ಕನ್ನಡಪ್ರಭ ವಾರ್ತೆ ದಾವಣಗೆರೆ
ತಾಲೂಕಿನ ಹೆಬ್ಬಾಳು ವಿರಕ್ತಮಠದಲ್ಲಿ ಸೋಮವಾರ ಬಸವ ಜಯಂತಿ ಅಂಗವಾಗಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಾತನಾಡಿ, ಯಾರೂ ಸಾಲ ಮಾಡಿ ಮದುವೆ ಮಾಡಬೇಡಿ. ನಿಮ್ಮ ಆರ್ಥಿಕ ಸ್ಥಿತಿಯನ್ನು ಮೆಟ್ಟಿ, ತಲುಪಲು ಸಾಧ್ಯವಾಗುವ ರೀತಿಯಲ್ಲಿ ಸರಳ ವಿವಾಹವನ್ನು ಆಯ್ಕೆ ಮಾಡುವುದು ಅತ್ಯುತ್ತಮವಾಗಿದೆ ಎಂದು ಹೇಳಿದರು.
ಮನೆ ಖರೀದಿ, ಮದುವೆ, ಇತ್ಯಾದಿ ಕಾರ್ಯಗಳನ್ನು ಹಣಕಾಸು ಬಾಧ್ಯತೆಗಳಿಗೆ ಒಳಪಟ್ಟಂತೆ ಮಾಡುವುದು ದೊಡ್ಡ ನಷ್ಟವನ್ನು ತರುತ್ತದೆ, ಇದು ನಿಮ್ಮ ಜೀವನದ ಮುಂದೆ ಅನೇಕ ಸಮಸ್ಯೆಗಳನ್ನುಂಟು ಮಾಡಬಹುದು. ತಮ್ಮ ಆರ್ಥಿಕ ಸ್ಥಿತಿಗೆ ತಕ್ಕಂತೆ ಸರಳ ವಿವಾಹ ಮಾಡಬೇಕೆಂದರು.ನಮ್ಮ ಮುಂದಿನ ಜೀವನ ಸುಗಮವಾಗಬೇಕಾದರೆ, ಮೊದಲಿಗೆ ನಾವು ಸಾಲದಿಂದ ಮುಕ್ತರಾಗಬೇಕು. ಸಾಲದಿಂದ ಮುಕ್ತನಾಗಿದ್ರೆ, ವ್ಯಕ್ತಿ ನೆಮ್ಮದಿಯಿಂದ ಬದುಕಬಹುದು ಎಂದು ತಿಳಿಸಿದರು.
ಮದುವೆ ಮಾಡಿ ಸಾಲ ತೀರಿಸಲು ಕಷ್ಟಪಡೋದು ಬೇಡ. ಈ ರೀತಿ ಹಮ್ಮಿಕೊಳ್ಳುವ ಸಾಮೂಹಿಕ ವಿವಾಹಗಳಲ್ಲಿ ಸರಳವಾಗಿ ಮದುವೆ ಆಗಿ, ಆರ್ಥಿಕವಾಗಿ ಉಳಿತಾಯ ಮಾಡಿ, ಉಳಿದ ಹಣವನ್ನು ಬೇರೆ ಉಪಯುಕ್ತ ಕಾರ್ಯಗಳಿಗೆ ಬಳಸಿ. ಸಾಲ ಇಲ್ಲದ ಜೀವನವೇ ನೆಮ್ಮದಿಯ ಜೀವನ ಎಂದು ಕಿವಿಮಾತು ಹೇಳಿದರು.
ಸಾನ್ನಿಧ್ಯ ವಹಿಸಿ ಮಾತನಾಡಿದ ಹೆಬ್ಬಾಳು ವಿರಕ್ತಮಠದ ಮಹಾಂತ ರುದ್ರೇಶ್ವರ ಸ್ವಾಮೀಜಿ, ಇಂತಹ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಆರ್ಥಿಕವಾಗಿ ಹಿಂದುಳಿದವರಿಗೆ ವರದಾನವಾಗಿವೆ. ಸಾಮೂಹಿಕ ವಿವಾಹಗಳು ದುಂದು ವೆಚ್ಚಕ್ಕೆ ಕಡಿವಾಣ ಹಾಕಿ, ಸರಳ ಜೀವನಕ್ಕೆ ಪ್ರೋತ್ಸಾಹ ನೀಡುತ್ತವೆ. ಪ್ರತಿವರ್ಷ ಬಸವಣ್ಣನವರ ಜಯಂತಿ ಅಂಗವಾಗಿ ನಾವು ಉಚಿತ ಸಾಮೂಹಿಕ ವಿವಾಹ ಆಯೋಜಿಸುತ್ತಿದ್ದೇವೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ 14 ಜೋಡಿಗಳು ನೂತನ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಮಹಾರುದ್ರಯ್ಯ, ನರೇಂದ್ರಬಾಬು, ಎಚ್.ಸಿ.ರುದ್ರಮುನಿ ಸೇರಿ ಗ್ರಾಮಸ್ಥರು ಭಾಗವಹಿಸಿದ್ದರು.
ಕೆ.ಎಸ್.ಬಸವಂತಪ್ಪ ಶಾಸಕ, ಮಾಯಕೊಂಡ.