ಸಂಡೂರು: ತಾಲೂಕಿನ ತೋರಣಗಲ್ಲು ಗ್ರಾಮದಲ್ಲಿನ ಸ್ಮಶಾನ ಜಮೀನನ್ನು ಕೆಎಸ್‌ಐಐಡಿಸಿ ಇಲಾಖೆಗೆ ಕೊಟ್ಟಿರುವುದನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿ ವಿವಿಧ ಸಂಘಟನೆಗಳ ಮುಖಂಡರು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಇದನ್ನು ರುದ್ರಭೂಮಿಯಾಗಿ ಪಹಣಿಯಲ್ಲಿ ನೋಂದಾಯಿಸಲು ಕೋರಿ ಮನವಿ ಸಲ್ಲಿಸಲಾಗಿತ್ತು. ಆದರೆ, ಪಹಣಿ ಬದಲಾಗಿಲ್ಲ. ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಎಂದೇ ಪಹಣಿಯಲ್ಲಿ ನೋಂದಾಯಿಸಲಾಗಿದೆ. ಗ್ರಾಮದಲ್ಲಿ ೧೬೦೦೦ ಜನಸಂಖ್ಯೆ ಇದೆ. ಇರುವ ಸ್ಮಶಾನ ಜಾಗವನ್ನು ಸರ್ಕಾರದ ಸಂಸ್ಥೆಯಿಂದಲೇ ಒತ್ತುವರಿ ಮಾಡಲಾಗಿದೆ. ಇದೀಗ ಸ್ಮಶಾನ ಜಾಗದಲ್ಲಿಯೇ ಕೆಆರ್‌ಐಡಿಎಲ್ ಇಲಾಖೆ ಮೂಲಕ ಕುಡಿಯುವ ನೀರಿನ ಟ್ಯಾಂಕನ್ನು ನಿರ್ಮಿಸಲಾಗುತ್ತಿದೆ. ರುದ್ರಭೂಮಿಗಳ ಕುರಿತಂತೆ ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿ ಅತಿಕ್ರಮಣ ಮಾಡಲಾಗುತ್ತಿದೆ. ಕೂಡಲೇ ರುದ್ರಭೂಮಿಯಲ್ಲಿ ನಿರ್ಮಿಸುತ್ತಿರುವ ನೀರಿನ ಟ್ಯಾಂಕರ್ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಿ, ಅದನ್ನು ಬೇರೆಡೆ ಸ್ಥಳಾಂತರಿಸಬೇಕು. ಪಹಣಿಯಲ್ಲಿ ಈ ಪ್ರದೇಶವನ್ನು ರುದ್ರಭೂಮಿ ಎಂದು ನಮೂದಿಸಬೇಕು ಎಂದು ಒತ್ತಾಯಿಸಿದರು.
ಸಿಐಟಿಯು ಸಂಘಟನೆಯ ಜಿಲ್ಲಾ ಸಮಿತಿ ಕಾರ್ಯದರ್ಶಿ ಜೆ.ಎಂ. ಚನ್ನಬಸಯ್ಯ, ಸದಸ್ಯ ನಾಗಭೂಷಣ ಉಪಸ್ಥಿತರಿದ್ದರು.