ಕನ್ನಡಪ್ರಭ ವಾರ್ತೆ ಯಾದಗಿರಿ
ಜ.26 ರಂದು ಜರುಗಲಿರುವ ಗಣರಾಜ್ಯೋತ್ಸವ ದಿನಾಚರಣೆ ಸಡಗರ, ಸಂಭ್ರಮದಿಂದ ಅಚ್ಚುಕಟ್ಟಾಗಿ ಆಚರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಜಿಲ್ಲಾಧಿಕಾರಿ ಡಾ.ಬಿ.ಸುಶೀಲಾ ಅಧಿಕಾರಿಗಳಿಗೆ ಸೂಚಿಸಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಗಣರಾಜ್ಯೋತ್ಸವ ದಿನಾಚರಣೆ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಇದು ರಾಷ್ಟ್ರೀಯ ಹಬ್ಬ, ಎಲ್ಲರ ಪಾಲ್ಗೊಳ್ಳುವಿಕೆ ಬಹು ಮುಖ್ಯವಾಗಿದೆ. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದು, ಬೆ.9ಗಂಟೆಗೆ ನಡೆಯುವ ಧ್ವಜಾರೋಹಣದಲ್ಲಿ ಎಲ್ಲಾ ಇಲಾಖೆ ಅಧಿಕಾರಿ ಸಿಬ್ಬಂದಿ ಕಡ್ಡಾಯವಾಗಿರಬೇಕು ಎಂದರು.
ತಾಲೂಕುಗಳಲ್ಲಿಯೂ ಆಯಾ ವ್ಯಾಪ್ತಿ ತಹಸೀಲ್ದಾರರು ಗಣರಾಜ್ಯೋತ್ಸವವನ್ನು ಆಯೋಜಿಸಿ ಜಿಲ್ಲೆಯಾದ್ಯಂತ ಅರ್ಥಪೂರ್ಣ ಆಚರಣೆಗೆ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದರು.ವೇದಿಕೆ ಸಿದ್ಧತೆ, ಗಣ್ಯರಿಗೆ ಆಸನ ವ್ಯವಸ್ಥೆ. ಶಿಷ್ಟಾಚಾರದಂತೆ ಅತಿಥಿ ಗಣ್ಯರನ್ನು ಆಹ್ವಾನಿಸಬೇಕು. ಆಹ್ವಾನ ಪತ್ರಿಕೆ ಮುದ್ರಿಸಬೇಕು. ಶಾಮಿಯಾನಾ, ವಿದ್ಯಾರ್ಥಿ, ಸಾರ್ವಜನಿಕರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ, ಚಿಕಿತ್ಸಾ ಅಂಬ್ಯುಲೆನ್ಸ್ ನುರಿತ ವೈದ್ಯರೊಂದಿಗೆ ಹಾಗೂ ಅಗ್ನಿಶಾಮಕ ವ್ಯವಸ್ಥೆ ಮಾಡಬೇಕು. ಕುಡಿಯುವ ನೀರಿನ ವ್ಯವಸ್ಥೆ, ಸ್ವಚ್ಛತೆ ನಿರ್ವಹಿಸಬೇಕು. ದೀಪಾಲಂಕಾರ, ಇನ್ನಿತರ ಕಾರ್ಯಕ್ರಮ ಕುರಿತು ಭಾವೈಕ್ಯತಾ ಸಮಿತಿ ಹಾಗೂ ಡಿಡಿಪಿಐ ಸಮನ್ವಯತೆಯಿಂದ ಕ್ರಮ ಕೈಗೊಳ್ಳಬೇಕು. ಸರ್ಕಾರೇತರ ಸಂಘ-ಸಂಸ್ಥೆಗಳವರು ಭಾಗವಹಿಸಬೇಕು. ವಿವಿಧ ಸಮಿತಿ ರಚಿಸಲು ಹಾಗೂ ಸಂಬಂಧಿಸಿದ ಸಮಿತಿಯ ಅಧಿಕಾರಿಗಳ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಬೇಕೆಂದು ತಿಳಿಸಿದರು.
ಪೊಲೀಸ್ ಇಲಾಖೆ, ಅಗ್ನಿಶಾಮಕ, ಅಬಕಾರಿ ಇಲಾಖೆ, ಭಾರತೀಯ ಸೇವಾದಳ, ಗೃಹ ರಕ್ಷಕ ದಳ, ಎನ್‌ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್ ಸೇರಿ ಕವಾಯತು ತಂಡ ಪರೇಡ್‌ನಲ್ಲಿ ಭಾಗವಹಿಸಿ ಅತ್ಯುತ್ತಮವಾಗಿ ನಡೆಸಲು ಪೂರ್ವ ತಯಾರಿ ಮಾಡಿಕೊಳ್ಳಬೇಕು ಎಂದರು.ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಕಾಜೋಲ್ ಪಾಟೀಲ್, ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಜಿಪಂ ಸಿಇಒ ಗುರುನಾಥ ಗೌಡಪ್ಪನ್ನೋರ್, ಪೊಲೀಸ್ ಇನ್ಸ್‌ಪೆಕ್ಟರ್ ದೇವಿಂದ್ರಪ್ಪ, ನಗರಸಭೆ ಪೌರಾಯುಕ್ತ ಲಕ್ಷ್ಮೀಕಾಂತ, ಭಾವೈಕ್ಯತಾ ಸಮಿತಿ ಸದಸ್ಯರಾದ ಚೆನ್ನಪ್ಪಗೌಡ ಮೋಸಂಬಿ, ಬಾಬು ದೋಖಾ, ವಿಶ್ವನಾಥ ಸಿರವಾರ, ಮರೆಪ್ಪ ಚಟ್ಟೆರಕರ್, ರಾಷ್ಟ್ರೀಯ ಮಾನವ ಹಕ್ಕುಗಳ ರಾಜ್ಯಾಧ್ಯಕ್ಷ ತಾಜಮೂಲ್ ಹುಸೇನ್, ಸಾಮಾಜಿಕ ಕಾರ್ಯಕರ್ತ ಭೀಮು ಪೂಜಾರಿ ಸೇರಿ ಇತರರಿದ್ದರು.