ಕನ್ನಡಪ್ರಭ ವಾರ್ತೆ ಮೈಸೂರು
ಆರ್ ಎಸ್‌ಎಸ್ ಮುಖಂಡ ದತ್ತಾತ್ರೇಯ ಹೊಸಬಾಳೆ ಅವರು ಸಂವಿಧಾನದಲ್ಲಿರುವ ಜಾತ್ಯಾತೀತ ಮತ್ತು ಸಮಾಜವಾದ ಪದಗಳನ್ನು ತೆಗೆದು ಹಾಕಬೇಕು ಎಂದು ಹೇಳಿದ್ದಾರೆ. ಆದರೆ, ದೇಶದ ಬಹುಜನರು ಜಾತ್ಯಾತೀತ ಮತ್ತು ಸಮಾಜವಾದ ಮಾತ್ರವಲ್ಲ ಸಂವಿಧಾನದ ಒಂದು ಪದವನ್ನೂ ತೆಗೆಯಲು ಬಿಡುವುದಿಲ್ಲ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಸಂವಿಧಾನ ನೀಡುತ್ತಿರುವ ಕೊಡುಗೆ ಬಗ್ಗೆ ನಾವು ಚರ್ಚೆಗೆ ಬರುತ್ತೇವೆ. ದೇಶಕ್ಕೆ ಮನುಸ್ಮೃತಿಯ ಕೊಡುಗೆ ಏನು? ಎಂಬ ವಿಚಾರದ ಬಗ್ಗೆ ಆರ್ ಎಸ್‌ಎಸ್ ನವರು ಚರ್ಚೆಗೆ ಬರಲಿ. ಆರ್ ಎಸ್‌ಎಸ್ ಮತ್ತು ಬಿಜೆಪಿಯವರು ಸಂವಿಧಾನದ ಬಗ್ಗೆ ಪದೇ ಪದೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಬಹುಜನರನ್ನು ಪ್ರಚೋದಿಸುತ್ತಿದ್ದಾರೆ. ಶೋಷಿತ ಸಮುದಾಯಗಳ ತಾಳ್ಮೆಯನ್ನು ಪರೀಕ್ಷೀಸುತ್ತಿದ್ದಾರೆ ಎಂದರು.ಆದರೆ, ಸಂವಿಧಾನವನ್ನು ಬದಲಿಸುವ ಆರ್ ಎಸ್‌ಎಸ್‌ನ ಕುತಂತ್ರ ದಲಿತ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಮುಂದೆ ನಡೆಯುವುದಿಲ್ಲ. ಸಂವಿಧಾನದ ವಿರುದ್ಧ ಮಾತನಾಡುವವರ ಬಾಯಿಗೆ ಹೇಗೆ ಬೀಗ ಹಾಕಬೇಕು ಎಂಬುದು ನಮಗೂ ತಿಳಿದಿದೆ. ಭಾರತವನ್ನು ಒಂದು ಜಾತಿ, ಒಂದು ಧರ್ಮ ಮತ್ತು ಒಂದು ಪಕ್ಷದ ಸ್ವತ್ತಾಗಲು ಬಹುಜನರು ಎಂದಿಗೂ ಅವಕಾಶ ಕೊಡುವುದಿಲ್ಲ. ಆರ್ ಎಸ್‌ಎಸ್ ಕೈಗೊಂಬೆಯಂತೆ ಕಾರ್ಯ ನಿರ್ವಹಿಸುತ್ತಿರುವ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಹೇಳಿದರು.
ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿಯನ್ನು ಜಾರಿಗೊಳಿಸಿದರು ಎಂಬುದನ್ನು ಬಿಜೆಪಿಯವರು ಟ್ರಂಪ್ ಕಾರ್ಡ್ ಮಾಡಿಕೊಂಡಿದ್ದಾರೆ. ಆದರೆ, ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿಯನ್ನು ಬಡವರ ಕಲ್ಯಾಣಕ್ಕಾಗಿ ಬಳಸಿಕೊಂಡರು. 20 ಅಂಶಗಳ ಕಾರ್ಯಕ್ರಮ ಜಾರಿಗೆ ತಂದರು. ಇದರಿಂದ ದೇಶದ ಕೋಟ್ಯಾಂತರ ಬಡ ಜನರು ಮತ್ತು ಶೋಷಿತ ಸಮುದಾಯಗಳು ಬದುಕುಳಿದರು. ಆದರೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಘೋಷಿತ ತುರ್ತು ಪರಿಸ್ಥಿತಿಯ ಮೂಲಕ ದೇಶದ ಜನರನ್ನು ಹಿಂಶಿಸುತ್ತಿದೆ ಎಂದು ಅವರು ಆರೋಪಿಸಿದರು.
ಸಾಹಿತಿ ಸಿದ್ಧಸ್ವಾಮಿ, ಸೋಮಯ್ಯ ಮಲೆಯೂರು, ಸಿ. ಹರಕುಮಾರ್, ಅಶೋಕಪುರಂ ದೊಡ್ಡಗರಡಿ ಅಧ್ಯಕ್ಷ ಮಹೇಶ್, ಆದಿ ಕರ್ನಾಟಕ ಸಂಸ್ಥೆಯ ಅಧ್ಯಕ್ಷ ಸಿದ್ದರಾಜು, ನಾಗರಾಜು ಮೊದಲಾದವರು ಇದ್ದರು.