ಸಿರವಾರ: ಕೃಷಿ ಭೂಮಿಯಿಂದ ಕೇವಲ ಬೆಳೆಗಳನ್ನು ಬೆಳೆಯಲು ಸೀಮಿತವಾಗದೇ ಅದರೊಂದಿಗೆ ಸಮಗ್ರ ಕೃಷಿಯನ್ನು ಅಳವಡಿಸಿಕೊಂಡು ಹೆಚ್ಚಿನ ಆದಾಯ ಪಡೆಯಬೇಕು ಎಂದು ಮಲ್ಲಟ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಮಾರುತಿ ನಾಯಕ ಸಲಹೆ ನೀಡಿದರು.
ರೈತರಿಗೆ ಸಮಗ್ರ ಕೃಷಿ ಪದ್ದತಿ, ಹತ್ತಿ, ತೊಗರಿ ಹಾಗೂ ಭತ್ತದ ಬೆಳೆಗಳ ರೋಗ ಹಾಗೂ ಕೀಟಗಳ ಸಮಗ್ರ ಹತೋಟಿ ಕ್ರಮಗಳ ಕುರಿತು ಹಾಗೂ ಕೃಷಿ ಇಲಾಖೆಯಿಂದ ರೈತರಿಗೆ ಇರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಯಿತು.
ಕೆನರಾ ಬ್ಯಾಂಕಿನ ಹಣಕಾಸು ಕೌನ್ಸಲರ್ ಸುಮಲತಾ ಮಾತನಾಡಿದರು. ದಡೇಸೂಗುರು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಕೃಷಿ ಅಧಿಕಾರಿ ಸುಪ್ರೀತ ಪಾಟೀಲ್ ತರಬೇತಿ ಕೇಂದ್ರದಿಂದ ರೈತರಿಗೆ ಇರುವ ಕೃಷಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.ಮಲ್ಲಟ ರೈತ ಸಂಪರ್ಕ ಕೇಂದ್ರದ ತಾಂತ್ರಿಕ ವ್ಯವಸ್ಥಾಪಕ ನಾಗರಾಜ ಕಂಬಾರ, ಕೃಷಿ ತರಬೇತಿ ಕೇಂದ್ರದ ಮಲ್ಲಮ್ಮ, ಸಿಬ್ಬಂದಿ ಆಂಜನೇಯ, ಗಿರೀಶ, ಮಲ್ಲು, ಶೇಖರ ಹಾಗೂ ವಡವಟ್ಟಿ ಭಾಗದ ರೈತರು ಭಾಗವಹಿಸಿದ್ದರು.