ವನವಾಸಿ ಕಲ್ಯಾಣ ಕರ್ನಾಟಕ ಪೂರ್ವ ವಿದ್ಯಾರ್ಥಿಗಳ ರಾಜ್ಯಮಟ್ಟದ ಸ್ನೇಹ ಸಮ್ಮೇಳನ
ನಮ್ಮ ವಿದ್ಯಾರ್ಥಿ ನಿಲಯದಲ್ಲಿ ಕಲಿತ ಮಕ್ಕಳು ಸಂಸ್ಕಾರದ ಜೊತೆ ಶಿಕ್ಷಣ ಪಡೆದು ಜೀವನದಲ್ಲಿ ಸಾಧಕರಾಗಿದ್ದಾರೆ. ಶಿಕ್ಷಣ, ಆರ್ಥಿಕವಾಗಿ ತೀರ ಹಿಂದಿದ್ದ ಸಿದ್ದಿ, ವಾಲ್ಮೀಕಿ, ಕುಂಬ್ರಿ ಮರಾಠಿ, ಕುಣಬಿ ಮುಂತಾದ ಜನಾಂಗಗಳ ಮಧ್ಯೆ ಕಾರ್ಯಕ್ರಮಗಳನ್ನು ಆಯೋಜಿಸುವುದು ಕಷ್ಟಸಾಧ್ಯವಾದುದು ಎಂದು ಅಖಿಲ ಭಾರತೀಯ ವನವಾಸಿ ಕಲ್ಯಾಣ ಆಶ್ರಮದ ಪೂರ್ವೋತ್ತರ ಕ್ಷೇತ್ರದ ನಿಲಯಗಳ ಪ್ರಮುಖ ಕೃಷ್ಣಮೂರ್ತಿ ಹೇಳಿದರು.
ವನವಾಸಿ ಕಲ್ಯಾಣ ಸಂಸ್ಥೆಯು ಪಟ್ಟಣದ ವೆಂಕಟ್ರಮಣ ಮಠದಲ್ಲಿ ಪೂರ್ವ ವಿದ್ಯಾರ್ಥಿಗಳ ಒಂದು ದಿನದ ರಾಜ್ಯಮಟ್ಟದ ಸ್ನೇಹ ಸಮ್ಮೇಳನದಲ್ಲಿ ಮಾತನಾಡಿದರು.ಅಭಿಯಾನದ ಮೂಲಕ ಗ್ರಾಮಗಳಲ್ಲಿ ಜಾಗೃತಿ ಮೂಡಿಸಿದ ಪರಿಣಾಮ ಮಕ್ಕಳನ್ನು ವನವಾಸಿ ಬಂಧುಗಳು ಸಂಸ್ಥೆಯ ವಿದ್ಯಾರ್ಥಿ ನಿಲಯಗಳಿಗೆ ಸೇರಿಸಲು ಪ್ರಾರಂಭಿಸಿದರು. ಇಂದು ಅನೇಕ ವನವಾಸಿ ಜನಾಂಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆದು ಸೈನ್ಯದಲ್ಲಿ, ಸಮಾಜ ಸೇವೆಯಲ್ಲಿ, ಯೋಗ ಸಾಧನೆಯಲ್ಲಿ, ಸರಕಾರದ ವಿವಿಧ ಹುದ್ದೆಗಳಲ್ಲಿ ಅಲಂಕೃತರಾಗಲು ಸಾಧ್ಯವಾಯಿತು. ನಾವು ನಮ್ಮ ವ್ಯಕ್ತಿಗತ ಜೀವನದ ಜೊತೆಗೆ ಸಮಾಜದ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಾಗಿದ್ದು ನಮ್ಮ ಕರ್ತವ್ಯ ಎಂದರು.
ಅಖಿಲ ಭಾರತೀಯ ಕೇಂದ್ರ ಕಾರ್ಯಾಲಯ ಯಶ್ಪುರದ ಮುಖ್ಯಸ್ಥ ಶ್ರೀಪಾದ್ ಮಾತನಾಡಿ, ಅಖಿಲ ಭಾರತೀಯ ವನವಾಸಿ ಕಲ್ಯಾಣ ಸಂಸ್ಥೆಯ ಸಂಸ್ಥಾಪಕರಾದ ದಿ. ಬಾಳಾ ಸಾಹೇಬ್ ದೇಶಪಾಂಡೆರವರ ಸ್ಮಾರಕ ಭವನ ಕೇಂದ್ರ ಕಾರ್ಯಾಲಯ ಜಸ್ಪುರದಲ್ಲಿ ನಿರ್ಮಾಣ ಮಾಡಲು ತೀರ್ಮಾನಿಸಿದಂತೆ ಪೂರ್ವ ವಿದ್ಯಾರ್ಥಿಗಳು, ಕಾರ್ಯಕರ್ತರು, ಎಲ್ಲರೂ ಸಹಕರಿಸಬೇಕು ಎಂದರು.
ತಮ್ಮನ್ನು ತಿದ್ದಿ ತೀಡಿ ಸಂಸ್ಕಾರವಂತರನ್ನಾಗಿ ಮಾಡಿದ ಗುರುಗಳಿಗೆ ಸನ್ಮಾನಿಸುವ ಕಾರ್ಯಕ್ರಮವನ್ನು ಪೂರ್ವ ವಿದ್ಯಾರ್ಥಿಗಳು ತಕ್ಷಣವೇ ನಿರ್ಧರಿಸಿ ಕೃಷ್ಣಮೂರ್ತಿ, ಶ್ರೀಪಾದ್, ರವೀಂದ್ರ, ಕೌಸಲ್ಯ ಹಾಗೂ ಸುಮಂಗಲ, ವಿಜಯ ಅವರನ್ನು ಸನ್ಮಾನಿಸಿದ್ದು ಅತ್ಯಂತ ಭಾವುಕ ಕ್ಷಣವಾಗಿತ್ತು.
ಮಂಜುಳಾ ಸಿದ್ದಿ ಹಾಡಿದರು. ಸಾವಕ್ಕ ಹಾಗೂ ಸುನಿತಾ ಪ್ರಾರ್ಥಿಸಿದರು. ವಿಠಲ್ ತಾಟೆ ಸ್ವಾಗತಿಸಿ, ಪರಿಚಯಿಸಿದರು. ರಾಜ್ಯ ನಿಲಯಗಳ ಪ್ರಮುಖ ಬೊಮ್ಮು ಪಾಟೀಲ್, ರಾಜ್ಯ ಶಿಕ್ಷಣ ಪ್ರಮುಖರಾದ ರಾಮಚಂದ್ರ ನಿರ್ವಹಿಸಿದರು.