ಪಿಎಂ ಸ್ವನಿಧಿ ಯೋಜನೆಯಡಿ ಸಾಲ ಪಡೆಯಿರಿ: ಲಕ್ಷ್ಮೀಕಾಂತ

KannadaprabhaNewsNetwork |  
Published : Aug 05, 2024, 12:31 AM IST
ಯಾದಗಿರಿ ನಗರದ ಕನ್ನಡ ಸಾಹಿತ್ಯ ಪರಿಷತ್‌ ಸಭಾಂಗಣದಲ್ಲಿ ಡೇನಲ್ಮಾ ಯೋಜನೆಯಡಿ ಬೀದಿಬದಿ ವ್ಯಾಪಾರಸ್ಥರಿಗೆ ಅರಿವು, ಜಾಗೃತಿಯ ಒಂದು ದಿನದ ಕಾರ್ಯಾಗಾರ ಜರುಗಿತು. | Kannada Prabha

ಸಾರಾಂಶ

ನಗರದ ಎಲ್ಲಾ ಬೀದಿ ಬದಿ ವ್ಯಾಪಾರಸ್ಥರು ಪಿಎಂ ಸ್ವನಿಧಿ ಯೋಜನೆಯಡಿ ಸಾಲ ಸೌಲಭ್ಯ ಪಡೆದುಕೊಂಡು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ನಗರಸಭೆ ಪೌರಾಯುಕ್ತ ಲಕ್ಷ್ಮೀಕಾಂತ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ನಗರದ ಎಲ್ಲಾ ಬೀದಿ ಬದಿ ವ್ಯಾಪಾರಸ್ಥರು ಪಿಎಂ ಸ್ವನಿಧಿ ಯೋಜನೆಯಡಿ ಸಾಲ ಸೌಲಭ್ಯ ಪಡೆದುಕೊಂಡು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ನಗರಸಭೆ ಪೌರಾಯುಕ್ತ ಲಕ್ಷ್ಮೀಕಾಂತ ಕರೆ ನೀಡಿದರು.

ಜಿಲ್ಲಾಡಳಿತ, ನಗರಸಭೆ, ಜಿಲ್ಲಾ ಕೌಶಲ್ಯ ಮಿಷನ್ ವತಿಯಿಂದ ನಗರದ ಕನ್ನಡ ಸಾಹಿತ್ಯ ಪರಿಷತ್‌ ಸಭಾಂಗಣದಲ್ಲಿ ನಡೆದ ಡೇನಲ್ಮಾ ಯೋಜನೆಯಡಿ ಬೀದಿಬದಿ ವ್ಯಾಪಾರಸ್ಥರಿಗೆ ಅರಿವು, ಜಾಗೃತಿಯ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಪಿಎಂ ಸ್ವ-ನಿಧಿ ಯೋಜನೆಯಡಿ ಬೀದಿಬದಿ ವ್ಯಾಪಾರಿಗಳಿಗೆ ನೀಡುವ ಸಾಲ ಸೌಲಭ್ಯವನ್ನು ಹಾಲು ಮತ್ತು ದಿನಪತ್ರಿಕೆ ವಿತರಕರು, ಡೋಬಿ ಮತ್ತು ಇಸ್ತ್ರಿ ಸೇವೆ, ಹಳೆಯ ಪಾತ್ರೆಗಳನ್ನು ವ್ಯಾಪಾರ ಮಾಡುವವರು, ಬಡಗಿ, ಚಮ್ಮಾರರು, ಬಿದಿರಿನ ಬುಟ್ಟಿ, ಬೊಂಬು ಬಾಸ್ಕೆಟ್, ಏಣಿ ವ್ಯಾಪಾರಸ್ಥರು, ಹೂವಿನ ಕುಂಡಗಳನ್ನು ಮಾಡುವವರು, ನೇಯ್ಗೆಗಾರರು, ಎಳನೀರು ಮಾರಾಟಗಾರರು, ಆಹಾರ ತಯಾರಿಸಿ ಮಾರಾಟ ಮಾಡುವವರು (ಕ್ಯಾಟರಿಂಗ್ ಸರ್ವಿಸ್) ಇತ್ಯಾದಿ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರಿಗೂ ಕೂಡ ಈ ಯೋಜನೆಯನ್ನು ವಿಸ್ತರಿಸಲಾಗಿದೆ ಎಂದರು.

ನಗರಸಭೆಯ ಕಾರ್ಯಪಾಲಕ ಅಭಿಯಂತರ ರಜನಿಕಾಂತ ಮಾತನಾಡಿ, ವ್ಯಾಪಾರಸ್ಥರು ನಿಗದಿತ ಸ್ಥಳದಲ್ಲಿಯೇ ವ್ಯಾಪಾರ ಮಾಡಿ ನಗರಸಭೆಗೆ ಸಹಕಾರ ನೀಡಬೇಕು. ಬ್ಯಾಂಕ್‌ಗಳೊಂದಿಗೆ ಸಹಕರಿಸಿ ಸಾಲವನ್ನು ಮರುಪಾವತಿ ಮಾಡಿ, ಆರ್ಥಿಕ ಅಭಿವೃದ್ಧಿ ಪಡಿಸಿಕೊಳ್ಳಲು ಸಲಹೆ ತಿಳಿಸಿದರು.

ಕೌಶಲ್ಯಾಭಿವೃದ್ದಿ ಇಲಾಖೆಯ ಅಭಿಯಾನ ವ್ಯವಸ್ಥಾಪಕ ವಿಜಯಕುಮಾರ ಪಾಟೀಲ್ ಮಾತನಾಡಿ, ಬೀದಿಬದಿ ವ್ಯಾಪಾರಿಗಳು ತಮ್ಮ ವ್ಯಾಪಾರವನ್ನೇ ನಂಬಿಕೊಂಡು ಜೀವನ ಸಾಗಿಸುತ್ತಾರೆ. ಅವರಿಗೆ ನೆರವು ನೀಡಲು ಸರ್ಕಾರಗಳು ಅನೇಕ ರೀತಿಯ ಸಾಲ ಸೌಲಭ್ಯ ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರಧಾನ ಮಂತ್ರಿ ಜೀವನ್ ಜ್ಯೋತಿ, ಸುರಕ್ಷಾ ಭೀಮಾ ಇನ್ನಿತರ ಯೋಜನೆಗಳಿವೆ ಎಂದರು.

ನಗರಸಭೆಯ ಸಮುದಾಯ ಸಂಘಟನಾಧಿಕಾರಿ ಭೀಮಣ್ಣ ವೈದ್ಯ ಅವರು ಮಾತನಾಡಿದರು. ನಿವೃತ್ತ ಜಿಲ್ಲಾ ಸಿವಿಲ್ ನ್ಯಾಯಧೀಶ ಎಂ.ಎಚ್. ಶಿರವಾಳ, ಉಪ ತಹಸೀಲ್ದಾರ್ ಎಂ.ಡಿ. ಶಕೀಲ್, ಎಸ್.ಬಿ.ಐ ಬ್ಯಾಂಕ್‌ನ ಎಫ್.ಎಲ್.ಸಿ ಸಂಗಪ್ಪ ವಾಲಿ, ನಗರಸಭೆಯ ಸಿಆರ್‌ಪಿಗಳಾದ ಸಾಬಮ್ಮ, ಅವ್ವಮ್ಮ, ಪ್ರೇಮಾ ಸೇರಿದಂತೆ ಬೀದಿಬದಿ ವ್ಯಾಪಾರಸ್ಥರು ಇದ್ದರು.

PREV

Recommended Stories

ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ
''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''