ಕನ್ನಡಪ್ರಭ ವಾರ್ತೆ ಮಂಡ್ಯ
ಶ್ರೀರಂಗಪಟ್ಟಣದ ಕಾವೇರಿ ನದಿ ತೀರದಲ್ಲಿ ಮೂಲ ಸ್ಥಳದಲ್ಲೇ ಅಸ್ಥಿ ವಿಸರ್ಜನೆಗೆ ಜಿಲ್ಲಾಡಳಿತ ಮಾರ್ಗಸೂಚಿ ರೂಪಿಸಬೇಕು ಎಂದು ರೈತಸಂಘದ ಮುಖಂಡ ಕಿರಂಗೂರು ಪಾಪು ಒತ್ತಾಯಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾವೇರಿ ನದಿ ಪಾವಿತ್ರ್ಯತೆಯಿಂದ ಕೂಡಿದೆ. ಇದನ್ನು ಕಾಪಾಡುವ ಉದ್ದೇಶದಿಂದ ನದಿ ತಡದ ಎಲ್ಲೆಂದರೆ ಅಲ್ಲಿ ಅಸ್ಥಿ ವಿಸರ್ಜನೆಗೆ ಅವಕಾಶ ನೀಡದರೆ ನಿಯಮ ಪ್ರಕಾರ ಮೂಲ ಸ್ಥಳದಲ್ಲಿ ಅಸ್ಥಿ ವಿಸರ್ಜನೆಗೆ ಅವಕಾಶ ಕಲ್ಪಿಸಲಿ ಎಂದು ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಐತಿಹಾಸಿಕ ಸ್ಥಳ ಶ್ರೀರಂಗಪಟ್ಟಣ. ಮೂರು ದಿಕ್ಕಿನಿಂದ ಒಂದೇ ಕಡೆ ಸೇರುವ ಸಂಗಮ ನದಿಯಲ್ಲಿ ಹಾಗೂ ಪಶ್ಚಿಮ ವಾಹಿನಿಯಲ್ಲಿ ಅನಾದಿಕಾಲದಿಂದಲೂ ಅಸ್ಥಿ ವಿಸರ್ಜನೆ ಮಾಡುತ್ತಿದ್ದರು. ಮಹನೀಯರು ಈ ಪ್ರದೇಶಗಳಲ್ಲಿ ಅಸ್ಥಿ ವಿಸರ್ಜನೆ ಕ್ರಿಯೆ ಮಾಡಿರುತ್ತಾರೆ ಎಂದು ತಿಳಿಸಿದ್ದಾರೆ.ಈಗ ಎಲ್ಲಾ ನದಿಯ ದಂಡೆಯಲ್ಲಿ ಅಸ್ಥಿ ವಿಸರ್ಜನೆ ಕ್ರಿಯೆ ವ್ಯಾಪಕವಾಗಿ ನಡೆಸಲಾಗುತ್ತಿದೆ. ಕೂಡಲೇ ಬೇರೆ ಸ್ಥಳಗಳಲ್ಲಿ ಸಂಪೂರ್ಣ ನಿಷೇಧ ವಿಧಿಸುವಂತೆ ಹಾಗೂ ಮಾಲಿನ್ಯಕಾರಕ ಚಟುವಟಿಕೆಗಳಿಗೆ ನಿರ್ಬಂಧ ಮಾಡುವಂತೆ ಒತ್ತಾಯಿಸಿದ್ದಾರೆ.
ಅಸ್ಥಿ ವಿಸರ್ಜನೆಗೆ ಖ್ಯಾತಿ ಪಡೆದಿರುವ ಶ್ರೀರಂಗಪಟ್ಟಣ ಕಾವೇರಿ ನದಿ ಬೇರೆ ಬೇರೆ ರಾಜ್ಯಗಳಿಂದಲೂ ಬಂದು ಅಸ್ಥಿ ವಿಸರ್ಜನೆ ಕ್ರಿಯೆ ಮಾಡುತ್ತಾರೆ. ಕಾವೇರಿ ನದಿ ಎಲ್ಲಾ ಕಡೆ ಅಸ್ಥಿ ವಿಸರ್ಜನೆ ಕ್ರಿಯೆ ಮಾಡುವುದರಿಂದ ಅರೆಬೆಂದ ಮೂಳೆಗಳು, ಬಟ್ಟೆಗಳು, ಪ್ಲಾಸ್ಟಿಕ್‌ಗಳು, ಕೆಲವು ಹಾನಿಕಾರಕವಾದ ವಸ್ತುಗಳನ್ನು ಕಾವೇರಿ ನದಿಯಲ್ಲಿ ಸೇರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.ಕಾವೇರಿ ನದಿಗೆ ಮಲೀನವಾಗುತ್ತಿರುವುದನ್ನು ತಡೆಯಲು ಎಲ್ಲೆಂದರೆ ಅಲ್ಲಿ ಅಸ್ಥಿ ವಿಸರ್ಜನೆ ಮಾಡುವುದನ್ನು ನಿರ್ಬಂಧಿಸಬೇಕು. ಜನ -ಜಾನುವಾರುಗಳು, ಪಕ್ಷಿಗಳು, ಜಲಜಂತುಗಳು ಮಲೀನ ನೀರು ಕುಡಿದು ಆರೋಗ್ಯ ಹದಗೆಡುವುದನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿದ್ದಾರೆ.
ಕೂಡಲೇ ಜಿಲ್ಲಾಡಳಿತ, ತಾಲೂಕು ಆಡಳಿತ, ಜಲಸಂಪನ್ಮೂಲ ಇಲಾಖೆ ಎಚ್ಚೆತ್ತು ಮೂಲ ಕಾಲದಿಂದ ಚಾಲ್ತಿಯಲ್ಲಿರುವ ಅಸ್ಥಿ ವಿಸರ್ಜನೆ ಕಾರ್ಯವನ್ನು ಕಾನೂನಾತ್ಮಕವಾಗಿ ಮಾರ್ಗಸೂಚಿಗಳ ಪ್ರಕಾರ ಅಸ್ಥಿ ವಿಸರ್ಜನೆ ಕ್ರಿಯೆ ವೇಳೆ ಯಾವುದೇ ರೀತಿಯ ಕಾವೇರಿ ನದಿಗೆ ಮಾಲಿನ್ಯವಾಗದ ರೀತಿಯಲ್ಲಿ ಷರತ್ತುಗಳನ್ನು ವಿಧಿಸಿ ಮೂಲ ಸ್ಥಳಗಳಲ್ಲಿ ಮಾತ್ರ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ.