ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸೂಕ್ಷ್ಮ ಪರಿಸರ ವಲಯದಲ್ಲಿ ಅರಣ್ಯ ಇಲಾಖೆ ಗಮನಕ್ಕೆ ತಾರದೆ ಕಲ್ಲು ತೆರವಿಗೆ ಹಿರಿಯ ಭೂ ವಿಜ್ಞಾನಿ ಕಾರ್ಯಾನುಮತಿ ನೀಡುವ ಮೂಲಕ ಅಧಿಕಾರ ಮತ್ತು ಕರ್ತವ್ಯ ದುರುಪಯೋಗ ಪಡಿಸಿಕೊಂಡಿದ್ದಾರೆ. ಕಲ್ಲು ತೆಗೆಯಲು ನೀಡಿರುವ ಕಾರ್ಯಾನುಮತಿ ರದ್ದು ಪಡಿಸಬೇಕು ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಕೆ.ಸುರೇಶ್ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ತಾಲೂಕಿನ ಬಾಚಹಳ್ಳಿ ಗ್ರಾಮದ ಸ.ನಂ.೨೪೧ರ ರ ೩.೧೬ ಎಕರೆ ಜಮೀನಿನಲ್ಲಿ ಕಟ್ಟಡದ ಕಲ್ಲನ್ನು(ಕರಿ ಕಲ್ಲು ನಿಕ್ಷೇಪ) ತೆರವು ಗೊಳಿಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಭೂ ವಿಜ್ಞಾನಿ ರಾಜೇಶ್ ಕಳೆದ ಫೆ.೧೭ ರಂದು ಆದೇಶ ನೀಡಿದ್ದರು.ಪತ್ರದ ಸಾರಾಂಶ: ಸ.ನಂ.೨೪೧ ರ ೩.೧೧೬ ಎಕರೆಯಲ್ಲಿ ಹಿರಿಯ ಭೂ ವಿಜ್ಞಾನಿ ರಾಜೇಶ್ ಕಲ್ಲು ತೆಗೆಯಲು ಕಾರ್ಯಾನುಮತಿ ನೀಡಿರುವಂತೆ ಜಮೀನಿನಲ್ಲಿ ದೊಡ್ಡ ಮಟ್ಟದ ಕಲ್ಲುಗಳ ಉಬ್ಬು ಇರುವುದಿಲ್ಲ ಅಲ್ಪ ಭಾಗದಲ್ಲಿದೆ. ಅದು ಕರಿಕಲ್ಲು (ಗ್ರ್ಯಾನೈಟ್) ನಿಕ್ಷೇಪವಾಗಿದೆ. ಉಳಿಕೆ ಪ್ರದೇಶ ಸಮತ್ತಟ್ಟಾಗಿರುತ್ತದೆ. ಅಲ್ಲದೆ ಬಂಡೀಪುರ ಸೂಕ್ಷ್ಮ ಪರಿಸರ ವಲಯದ ೩.೨೧೯ ನಷ್ಟು ಒಳಗಿದೆ.
೨೦೧೨ ರಲ್ಲಿ ಕೇಂದ್ರ ಸರ್ಕಾರ ಪರಿಸರ ಮತ್ತು ಅರಣ್ಯ ಸಚಿವಾಲಯ ಘೋಷಣೆ ಪ್ರಕಾರ ಸೂಕ್ಷ್ಮ ಪರಿಸರ ವಲಯದ ಗಡಿಯೊಳಗೆ ಬರುವ ಗ್ರಾಮಗಳ ವ್ಯಾಪ್ತಿಯಲ್ಲಿ ವಾಣಿಜ್ಯ ಚಟುವಟಿಕೆ,ಗಣಿಗಾರಿಕೆ ಹಾಗು ಇನ್ನಿತರೆ ಯಾವುದೇ ಸಣ್ಣ ಮತ್ತು ದೊಡ್ಡ ಕೈಗಾರಿಕೆಗಳನ್ನು ಕೈಗೊಳ್ಳುವುದನ್ನು ನಿರ್ಬಂಧವಿದೆ.ಕೇಂದ್ರ ಸರ್ಕಾರದ ಅಧಿಸೂಚನೆ ಹೊರಡಿಸಿದ್ದರೂ ಅಧಿ ಸೂಚನೆಯ ಸೂಚನೆ,ಷರತ್ತು ಪಾಲಿಸದೆ ಕಲ್ಲು ತೆಗೆಯಲು ಕಾರ್ಯಾನುಮತಿ ನೀಡಿ ನಿಯಮ ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿದೆ. ಆದರೂ ಸ.ನಂ.೨೪೧ ರಲ್ಲಿ ೩-೧೬ ಎಕರೆ ಕಟ್ಟಡದ ಕಲ್ಲು ತೆರವುಗೊಳಿಸಲು ಕಾರ್ಯಾನುಮತಿ ಸಿಕ್ಕಿರುವ ಜಮೀನಿನ ಮಾಲೀಕರು ಅರಣ್ಯ ಇಲಾಖೆ ಅನುಮತಿ ನೀಡುವಂತೆ ಒತ್ತಡ ತರುತ್ತಿದ್ದಾರೆ.
ಹಿರಿಯ ಭೂ ವಿಜ್ಞಾನಿ ಮೇಲೆ ಕ್ರಮವಾಗುತ್ತಾ?: ಗಣಿ ಮತ್ತುಭೂ ವಿಜ್ಞಾನ ಇಲಾಖೆ ಹಿರಿಯ ಭೂ ವಿಜ್ಞಾನಿ ರಾಜೇಶ್ ಅರಣ್ಯ ಇಲಾಖೆ ಗಮನಕ್ಕೆ ತಾರದೆ ಕೃಷಿ ಚಟುವಟಿಕೆ ನೆಪದಲ್ಲಿ ಅದು ಸೂಕ್ಷ್ಮ ಪರಿಸರದೊಳಗೆ ಕಲ್ಲು ತೆಗೆಯಲು ಅನುಮತಿ ನೀಡಿದ್ದು ಕಾನೂನು ಬಾಹಿರ ಕ್ರಮವಾಗಿದೆ.ಈ ಬಗ್ಗೆ ಎಸಿಎಫ್ ಜಿಲ್ಲಾಧಿಕಾರಿಗೆ ಪತ್ರ ಬರೆದು ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.ಈ ಹಿನ್ನಲೆ ಸೂಕ್ಷ್ಮ ಪರಿಸರ ವಲಯದಲ್ಲಿ ಅಕ್ರಮ ಗಣಿಗಾರಿಕೆ ಅವಕಾಶ ಮಾಡಿಕೊಡಲೆತ್ನಿಸಿದ ಹಿರಿಯ ಭೂ ವಿಜ್ಞಾನಿ ಮೇಲೆ ಜಿಲ್ಲಾಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಾರಾ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.