ಮೂಡಿಗೆರೆಬಣಕಲ್ ಹೋಬಳಿ ಕುಂದೂರು ಗ್ರಾಪಂನಿಂದ ಕುಂದೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ಗ್ರಾಮಸಭೆಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಗೈರು ಹಾಜರಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸಭೆ ಬಹಿಷ್ಕರಿಸಿ ಆಕ್ರೋಶ ವ್ಯಕ್ತಪಡಿಸಿದರು.
ಬಣಕಲ್ ಹೋಬಳಿ ಕುಂದೂರು ಗ್ರಾಪಂನಿಂದ ಸಭೆ
ಕನ್ನಡಪ್ರಭ ವಾರ್ತೆ ಮೂಡಿಗೆರೆಬಣಕಲ್ ಹೋಬಳಿ ಕುಂದೂರು ಗ್ರಾಪಂನಿಂದ ಕುಂದೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ಗ್ರಾಮಸಭೆಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಗೈರು ಹಾಜರಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸಭೆ ಬಹಿಷ್ಕರಿಸಿ ಆಕ್ರೋಶ ವ್ಯಕ್ತಪಡಿಸಿದರು.ಬೆಳಿಗ್ಗೆ 11ಕ್ಕೆ ಗ್ರಾಮಸಭೆ ನಡೆಯಯುವ ಬಗ್ಗೆ ಸಾರ್ವಜನಿಕರಿಗೆ ಮುಂಚಿತವಾಗಿ ಮಾಹಿತಿ ನೀಡಲಾಗಿತ್ತು. ಅರಣ್ಯ ಹಾಗೂ ಕಂದಾಯ (ರೆವೆನ್ಯೂ) ಇಲಾಖೆಗೆ ಸಂಬಂಧಿಸಿದ ಭೂಮಿ, ಜಂಟಿ ಸರ್ವೆ, ಭೂ ದಾಖಲೆಗಳ ತೊಂದರೆ ಸೇರಿದಂತೆ ಹಲವು ವರ್ಷಗಳಿಂದ ಬಗೆಹರಿಯದ ಸಮಸ್ಯೆಗಳ ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಗೆ ಆಗಮಿಸಿದ್ದರು.ಆದರೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಸಭೆಗೆ ಹಾಜರಾಗದ ಕಾರಣ ಭೂ ದಾಖಲೆಗಳ ಗೊಂದಲ, ಜಂಟಿ ಸರ್ವೆ ವಿಳಂಬ, 94ಸಿ ಯೋಜನೆಯಡಿ ದಾಖಲೆಗಳ ಮಂಜೂರಾತಿ, ಮನೆ ನಿರ್ಮಾಣ ಹಾಗೂ ವಿದ್ಯುತ್ ಸಂಪರ್ಕ ಸಂಬಂಧದ ಸಮಸ್ಯೆಗಳಿಗೆ ಸ್ಪಷ್ಟನೆ ಪಡೆಯುವ ನಿರೀಕ್ಷೆಯಲ್ಲಿದ್ದ ಗ್ರಾಮಸ್ಥರು ನಿರಾಸೆ ವ್ಯಕ್ತಪಡಿಸಿದರು.
ಅಕ್ಟೋಬರ್ ನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣ ಸಾಧ್ಯತೆ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ಪಡೆಯುವ ಉದ್ದೇಶವೂ ಗ್ರಾಮಸಭೆಯಲ್ಲಿತ್ತು. ಅಧಿಕಾರಿಗಳ ಗೈರು ಹಾಜರಿಯಿಂದ ಯಾವುದೇ ಚರ್ಚೆ ನಡೆಯದೆ ಸಭೆ ನಿರರ್ಥಕವಾಯಿತು ಎಂದು ಆರೋಪಿಸಿದ ಗ್ರಾಮಸ್ಥರು ಗ್ರಾಮಸಭೆ ಬಹಿಷ್ಕರಿಸಿದರು. ಬಣಕಲ್ ಹೋಬಳಿ ಬಿಜೆಪಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಹುಲ್ಲೆಮನೆ ಸಾಗರ್ ಮಾತನಾಡಿ ಗ್ರಾಮಸಭೆ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಮುಖ ವೇದಿಕೆ. ಆದರೆ ಅಧಿಕಾರಿಗಳು ಸಭೆಗೆ ಗೈರಾಗುತ್ತಿರುವುದು ಬೇಸರದ ಸಂಗತಿ. ಮುಂದಿನ ದಿನಗಳಲ್ಲಿ ಎಲ್ಲಾ ಅಧಿಕಾರಿಗಳು ಸಮಯಕ್ಕೆ ಗೌರವ ನೀಡಿ ಗ್ರಾಮಸಭೆಗೆ ಕಡ್ಡಾಯ ಹಾಜರಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.