ಕೊಪ್ಪಳ:
ಮಹಿಳೆಯರು ಕಾನೂನು ಸೇವಾ ಪ್ರಾಧಿಕಾರಗಳ ಮೂಲಕ ಉಚಿತ ಕಾನೂನು ಸೇವೆ ಪಡೆದುಕೊಳ್ಳುವಂತೆ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಕೊಪ್ಪಳ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ಎಸ್. ದರಗದ್ ಹೇಳಿದರು.ನಗರದ ಕೃಷಿ ವಿಸ್ತರಣಾ ತರಬೇತಿ ಸಂಸ್ಥೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ದೇವದಾಸಿ ಪುನರ್ವಸತಿ ಯೋಜನೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸಹಯೋಗದಲ್ಲಿ ಮಾಜಿ ದೇವದಾಸಿ ಮಹಿಳೆಯರಿಗೆ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕಾಯಂ ಜನತಾ ನ್ಯಾಯಾಲಯದ ಮೂಲಕ ಸಾರ್ವಜನಿಕರು ವ್ಯಾಜ್ಯ ಬೇಗ ಇತ್ಯರ್ಥಪಡಿಸಿಕೊಳ್ಳಬಹುದು. ಸರ್ಕಾರಿ ಇಲಾಖೆಗಳಿಂದ ತೊಂದರೆಗಳಾಗಿದ್ದರೆ ಜನತಾ ನ್ಯಾಯಾಲಯದ ಮೂಲಕ ಪರಿಹಾರ ಪಡೆದುಕೊಳ್ಳಬಹುದು ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಪಿ.ವೈ. ಶೆಟ್ಟೆಪ್ಪನವರ, ಕೃಷಿ ವಿಸ್ತರಣಾ ತರಬೇತಿ ಕೇಂದ್ರದ ವಿಸ್ತರಣಾ ಮುಂದಾಳು ಡಾ. ಎಂ.ವಿ. ರವಿ, ಶಿಶು ಅಭಿವೃದ್ಧಿ ಯೋಜನಾಧಿಕಾರ ರೋಹಿಣಿ ಕೊಟಗಾರ, ದೇವದಾಸಿ ಪುನರ್ವಸತಿ ಯೋಜನೆಯ ಯೋಜನಾಧಿಕಾರಿ ಪೂರ್ಣಿಮಾ, ತಂಬಾಕು ವ್ಯಸನ ಕೇಂದ್ರ ಸೈಕಾಲೋಜಿಸ್ಟ್ ಶಾಂತಾ ಕಟ್ಟಿಮನಿ ವಿವಿಧ ವಿಷಯಗಳ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ 90 ಮಹಿಳೆಯರಿಗೆ ಆರೋಗ್ಯ ಇಲಾಖೆಯಿಂದ ಉಚಿತ ಆರೋಗ್ಯ ತಪಾಸಣೆ ಮಾಡಲಾಯಿತು. ಕಿಮ್ಸ್ ವೈದ್ಯಾಧಿಕಾರಿ ಡಾ. ಚನ್ನಕೇಶವ, ಡಾ. ಮುಖೇಶ, ಡಾ. ಅಮರೇಶ, ಡಾ. ಸುಷ್ಮಾ, ಸಖಿ ಕೇಂದ್ರದ ಯಮುನಾ, ಪಿಐಒ ರೇಣುಕಾ, ಸಕ್ಕೂಬಾಯಿ, ಕೃಷ್ಣವೇಣಿ, ಅನುಷ್ಠಾನಾಧಿಕಾರಿ ದಾದೇಸಾಬ್ ಹಿರೇಮನಿ ಇದ್ದರು.