ಕೃಷಿ ಇಲಾಖೆಗೆ ಡಿಸಿ ತಾಕೀತು । ಕಳಪೆ ಬೀಜ, ಗೊಬ್ಬರ ಮಾರಾಟ ತಡೆಗೆ ಸೂಚನೆ
ರೈತರಿಗೆ ಸರ್ಕಾರದಿಂದ ಸಿಗುವ ರಿಯಾಯಿತಿ ದರದ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಇತರೆ ಯೋಜನೆಗಳ ಲಾಭವನ್ನು ಸಕಾಲದಲ್ಲಿ ರೈತರಿಗೆ ತಲುಪಿಸುವಂತೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಜಿಲ್ಲಾ ಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ವಿತರಣೆ ಹಾಗೂ ಇಲಾಖೆಯ ಯೋಜನೆಗಳ ಅನುಷ್ಠಾನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂಗಾರು ಹಂಗಾಮು ಆರಂಭವಾಗುತ್ತಿದ್ದು, ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆಯಲ್ಲಿ ಯಾವುದೇ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಿ ಎಂದರು.ಜಿಲ್ಲೆಯ ರೈತರು ಅಧಿಕೃತ ಮಾರಾಟಗಾರರಿಂದ ಮಾತ್ರ ಬೀಜ ಖರೀದಿಸಬೇಕು. ರಿಯಾಯಿತಿ ದರದ ಬಿತ್ತನೆ ಬೀಜಗಳನ್ನು ಪಡೆದುಕೊಂಡು ಬಿತ್ತನೆ ಮಾಡಬೇಕು. ಬೀಜಗಳನ್ನು ರೈತರು ಖರೀದಿಸಿದ ನಂತರ ಕಡ್ಡಾಯವಾಗಿ ರಶೀದಿ ಪಡೆದು, ಅದನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ರೈತರು ಸಹ ಯಾವುದೇ ಕೃಷಿ ಪರಿಕರಗಳನ್ನು ಮುಖ್ಯವಾಗಿ ಬಿತ್ತನೆ ಬೀಜಗಳನ್ನು ಅನಧಿಕೃತ ಅಥವಾ ಪರವಾನಿಗೆ ಇಲ್ಲದ ಮಾರಾಟಗಾರರಿಂದ ಖರೀದಿಸಬಾರದು. ತಾಲೂಕಿನ ಯಾವುದೇ ಭಾಗದಲ್ಲಿ ಅಂತಹ ಕಾನೂನು ಬಾಹಿರ ಕೃಷಿ ಪರಿಕರಗಳ ಸಂಗ್ರಹ, ಬಿತ್ತನೆ ಬೀಜ ಮಾರಾಟ ಮಾಡುವುದು ಕಂಡು ಬಂದಲ್ಲಿ ಮಾಹಿತಿ ನೀಡಬೇಕು. ನಕಲಿ ಸಂಸ್ಥೆಗಳು, ಅನಧಿಕೃತ ವ್ಯಕ್ತಿಗಳ ಮೇಲೆ ನಿಗಾ ವಹಿಸಬೇಕು. ಹೊರ ಜಿಲ್ಲೆಗಳಿಗೆ ಬಿತ್ತನೆ ಬೀಜ, ರಸಗೊಬ್ಬರ ಮಾರಾಟ, ಸಾಗಾಟವಾಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಕೃಷಿ ತಜ್ಞರ ಶಿಫಾರಸಿನಂತೆ ವಿವಿಧ ರಸಗೊಬ್ಬರಗಳ ಸಂಯೋಜನೆಯೊಂದಿಗೆ ಬಳಸಬೇಕು. ಆದರೆ, ಬೆಳೆಗಳಿಗೆ ಸಾರಜನಕ, ರಂಜಕ, ಪೊಟ್ಯಾಷ್ ರಸಗೊಬ್ಬರಗಳನ್ನು 4:2:1ರ ಅನುಪಾತದಲ್ಲಿ ಬಳಸಬೇಕು. ಈಚಿನ ವರ್ಷಗಳಲ್ಲಿ ರೈತರು ಬಳಸುತ್ತಿರುವ ರಸಗೊಬ್ಬರಗಳ ಅನುಪಾತವು ರಾಜ್ಯದಲ್ಲಿ 5:3:1 ಆಗಿರುತ್ತದೆ. ಇದನ್ನು ಸಮತೋಲನಾತ್ಮಕ ಗೊಬ್ಬರಗಳ ಬಳಕೆ ಉತ್ತೇಜಿಸಲು ಪೊಟ್ಯಾಷ್ ಯುಕ್ತ ಸಂಯುಕ್ತ ರಸಗೊಬ್ಬರಗಳ ಬಳಕೆ ಪ್ರೇರೇಪಿಸುವುದು ಮುಖ್ಯ ಎಂದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ ಚಿಂತಾಲ್, ಉಪ ಕೃಷಿ ನಿರ್ದೇಶಕ ಅಶೋಕ, ಲೀಡ್ ಫರ್ಟಿಲೈಸರ್ಸ್ ಸಂಸ್ಥೆ ಅಧಿಕಾರಿ ಉಮೇಶ, ರಸಗೊಬ್ಬರ ಪೂರೈಸುವ ಸಂಸ್ಥೆಯ ಮಾಲೀಕರು, ಬಿತ್ತನೆ ಬೀಜ ಸರಬರಾಜು ಮಾಡುವ ಮಾಲೀಕರು, ವಿತರಕರು ಇದ್ದರು.