ಹೂವಿನಹಡಗಲಿ: ನಿಮಗೆ ಜನ್ಮ ನೀಡಿ ತಮ್ಮ ಬೆವರಿನ ಹಣದಿಂದ ಉತ್ತಮ ಶಿಕ್ಷಣ ಕೊಡಿಸುತ್ತಿರುವ ಹೆತ್ತವರ ಋಣ ತೀರಿಸಿ ಗೌರವ ಹೆಚ್ಚಿಸಬೇಕೆಂದು ಸಾಹಿತಿ ಇಸ್ಮಾಯಿಲ್ ಯಲಿಗಾರ ಹೇಳಿದರು.ತಾಲೂಕಿನ ಹೊಳಲು ಗ್ರಾಮದ ಸಾಧನಾ ಸಿಬಿಎಸ್ಸಿ ಶಾಲೆಯಲ್ಲಿ ಆಡಳಿತ ಮಂಡಳಿಯಿಂದ ಆಯೋಜಿಸಿದ್ದ ಪ್ರೇರಣಾ ವಿಚಾರ ಸಂಕಿರಣದಲ್ಲಿ ಶಾಲಾ ಮಕ್ಕಳಿಗೆ ವ್ಯಕ್ತಿತ್ವ ವಿಕಸನ ಕುರಿತು ಮಾತನಾಡಿದರು.
ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಸದುದ್ದೇಶದಿಂದ ಪೂಜಾರ್ ಮನೆತನದವರು ವಿದ್ಯಾ ಸಂಸ್ಥೆ ಕಟ್ಟಿ ಬೆಳೆಸಿದ್ದಾರೆ. ಒಂದು ಸಾಧಾರಣ ಹೋಬಳಿಯಲ್ಲಿ ಸಿಬಿಎಸ್ಸಿ ಶಾಲೆ ತೆರೆದು ಪಟ್ಟಣ ಪ್ರದೇಶದಲ್ಲಿ ದೊರೆಯುವ ಎಲ್ಲ ಶೈಕ್ಷಣಿಕ ಸೌಲಭ್ಯಗಳನ್ನು ನಿಮಗೆ ನೀಡುತ್ತಿರುವುದು ಶ್ಲಾಘನೀಯ ಸೇವೆ ಎಂದು ಪ್ರಶಂಸಿಸಿದರು.
ದಿನಪತ್ರಿಕೆ, ನಿಯತಕಾಲಿಕೆಗಳನ್ನು ಪ್ರತಿನಿತ್ಯ ಓದುವ ಹವ್ಯಾಸ ಬೆಳೆಸಿಕೊಳ್ಳಿ. ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸಲು ಸತತ ಅಧ್ಯಯನ ಮಾಡಬೇಕು. ದೇಶ, ವಿದೇಶ, ಕ್ರೀಡೆ, ಸಾಹಿತ್ಯ, ರಂಗಭೂಮಿ ಮೊದಲಾದ ವಿಷಯಗಳ ಕುರಿತು ಆಸಕ್ತಿ ಬೆಳೆಸಿಕೊಳ್ಳಲು ಸಲಹೆ ನೀಡಿದರು.ಗಾಂಧೀಜಿ, ಅಂಬೇಡ್ಕರ್, ಸಾವಿತ್ರಿಬಾಯಿ ಫುಲೆ, ಸ್ವಾಮಿ ವಿವೇಕಾನಂದ, ಚಾರ್ಲಿ ಚಾಪ್ಲಿನ್ ಮೊದಲಾದ ಮಹಾನ್ ನಾಯಕರು ಕಡು ಬಡತನದಲ್ಲಿ ಹುಟ್ಟಿ ಬೆಳೆದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಅವರ ನಡೆ-ನುಡಿ ಅನುಸರಿಸಿದರೆ ಸಾಧನೆ ಮಾಡಿಲು ಸ್ಫೂರ್ತಿ ಸಿಗುತ್ತದೆ ಎಂದರು.