ನರೇಗಾ ಯೋಜನೆಯಡಿ ನೆರವು ಪಡೆದು ಸ್ವಾವಲಂಬಿಗಳಾಗಿ

KannadaprabhaNewsNetwork |  
Published : Sep 19, 2024, 01:47 AM IST
ಕಾರ್ಯಕ್ರಮದಲ್ಲಿ ಎಸ್.ಕೆ.ಇನಾಮದಾರ ಮಾತನಾಡಿದರು. | Kannada Prabha

ಸಾರಾಂಶ

ವೈಯಕ್ತಿಕ ವಿತರಣಾ ಮೇಳ ಅಭಿಯಾನದ ಮೂಲಕ ಹೊಸ ಉದ್ಯೋಗ ಚೀಟಿ ಪಡೆದ ಕುಟುಂಬಗಳಿಗೆ ವೈಯಕ್ತಿಕ ಕಾಮಗಾರಿಗಳನ್ನು ಪಡೆದುಕೊಳ್ಳುವಂತೆ ಪ್ರಚಾರ ಮಾಡುತ್ತಿದ್ದೇವೆ

ನರಗುಂದ: ಗ್ರಾಮೀಣ ಪ್ರದೇಶದ ಕೂಲಿಕಾರರು ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳಿಗೆ ಆರ್ಥಿಕ ನೆರವು ಪಡೆದು ಜೀವನ ರೂಪಿಸಿಕೊಳ್ಳಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಕೆ. ಇನಾಮದಾರ ಹೇಳಿದರು.

ತಾಲೂಕಿನ ಕೊಣ್ಣೂರು ಗ್ರಾಪಂ ಕಚೇರಿ ಆವರಣದಲ್ಲಿ ಜರುಗಿದ ನರೇಗಾ ಯೋಜನೆಯ ವೈಯಕ್ತಿಕ ಕಾಮಗಾರಿಗಳ ವಿತರಣಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.ಕೂಲಿಕಾರರ ಜೀವನಮಟ್ಟ ಸುಧಾರಿಸುವ ಕಾಮಗಾರಿಗಳು ಯೋಜನೆಯಡಿ ಲಭ್ಯವಿದ್ದು, ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆದು ಯೋಜನೆಯ ಲಾಭ ಪಡೆದುಕೊಳ್ಳಿ. ಉದ್ಯೋಗ ಚೀಟಿ ಪಡೆದ ಕುಟುಂಬ ವರ್ಗ ವರ್ಷಕ್ಕೆ 100 ದಿನ ಕೆಲಸ ಮಾಡಿದರೆ ವಾರ್ಷಿಕವಾಗಿ ₹34800 ಪಡೆಯುತ್ತಾರೆ. ಅರ್ಹ ಫಲಾನುಭವಿಗಳು ದನದ ಕೊಟ್ಟಿಗೆ, ಬಚ್ಚಲು ಗುಂಡಿ, ಕೋಳಿ ಶೆಡ್, ಕೃಷಿ ಹೊಂಡ ಕಾಮಗಾರಿ ಮಾಡಿಕೊಳ್ಳಲು ಸಾಧ್ಯವಿದೆ. ತೋಟಗಾರಿಕೆ ಇಲಾಖೆಯಡಿ ಬೆಳೆಗಳಾದ ತೆಂಗು, ಮಾವು, ದಾಳಿಂಬೆ, ಸೀಬೆ, ಗುಲಾಬಿ, ಮಲ್ಲಿಗೆ, ಬಾಳೆ ಮತ್ತು ಪಪ್ಪಾಯಿ ಸೇರಿದಂತೆ ವಿವಿಧ ಬೆಳೆಗಳನ್ನು ಆರ್ಥಿಕ ನೆರವು ಪಡೆದು ಬೆಳೆದುಕೊಳ್ಳಬಹುದು ಎಂದರು.

ಗಂಡು ಮತ್ತು ಹೆಣ್ಣು ಕೂಲಿಕಾರರಿಗೆ ಸಮಾನವಾಗಿ ₹349 ದಿನವೊಂದಕ್ಕೆ ಕೂಲಿ ಮೊತ್ತ ನೀಡಲಾಗುತ್ತದೆ. ಕೂಲಿಕಾರರ ಕೇಂದ್ರ ಬಿಂದುವಾಗಿರುವ ನರೇಗಾ ಯೋಜನೆಯು ಗ್ರಾಮೀಣ ಕೂಲಿಕಾರರಿಗೆ ಕೈತುಂಬ ಉದ್ಯೋಗ ನೀಡುವ ಕಾರ್ಯ ಮಾಡುತ್ತಿದೆ. ಮಹಿಳೆಯರು ಮತ್ತು ವಿಶೇಷಚೇತನರಿಗೆ ಯೋಜನೆಯಡಿ ಕೆಲಸದಲ್ಲಿ ವಿಶೇಷ ರಿಯಾಯಿತಿ ಇದೆ. ಕೂಲಿಕಾರರಿಗೆ ಇರುವ ಸೌಲಭ್ಯಗಳನ್ನು ಯೋಜನೆಯಡಿ ಪಡೆದುಕೊಂಡು ಗ್ರಾಮೀಣ ಪ್ರದೇಶದ ಕೂಲಿಕಾರರು ಕೆಲಸದ ಸಲುವಾಗಿ ಬೇರೆ ಸ್ಥಳಕ್ಕೆ ಹೋಗದೇ ಇದ್ದೂರಲ್ಲೇ ನರೇಗಾದಲ್ಲಿ ಕೆಲಸ ಮಾಡಿ ಎಂದು ತಿಳಿಸಿದರು.

ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಂಜುನಾಥ ಗಣಿ ಮಾತನಾಡಿ, ವೈಯಕ್ತಿಕ ವಿತರಣಾ ಮೇಳ ಅಭಿಯಾನದ ಮೂಲಕ ಹೊಸ ಉದ್ಯೋಗ ಚೀಟಿ ಪಡೆದ ಕುಟುಂಬಗಳಿಗೆ ವೈಯಕ್ತಿಕ ಕಾಮಗಾರಿಗಳನ್ನು ಪಡೆದುಕೊಳ್ಳುವಂತೆ ಪ್ರಚಾರ ಮಾಡುತ್ತಿದ್ದೇವೆ. ಯೋಜನೆಯಡಿ ಇರುವ ವಿವಿಧ ಕಾಮಗಾರಿಗಳನ್ನು ಪಡೆದುಕೊಳ್ಳಲು ಇಚ್ಛಿಸುವ ಕೂಲಿಕಾರರು ಗ್ರಾಪಂ ಕಚೇರಿಗೆ ಬಂದು ಬೇಡಿಕೆ ಸಲ್ಲಿಸಬಹುದು ಎಂದರು.

ಈ ವೇಳೆ ವೈಯಕ್ತಿಕ ಕಾಮಗಾರಿಗಳ ವಿತರಣಾ ಮೇಳಕ್ಕೆ ಗ್ರಾಪಂ ಅಧ್ಯಕ್ಷೆ ಸಿದ್ದವ್ವ ಕಳಸಣ್ಣವರ ಹಾಗೂ ಉಪಾಧ್ಯಕ್ಷ ಶಂಕರಗೌಡ ಪಾಟೀಲ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯರಾದ ಮಮತಾಜ್ ಬೇಗಂ ಕುರ್ಲಗೇರಿ, ಹುಸೇನಬೀ ಬುರುಡಿ, ಜ್ಯೋತಿ ವಾಸನ, ಹನಮಂತಪ್ಪ ಚಿನ್ನಾರ್, ಕೆ.ಟಿ. ಚವಾಣ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಸಂಜೀವಿನಿ ಮಹಿಳಾ ಒಕ್ಕೂಟದ ಸದಸ್ಯರು ಇದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ