ಮತ್ತು ಪರಿಸರಕ್ಕೆ ಹಾನಿಯುಂಟು ಮಾಡುವ ಕುಲಾಂತರಿ ತಳಿ ಬೀಜಗಳ ಕುರಿತು ರೈತರಿಗೆ ಅರಿವು ಮೂಡಿಸುವಲ್ಲಿ ಯಶಸ್ವಿಯಾದರೆ ಮಾತ್ರ ಪ್ರಭಲವಾಗಿ ಬಹುರಾಷ್ಟ್ರೀಯ ಬೀಜ ಉತ್ಪಾಧನಾ ಕಂಪನಿಗಳ ಈ ಹುನ್ನಾರ ತಡೆಯಲು ಸಾಧ್ಯ ಎಂದರು.
- ಶ್ರೀ ಸಿದ್ದಲಿಂಗ ಸ್ವಾಮೀಜಿ, ಸಿದ್ದಗಂಗಾ ಮಠಾಧ್ಯಕ್ಷರು.
ಗ್ಯಾಟ್ ಒಪ್ಪಂದ ಫಲವಾಗಿ ಒಂದೊಂದೇ ಆತಂಕಕಾರಿ ಬೆಳವಣಿಗೆಗಳು ಕೃಷಿವಲಯದಲ್ಲಿ ಕಾಣುತ್ತಿವೆ. ಬಿಟಿ ಹತ್ತಿಯನ್ನು ಎಷ್ಟೇ ತಡೆದರು ಕಳ್ಳಮಾರ್ಗದ ಮೂಲಕ ದೇಶ ಪ್ರವೇಶಿಸಿ ಹಲವಾರು ಅವಾಂತರಗಳನ್ನು ಸೃಷ್ಟಿಸಿದೆ. ಹಾಗಾಗಿ ಬಿ.ಟಿ.ಬದನೆಯನ್ನು ತಡೆಯಲು ಸಾಧ್ಯವಾಯಿತು. ಅದೇ ರೀತಿ ಕುಲಾಂತರಿ ಬೀಜ ನೀತಿಯನ್ನು ತಡೆಯುವ ಹೋರಾಟ ನಡೆಯಲಿದೆ.- ಅನಿಲ್‌ಹೆಗಡೆ, ಮಾಜಿ ಸದಸ್ಯರು ರಾಜ್ಯಸಭೆ.
ಸುಪ್ರಿಂಕೋರ್ಟ್ ನಿರ್ದೇಶನದಂತೆ ಕುಲಾಂತರಿ ತಳಿ ಬೀಜ ನೀತಿ ರೂಪಿಸಲು ಕೇಂದ್ರ ಸರಕಾರ ತುದಿಗಾಲಲ್ಲಿ ನಿಂತಿದೆ. ಆದರೆ ಇದನ್ನು ಬಳಸಬೇಕಾದ ರೈತರು, ರೈತ ಮುಖಂಡರ ಗಣನೆಗೆ ತೆಗೆದುಕೊಂಡಿಲ್ಲ. ಸಾಧಕ, ಭಾಧಕಗಳ ಕುರಿತು ಚರ್ಚೆಯನ್ನೇ ನಡೆಸದೆ, ನೀತಿ ರೂಪಿಸುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ.- ಸಿ.ಯತಿರಾತು ಪರಿಸರವಾದಿ