ಲಿಂಗಾಯತರು ಒಗ್ಗಟ್ಟು ಪ್ರದರ್ಶಿಸಲಿ: ಸಂಸದ ಜಗದೀಶ ಶೆಟ್ಟರ

KannadaprabhaNewsNetwork | Published : Jul 22, 2024 1:17 AM

ಸಾರಾಂಶ

ವೀರಶೈವ ಲಿಂಗಾಯತ ಸಮಾಜದಲ್ಲಿ ಒಗ್ಗಟ್ಟಿಲ್ಲದ ಕಾರಣ ರಾಜಕೀಯವಾಗಿ ಹಿಂದುಳಿದಿದೆ ಎಂದು ಸಂಸದ ಜಗದೀಶ ಶೆಟ್ಟರ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಇಂದಿಗೂ ಲಿಂಗಾಯತ ಸಮಾಜದಲ್ಲಿ ಒಗ್ಗಟ್ಟಿನ ಕೊರತೆ ಕಂಡುಬರುತ್ತಿದೆ. ಇನ್ನು ಮುಂದಾದರೂ ಸಮಾಜದ ಎಲ್ಲ ಒಳಪಂಗಡಗಳನ್ನು ಒಂದುಗೂಡಿಸುವ ಮೂಲಕ ಒಗ್ಗಟ್ಟು ಪ್ರದರ್ಶಿಸುವ ಕಾರ್ಯವಾಗಬೇಕಿದೆ ಎಂದು ಸಂಸದ ಜಗದೀಶ ಶೆಟ್ಟರ್‌ ಹೇಳಿದರು.

ಅವರು ಇಲ್ಲಿನ ದೇಶಪಾಂಡೆ ನಗರದಲ್ಲಿರುವ ಸವಾಯಿ ಗಂಧರ್ವ ಸಭಾಂಗಣದಲ್ಲಿ ವೀರಶೈವ ಸಂಘಟನಾ ಸಮಿತಿ, ಜಿಲ್ಲಾ ವೀರಶೈವ ಲಿಂಗಾಯತ ಸಂಘಟನೆ, ವೀರಶೈವ ಲಿಂಗಾಯತ ಅಭಿವೃದ್ಧಿ ಸಂಘ, ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಸಂಸ್ಥೆ, ಆನಂದನಗರ ವೀರಶೈವ ಸಮಾಜ ಸಂಘಟನಾ ಸೇವಾ ಸಮಿತಿ ಆಶ್ರಯದಲ್ಲಿ ಏರ್ಪಡಿಸಿದ್ದ ವೀರಶೈವ ಲಿಂಗಾಯತ ಎಲ್ಲ ಒಳಪಂಗಡಗಳ ಸಮಾಜದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ಗೌರವ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವೀರಶೈವ ಲಿಂಗಾಯತ ಸಮಾಜದಲ್ಲಿ ಒಗ್ಗಟ್ಟಿಲ್ಲದ ಕಾರಣ ರಾಜಕೀಯವಾಗಿ ಹಿಂದುಳಿದಿದೆ. ಒಗ್ಗಟ್ಟು ಪ್ರದರ್ಶಿಸುವ ಕಾರ್ಯ ಹಾಗೂ ಜಾಗೃತಿ ಸಂಘಟನೆಗಳಿಂದಾಗಬೇಕು. ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯಹಸ್ತ ಚಾಚುವ ಕಾರ್ಯ ಸಂಘಟನೆಗಳಿಂದಾಗಬೇಕು. ಈ ಹಿಂದೆ ಜಾತಿ ಸಮೀಕ್ಷೆಯಲ್ಲಿ ಶೇ. 10ರಷ್ಟು ಲಿಂಗಾಯತ ಸಮಾಜ ತೋರಿಸಿದ್ದರಿಂದ ಆ ಸಮೀಕ್ಷೆ ವರದಿ ಬಹಿರಂಗ ಮಾಡಿಲ್ಲ. ಇದರಲ್ಲಿ ಸಮಾಜ ಒಡೆಯುವ ಕಾರ್ಯವಿದೆ. ವಸ್ತು ಸ್ಥಿತಿಗಾಗಿ ವೀರಶೈವ ಲಿಂಗಾಯತ ಮಹಾಸಭಾದಿಂದ ಸರ್ವೇ ಮಾಡಬೇಕು ಎಂದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಎಲ್ಲರನ್ನೂ ಸೇರಿಸಿ ಇಡೀ ಸಮುದಾಯದವರು ಒಂದು ಎಂಬ ಸಂದೇಶ ನೀಡಿದ್ದಾರೆ. ಅದೇ ರೀತಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಕಾರ್ಯ ಸಂಘಟನೆಗಳು ಮಾಡಿವೆ. ಅಂಕ ಗಳಿಸುವ ಗೀಳಿನಿಂದ ಮನೆ ಮಕ್ಕಳನ್ನು ಅಲ್ಲಗಳೆಯುವುದು ಬೇಡ. ಈ ಪ್ರಪಂಚ ವಿಶಾಲವಾಗಿದ್ದು, ತಮಗಿಷ್ಟವಾದ ಕ್ಷೇತ್ರದಲ್ಲಿ ಬೆಳೆಯಲು ಪಾಲಕರು ಮಕ್ಕಳಿಗೆ ಪ್ರೋತ್ಸಾಹ ನೀಡುವಂತೆ ಕರೆ ನೀಡಿದರು.

ಇಂದಿನ ಸ್ಥಿತಿಗತಿ ನೋಡಿದರೆ ವೀರಶೈವ ಲಿಂಗಾಯತ ಸಮಾಜ ಅಲ್ಪಸಂಖ್ಯಾತರಾದರೂ ಆಶ್ಚರ್ಯ ಪಡಬೇಕಿಲ್ಲ. ಜಾತಿ ಪ್ರಮಾಣ ಪತ್ರದಲ್ಲಿ ಒಳಪಂಗಡಗಳ ಹೆಸರು ನಮೂದಿಸುತ್ತಿದ್ದಾರೆ. ಇಂತಹ ಅವಕಾಶಕ್ಕೆ ಯಾರೂ ಆಸ್ಪದ ನೀಡಬಾರದು. ಇಡೀ ಸಮಾಜ ಒಗ್ಗಟ್ಟಾಗಿ ಹೋಗಬೇಕಿದೆ ಎಂದರು.

ಇದೇ ವೇಳೆ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಹುಬ್ಬಳ್ಳಿಯ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಶ್ರೀ ಹಾಗೂ ರುದ್ರಾಕ್ಷಿಮಠದ ಬಸವಲಿಂಗ ಶ್ರೀ ಸಾನ್ನಿಧ್ಯ ವಹಿಸಿದ್ದರು. ಲಿಂಗರಾಜ ಹೊರಕೇರಿ, ಶರಣಪ್ಪ ಕೊಟಗಿ, ಮೀನಾಕ್ಷಿ ಒಂಟಮೂರಿ, ಮಲ್ಲಿಕಾರ್ಜುನ ಸಾವಕಾರ, ವಿನಯ ಸಜ್ಜನರ, ಪ್ರಕಾಶ ಬೆಂಡಿಗೇರಿ, ಚನ್ನಬಸಪ್ಪ ಧಾರವಾಡಶೆಟ್ಟ‌ರ, ಸದಾಶಿವ ಚೌಶೆಟ್ಟಿ, ಮಹೇಶ ಚಂದ್ರಗಿ, ಬಸವರಾಜ ಹೊಸಮನಿ, ಮುರುಗೇಶ ಶೆಟ್ಟರ್, ರತ್ನಾ ಚೌಶೆಟ್ಟಿ ಸೇರಿದಂತೆ ಹಲವರಿದ್ದರು.

Share this article