- ಕನ್ನಡಪ್ರಭ ಸರಣಿ ವರದಿ ಭಾಗ : 85
ಕನ್ನಡಪ್ರಭ ವಾರ್ತೆ ಯಾದಗಿರಿ"ವಿಷಕಾರಿ ಕೆಮಿಕಲ್ ಕಂಪನಿಗಳ ತೊಲಗಿಸಿ, ಕಡೇಚೂರು ಕೈಗಾರಿಕಾ ಪ್ರದೇಶ ವ್ಯಾಪ್ತಿಯ ಜನರ ಜೀವ ಉಳಿಸಿ.. " ಅನ್ನೋ ಜನಾಂದೋಲನ ತನ್ನ ವಿಸ್ತಾರ ವ್ಯಾಪಿಸತೊಡಗಿದೆ. ಕೆಮಿಕಲ್ ಕಂಪನಿಗಳಿಂದ ಹೊರ ಬರುತ್ತಿರುವ ವಿಷಗಾಳಿ- ತ್ಯಾಜ್ಯ ದುರ್ನಾತದಿಂದ ವಿವಿಧ ರೋಗಗಳಿಗೆ ಬಲಿಯಾಗುತ್ತಿರುವ ಭೂ ಸಂತ್ರಸ್ತರ ರಕ್ಷಿಸುವಲ್ಲಿ ಸರ್ಕಾರ ಮುಂದಾಗಬೇಕಿದೆ ಅನ್ನುತ್ತಿರುವ ಜನರು, ಅಡ್ಡಪರಿಣಾಮಗಳಿಂದ ಅಸ್ವಾಭಾವಿಕವಾಗಿ ಮೃತಪಡುತ್ತಿರುವವರನ್ನು ಸಹಜ ಸಾವುಗಳೆಂದು ಪರಿಗಣಿಸಿ, ವಾಸ್ತವಾಂಶ ಮರೆಮಾಚುತ್ತಿರುವ ಅಧಿಕಾರಿಗಳ ಕ್ರಮ ಆಘಾತಕಾರಿ ಎಂಬುದಾಗಿ ಕಿಡಿ ಕಾರುತ್ತಿದ್ದಾರೆ.
ಇನ್ನು, 2ನೇ ಹಂತದಲ್ಲೂ ಭೂಸ್ವಾಧೀನ ಪ್ರಕ್ರಿಯೆಗೆ ಅಧಿಸೂಚನೆ ಹೊರಡಿಸಿ, ಇದೀಗ ಅದನ್ನು ರದ್ದು ಮಾಡಿರುವುದಾಗಿ ಹೇಳುತ್ತಿರುವ ಸರಕಾರ, ರೈತರ ಬದುಕಿನೊಡನೆ ಚೆಲ್ಲಾಟವಾಡುತ್ತಿದೆ. ರೈತರ ಜಮೀನುಗಳ ರೈತರಿಗೆ ಬಿಟ್ಟು ಕೊಡಿ ಎಂಬ ಆಗ್ರಹ ಕೇಳಿ ಬರುತ್ತಿದೆ.--------------
ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಕೆಮಿಕಲ್ ಕಂಪನಿಗಳಿಂದ ಹೊರ ಬರುತ್ತಿರುವ ವಿಷಗಾಳಿ- ತ್ಯಾಜ್ಯ ದುರ್ನಾತದಿಂದ ವಿವಿಧ ರೋಗಗಳಿಗೆ ಬಲಿಯಾಗುತ್ತಿರುವ ಭೂ ಸಂತ್ರಸ್ತರು, ಆ ಭಾಗದ ಹತ್ತಾರು ಹಳ್ಳಿಗಳ ಜನರು ಬದುಕಿಗೆ ಹರಸಾಹಸ ಪಡುತ್ತಿದ್ದಾರೆ. ಉದ್ಯೋಗ ನೀಡದಿದ್ದರೂ ಪರವಾಗಿಲ್ಲ, ಇವುಗಳನ್ನು ಇಲ್ಲಿಂದ ತೊಲಗಿಸಿ ಇಲ್ಲಿನ ಮುಗ್ದ ಜನರ ಪ್ರಾಣ ಉಳಿಸಿ. ಮುಂದೆ ಯಾವ ರಾಸಾಯನಿಕ ಕಂಪನಿಗಳಿಗೂ ಅನುಮತಿ ನೀಡಬೇಡಿ. ಇಲ್ಲಿನ ಪರಿಸರಕ್ಕೆ ಹಾನಿಯಾಗದ ಮತ್ತು ಹೆಚ್ಚಿನ ಉದ್ಯೋಗ ಸ್ಥಳೀಯರಿಗೆ ನೀಡುವ ಜವಳಿ ಸೇರಿದಂತೆ ಬಹೃತ್ ಕೈಗಾರಿಕಳ ಸ್ಥಾಪನೆಗೆ ಅವಕಾಶ ನೀಡಿ.: ಸುರೇಶ, ಬೆಳಗುಂದಿ
-------------ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಕಂಪನಿಗಳು ಪರಿಸರ ಜತೆ ಇಲ್ಲಿನ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಇದರ ಬಗ್ಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮೌನವಹಿಸುತ್ತಿರುವುದು ಅನೇಕ ಅನುಮಾನಕ್ಕೆ ಕಾರಣವಾಗಿದೆ. ಇನ್ನು, ಎರಡನೇ ಹಂತದ ಭೂಸ್ವಾಧೀನ ಪ್ರಕ್ರಿಯೆ ರದ್ದಾಗಿದ್ದರೂ ರೈತರಿಗೆ ಭೂಮಿಯನ್ನು ನೀಡದಿರುವುದು ಖಂಡನೀಯವಾಗಿದೆ. ಈ ಬಗ್ಗೆ ಕೈಗಾರಿಕಾ ಸಚಿವರು ಮತ್ತು ಸರಕಾರವು ವಿಶೇಷ ಗಮನಹರಿಸಿ, ಇಲ್ಲಿನ ಜನರ ಆರೋಗ್ಯದ ಜತೆ ಈ ಭಾಗ ರೈತರಿಗೆ ಅನುಕೂಲ ಮಾಡಿಕೊಡಬೇಕು. :
ಮರೆಪ್ಪ ಗಡದ್, ಸೈದಾಪುರ.--------------
ಈ ಪ್ರದೇಶದ ಸುತ್ತಮುತ್ತಲಿನ ಸುಮಾರು 15 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಆರೋಗ್ಯವಂತರು ಒಬ್ಬೊಬ್ಬರಾಗಿ ಕೆಲವೊಂದು ಮಾರಕ ಕಾಯಿಲೆಗಳಿಗೆ ತುತ್ತಾಗಿ ಮರಣ ಹೊಂದುತ್ತಿದ್ದಾರೆ. ಈ ಸಾವುಗಳನ್ನು ಸಾಮಾನ್ಯ ಜನರು ಮತ್ತು ಬುದ್ಧಿವಂತ ಅಧಿಕಾರಿಗಳು ಸಹಜ ಸಾವುಗಳೆಂದು ಪರಿಗಣಿಸುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಈ ರಾಸಾಯನಿಕ ಕಂಪನಿಗಳ ವಿಷ ತ್ಯಾಜ್ಯವೇ ಎಂಬುವುದು ಇಲ್ಲಿನ ವೈದ್ಯ ಅಧಿಕಾರಿಗಳಿಗೆ ಗೊತ್ತಿದ್ದರೂ, ಅವರ ವರದಿ ಮಾತ್ರ ಇಲ್ಲಿನ ಜನರ ಆರೋಗ್ಯ ಸ್ಥಿತಿ ಸಾಮಾನ್ಯವಾಗಿದೆ ಎಂದು ತಿಳಿಸುತ್ತಿದ್ದಾರೆ.: ಮರಲಿಂಗಪ್ಪ ನಾಟೇಕರ್, ಮುನಗಾಲ್
--------------ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದ ಸುತ್ತಮುತ್ತಲಿನ ಪರಿಸರ ವಿಷಕಾರಿಯಾಗಿದೆ. ಜನ, ಜಲ ಜೀವನದ ಮೇಲೆ ಆಗುತ್ತಿರುವ ದುಷ್ಪರಿಣಾಮ ತಡೆಯಲು ಸರ್ಕಾರಕ್ಕೆ ವರದಿ ನೀಡಲು, ಸ್ಥಳೀಯ ಪರಿಸರ, ಆರೋಗ್ಯ ಮತ್ತು ಕಾರ್ಮಿಕ ಇಲಾಖೆ ಅಧಿಕಾರಿಗಳು ಮುಂದಾಗಿದ್ದುರೂ, ರಾಜಕೀಯ ಪ್ರಭಾವಿಗಳ ಪರೋಕ್ಷ ಒತ್ತಡ, ಸೂಚನೆಗಳ ಮೇರೆಗೆ ಯಾವುದೇ ಕ್ರಮ ಕೈಗೊಳ್ಳದೇ ಕೈಕಟ್ಟಿಕೊಂಡು ಮೌನಕ್ಕೆ ಶರಣಾಗಿದ್ದಾರೆ. ಇದಕ್ಕೆಲ್ಲ ಕೊನೆ ಹಾಡಬೇಕಾದರೆ ಈ ಭಾಗದ ರಾಜಕೀಯ ಮುಖಂಡರು, ಮಠಾಧೀಶರು ಮತ್ತು ಸಾರ್ವಜನಿಕರು ಒಗ್ಗಟ್ಟಾಗಿ ಹೋರಾಟ ಹಮ್ಮಿಕೊಳ್ಳಬೇಕು.
: ಶಿವಶಂಕರ ಕಾವಲಿ, ಸೌರಾಷ್ಟ್ರಹಳ್ಳಿ.