ಆನಂದಪುರ: ಹೋರಾಟದ ಮೂಲಕ ಜನರಿಗೆ ಹಕ್ಕು ಕೊಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ ಎಂದು ಮಾಜಿ ಸಚಿವ ಡಾ.ಕಾಗೋಡು ತಿಮ್ಮಪ್ಪ ತಿಳಿಸಿದರು.
ಆನಂದಪುರ ಸಮೀಪದ ಬೈರಾಪುರ ಕೆರೆಗದ್ದೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಕಾಗೋಡು ತಿಮ್ಮಪ್ಪ ವೃತ್ತವನ್ನು ಉದ್ಘಾಟಿಸಿ, ನಾಗರಿಕ ಸನ್ಮಾನ ಸ್ವೀಕರಿಸಿ ಮಾತನಾಡಿದರು.ನಾನು ಹುಟ್ಟಿದ್ದು ಬೆಳೆದಿದ್ದು ಹೋರಾಟದಿಂದಲೇ, ನನ್ನ ಅಧಿಕಾರದ ಅವಧಿಯಲ್ಲಿ ಎಲ್ಲರಿಗೂ ಭೂಮಿಯ ಹಕ್ಕನ್ನು ನೀಡಿದ್ದೇನೆ. ಇದು ಹೋರಾಟದ ಫಲ. ಯಾವುದನ್ನಾದರೂ ಪಡೆಯಬೇಕಾದರೆ ಹೋರಾಟ ಮಾಡುವುದೇ ಅನಿವಾರ್ಯವಾಗಿದೆ. ನಮಗೆ ಅಧಿಕಾರವಿದ್ದಾಗ ಜನರಿಗೆ ಉಪಯೋಗವಾಗುವಂತಹ ಕೆಲಸವನ್ನು ಮಾಡಬೇಕು. ಭೂಮಿಯ ಹಕ್ಕಿಗಾಗಿ ನಡೆದಂತಹ ಹೋರಾಟವನ್ನು ಮುಂದುವರಿಸಲು ಕಾರ್ಯಕರ್ತರ ಪಡೆ ಸಿದ್ಧವಾಗಬೇಕು ಎಂದು ಕೆರೆ ನೀಡಿದರು.
ಜಿಪಂ ಮಾಜಿ ಸದಸ್ಯ ರತ್ನಾಕರ ಹೊನ ಗೋಡ್ ಮಾತನಾಡಿ, ಕಾಗೂಡು ತಿಮ್ಮಪ್ಪನವರು ಅಜಾತಶತ್ರುವಿದ್ದ ಹಾಗೆ. ಇವರಿಗೆ ಯಾರು ಶತ್ರುಗಳಿಲ್ಲ. ಸಮಾಜದಲ್ಲಿ ನೊಂದ ಜನರ ಕಣ್ಣೀರು ಒರೆಸಿದ ಮಹಾನ್ ವ್ಯಕ್ತಿ ಕಾಗೋಡು ತಿಮ್ಮಪ್ಪ. ಇಳಿಯ ವಯಸ್ಸಿನಲ್ಲೂ ಹಕ್ಕಿಗಾಗಿ ಹೋರಾಟ ಮಾಡುವಂತೆ ಪೂರ್ತಿ ತುಂಬುವಂತಹ ವ್ಯಕ್ತಿ. ಇವರ ಅವಧಿಯಲ್ಲಿ ಹಾಸ್ಟೆಲ್‌ಗಳು ಆಸ್ಪತ್ರೆ, ಶಾಲಾ ಕಾಲೇಜು, ರಸ್ತೆಗಳ ನಿರ್ಮಾಣ, ಕೃಷಿ ವಿಶ್ವವಿದ್ಯಾಲಯ, ಉಳುವವನೇ ಭೂಮಿ ಒಡೆಯ, ವಾಸಿಸುವವನೇ ಮನೆಯ ಒಡೆಯ ಇಂತಹ ಯೋಜನೆಗಳನ್ನು ಜಾರಿಗೆ ತಂದು ರಾಜ್ಯಕ್ಕೆ ಮಾದರಿಯಾಗಿದ್ದಾರೆ. ರಾಜಕಾರಣದಲ್ಲಿ ಇಂತಹ ವ್ಯಕ್ತಿಯನ್ನು ಕಾಣಲು ಸಾಧ್ಯವಿಲ್ಲ ಎಂದರು.ಬಿ.ಆರ್.ಜಯಂತ್ ಮಾತನಾಡಿದರು.
ಗೌತಮಪುರ ಗ್ರಾಪಂ ಅಧ್ಯಕ್ಷ ರೇಣುಕಮ್ಮ, ಉಪಾಧ್ಯಕ್ಷ ಅಶೋಕ್, ಸದಸ್ಯರಾದ ಗೀತಾ ಧನರಾಜ್, ಶಕುಂತಲಾ, ವಿಠಲ್, ಪ್ರಮುಖರಾದ ಷಣ್ಮುಖಪ್ಪ, ಉಮಾಪತಿ, ಧನರಾಜ್, ಚಂದ್ರಪ್ಪ, ಮಂಜುನಾಥ್, ದೇವರಾಜ್, ಕೃಷಿ ವಿಶ್ವವಿದ್ಯಾಲಯದ ರವಿಕುಮಾರ್, ಡಾ.ಗಣಪತಿ, ಕುಸುಮ, ಶೃತಿ ನಾಯಕ್, ಮಹಾಬಲೇಶ್ವರ ಮತ್ತಿತರರಿದ್ದರು.