ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ದೇವಾಂಗ ಸಮಾಜಕ್ಕೆ ತನ್ನದೇ ಆದ ಇತಿಹಾಸವಿದೆ. ಸಮಾಜ ಬಾಂಧವರು ತಮ್ಮಲ್ಲಿರುವ ಸ್ವಾರ್ಥ ಕೈಬಿಟ್ಟು ಸಮಾಜದ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು ಎಂದು ಹಂಪಿ ಹೇಮಕೂಟ ಗಾಯತ್ರಿ ಪೀಠದ ಜ. ದಯಾನಂದ ಪುರಿ ಶ್ರೀಗಳು ಹೇಳಿದರು.ಇಲ್ಲಿನ ದೇಶಪಾಂಡೆ ನಗರದಲ್ಲಿರುವ ಸವಾಯಿ ಗಂಧರ್ವ ಸಭಾಂಗಣದಲ್ಲಿ ಧಾರವಾಡ ಜಿಲ್ಲಾ ದೇವಾಂಗ ಸೇವಾ ಸಂಘ, ದೇವಾಂಗ ಯುವ ಹಾಗೂ ಮಹಿಳಾ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಗುರುಪೂರ್ಣಿಮೆ ಅಂಗವಾಗಿ ಭಾನುವಾರ ಆಯೋಜಿಸಿದ್ದ ಗುರುವಂದನೆ, ಸಿಂಹಾಸನ ಸಮರ್ಪಣೆ, ಪ್ರತಿಭಾ ಪುರಸ್ಕಾರ ಹಾಗೂ ಅಕ್ಷರ ಅಭ್ಯಾಸ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಧಾರವಾಡ ಜಿಲ್ಲೆಯವರು ಯಾವುದೇ ಕಾರ್ಯಕ್ರಮ ಮಾಡಿದರೂ ಅದು ರಾಜ್ಯಕ್ಕೆ ಮಾದರಿಯಾಗಿರುತ್ತದೆ. ಈ ಭಾಗದಲ್ಲಿ 1980ರಲ್ಲಿ ನಡೆದ ರಾಜ್ಯ ದೇವಾಂಗ ಸಮ್ಮೇಳನದಲ್ಲಿ ಜಗದ್ಗುರುಗಳ ಕುರಿತಾಗಿ ತೀರ್ಮಾನ ಕೈಗೊಳ್ಳದಿದ್ದಲ್ಲಿ ಇಂದಿಗೂ ಗಾಯತ್ರಿಪೀಠ ಶೂನ್ಯಪೀಠವಾಗಿರುತ್ತಿತ್ತು. ಇದೀಗ ಧಾರವಾಡದವರೇ ಗುರುಪೂರ್ಣಿಮೆ, ಸಿಂಹಾಸನ ಸಮರ್ಪಣೆ, ಅಕ್ಷರ ಅಭ್ಯಾಸದಂತಹ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದು ಎಲ್ಲರಿಗೂ ಮಾದರಿಯಾಗಿದೆ ಎಂದರು.ಸಮಾಜದಲ್ಲಿ ಎಲ್ಲ ಕ್ಷೇತ್ರದ ಪ್ರತಿಭೆಗಳಿವೆ. ಕೀಳರಿಮೆ ತೊರೆದು ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಿದೆ. ಪ್ರತಿಯೊಬ್ಬರೂ ಸಮಾಜದ ಅಭಿಮಾನ ಹೊಂದಬೇಕು. ಜೀವನ ಸಾರ್ಥಕ ಮಾಡಿಕೊಳ್ಳಬೇಕಾದರೆ ಸಮಾಜ ಸಂಘಟನೆ ಮತ್ತು ಸೇವೆ ಮಾಡಬೇಕು. ಸಮಾಜ ಬಾಂಧವರು ಸ್ವಾರ್ಥ ಬಿಟ್ಟು ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಸಲಹೆ ನೀಡಿದರು.
ಅತಿಥಿಗಳಾಗಿ ಆಗಮಿಸಿದ್ದ ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಸಮಾಜದಲ್ಲಿರುವ ಬಡವರನ್ನು ಮುಖ್ಯವಾಹಿನಿಗೆ ತರಬೇಕು. ಮೇಲು ಕೀಳು ಭಾವನೆ ತೊರೆಯಬೇಕು. ಸಾಮಾಜಿಕ, ರಾಜಕೀಯವಾಗಿ ಸಮಾಜದವರಿಗೆ ಅವಕಾಶ ಕೊಡುತ್ತಿದ್ದೇವೆ. ಸಮಾಜ ಬಾಂಧವರು ಸಿಎ ನಿವೇಶನ ಕೇಳಿದ್ದು, ಶೀಘ್ರದಲ್ಲಿಯೇ 50 ಸಿಎ ಲ್ಯಾಂಡ್ ಹಂಚಿಕೆ ಮಾಡಲಾಗುತ್ತದೆ. ಅದರಲ್ಲಿ ದೇವಾಂಗ ಸಮಾಜಕ್ಕೂ ಕೊಡುವುದಾಗಿ ಭರವಸೆ ನೀಡಿದರು.ರಾಜ್ಯ ದೇವಾಂಗ ಸಂಘದ ಅಧ್ಯಕ್ಷ ರವೀಂದ್ರ ಕಲಬುರ್ಗಿ ಮಾತನಾಡಿ, ಜಿಲ್ಲಾ ಮಟ್ಟದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಅಕ್ಷರ ಅಭ್ಯಾಸ ಕಾರ್ಯಕ್ರಮದ ಮೂಲಕ ಧಾರವಾಡ ಜಿಲ್ಲಾ ದೇವಾಂಗ ಸಂಘ ಸಮಾಜದ ಇಡೀ ರಾಜ್ಯಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟಿದೆ. ಇದನ್ನು ಎಲ್ಲ ಜಿಲ್ಲೆಗಳಲ್ಲೂ ಆಯೋಜಿಸುವಂತೆ ನಿರ್ದೇಶನ ನೀಡಲಾಗುವುದು ಎಂದರು.
ಬೆಂಗಳೂರಿನ ನೃಪತುಂಗ ವಿವಿ ಉಪಕುಲಪತಿ ಡಾ. ಶ್ರೀನಿವಾಸ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಸಮಾಜದ ಮಕ್ಕಳಿಗೆ ಜ. ದಯಾನಂದ ಪುರಿ ಶ್ರೀಗಳು ಅಕ್ಷರಾಭ್ಯಾಸ ಮಾಡಿಸಿದರು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚಿನ ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.ಸಂಘದ ಜಿಲ್ಲಾಧ್ಯಕ್ಷ ಡಾ. ಕೆ.ಜಿ. ಬ್ಯಾಕೋಡಿ ಅಧ್ಯಕ್ಷತೆ ವಹಿಸಿದ್ದರು. ಯುವ ಸಂಘದ ಅಧ್ಯಕ್ಷ ವಿನೋದ ಜವಳಿ, ಮಹಿಳಾ ಸಂಘದ ಮಮತಾ ಪಾಟೀಲ, ಮುಖಂಡರಾದ ರವೀಂದ್ರ ಪಾಟೀಲ, ಮಂಜುಳಾ ಚೋಳಿನ, ವೀರಣ್ಣ ನಿಂಬರಗಿ, ರಮೇಶ ಕೂಡಲಗಿ ಸೇರಿದಂತೆ ಹಲವರಿದ್ದರು.