ಕನ್ನಡಪ್ರಭ ವಾರ್ತೆ ಹೊಸಪೇಟೆ
ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಹೆಪಟೈಟಿಸ್ ಸಿ ರೋಗಿಗಳ ಡಯಾಲಿಸಿಸ್ ಘಟಕ ಆರಂಭಿಸಲಾಗಿದ್ದು, ಘಟಕವು ರೋಗಿಗಳಿಗೆ ವರದಾನವಾಗಲಿದೆ. ಇದರ ಸದುಪಯೋಗ ಪಡೆಯಬೇಕು ಎಂದು ಶಾಸಕ ಎಚ್.ಆರ್. ಗವಿಯಪ್ಪ ಹೇಳಿದರು.ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಥಾಪಿಸಲಾಗಿರುವ ಹೆಪಟೈಟಿಸ್ ಸಿ ರೋಗಿಗಳ ಡಯಾಲಿಸಿಸ್ ಘಟಕ, ಸ್ನೇಹಾ ಕ್ಲಿನಿಕ್ ಹಾಗೂ ಪೌಷ್ಟಿಕ ಪುನರ್ ವಸತಿ ಕೇಂದ್ರಗಳನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಒಟ್ಟು 19 ಹೆಪಟೈಟಿಸ್ ಬಿ ಹಾಗೂ ಸಿ ರೋಗಿಗಳು ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಇವರಿಗಾಗಿ ಪ್ರತ್ಯೇಕ ಡಯಾಲಿಸಿಸ್ ಘಟಕ ಇರದ ಕಾರಣ ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲಾಸ್ಪತ್ರೆಗಳಿಗೆ ಕಳುಹಿಸಕೊಡಲಾಗುತ್ತಿತ್ತು. ಸದ್ಯ ನಗರದ ಸರ್ಕಾರಿ ಆಸ್ಪತ್ರೆಯಲ್ಲಿರುವ 6 ಡಯಾಲಿಸ್ ಯಂತ್ರಗಳಲ್ಲಿ 1 ಯಂತ್ರವನ್ನು ಹೆಪಟೈಟಿಸ್ ಸಿ ರೋಗಿಗಳ ಡಯಾಲಿಸಿಸ್‌ಗಾಗಿ ಮೀಸಲು ಇರಿಸಲಾಗಿದೆ. ಉಳಿದ 5 ಡಯಾಲಿಸಿಸ್ ಯಂತ್ರಗಳ ಪೈಕಿ ಒಂದು ಯಂತ್ರ ತಾಂತ್ರಿಕ ಕಾರಣದಿಂದ ಸ್ಥಗಿತಗೊಂಡಿದೆ. 4 ಡಯಾಲಿಸಿಸ್ ಯಂತ್ರಗಳಲ್ಲಿ ಒಟ್ಟು 25 ಸಾಮಾನ್ಯ ರೋಗಿಗಳು ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದಾರೆ. ದಿನ ಒಂದಕ್ಕೆ 3 ಸೈಕಲ್‌ಗಳಲ್ಲಿ ಡಯಾಲಿಸಿಸ್ ನಡೆಸಲಾಗುತ್ತಿದೆ. ತಿಂಗಳಿಗೆ 280ಕ್ಕೂ ಹೆಚ್ಚು ಸೈಕಲ್‌ಗಳಲ್ಲಿ ಡಯಾಲಿಸ್ ನಡೆಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಹೆಪಟೈಟಿಸ್ ಬಿ ರೋಗಿಗಳಿಗೂ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಡಯಾಲಿಸಿಸ್ ಸೌಲಭ್ಯ ನೀಡಲಾಗುವುದು ಎಂದರು.10ರಿಂದ 19 ವಯೋಮಾನದ ಹದಿಹರೆಯದವರಲ್ಲಿ ಕಂಡುಬರುವ ಆರೋಗ್ಯ ಹಾಗೂ ಮಾನಸಿಕ ಸಮಸ್ಯೆಗಳ ಪರಿಹಾರಕ್ಕಾಗಿ ಆಪ್ತ ಸಮಾಲೋಚನೆ ನೀಡಲು ಸ್ನೇಹಾ ಕ್ಲಿನಿಕ್ ಸಹ ಆಸ್ಪತ್ರೆಯಲ್ಲಿ ತೆರೆಯಲಾಗಿದೆ. ಇದರೊಂದಿಗೆ ತೀವ್ರ ತರನಾದ ಅಪೌಷ್ಠಿಕತೆ ಹೊಂದಿರುವ ಶಿಶು ಹಾಗೂ ಮಕ್ಕಳ ಆರೈಕೆಗಾಗಿ ಪೌಷ್ಟಿಕಾಂಶ ಪುನರ್ವಸತಿ ಕೇಂದ್ರವನ್ನು ಸಹ ತೆರೆಯಲಾಗಿದೆ ಎಂದು ಶಾಸಕರು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಲ್.ಆರ್. ಶಂಕರ್ ನಾಯ್ಕ, ಆಡಳಿತ ವೈದ್ಯಾಧಿಕಾರಿ ಡಾ. ಹರಿಪ್ರಸಾದ್ ಸೇರಿದಂತೆ ಇತರೆ ಸಿಬ್ಬಂದಿ ಇದ್ದರು.