ರಾಜ್ಯ ಸರ್ಕಾರ ಕಾವೇರಿ ನೀರು ನಿರ್ವಹಣಾ ಮಂಡಳಿ ಮುಂದೆ ಅರ್ಜಿ ಹಾಕಿ ನಮ್ಮ ಪರಿಸ್ಥಿತಿಯನ್ನು ವಿವರಿಸಬೇಕು‌. ಅಗತ್ಯ ಬಿದ್ದರೆ ಸುಪ್ರೀಂ ಕೋರ್ಟ್ ಮೋರೆ ಹೋಗಬೇಕು. ಇದನ್ನು ಬಿಟ್ಟು ತಮಿಳುನಾಡಿಗೆ ರಾತ್ರೋರಾತ್ರಿ ನೀರು ಹರಿಸಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ರಾಜ್ಯದ ಜನರು ಬರಗಾಲದಿಂದ ತತ್ತರಿಸಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದನ್ನು ಮರೆತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೆಹಲಿ ಮಟ್ಟದಲ್ಲಿ ಕ್ಯಾಂಪೇನ್ ಮಾಡಿಕೊಂಡು ತಿರುಗಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದರು.

ಮಳವಳ್ಳಿ ತಾಲೂಕಿನ ಶಿಂಷಾ, ಶಿವನಸಮುದ್ರದ ಜಲವಿದ್ಯುತ್ ಉತ್ಪಾದನಾ ಘಟಕ ನೀರಿಲ್ಲದೆ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿ ವೀಕ್ಷಿಸಿದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ತಲೆದೂರಿದೆ. ಇದರ ಅರಿವು ರಾಜ್ಯ ಸರ್ಕಾರಕ್ಕೆ ಇಲ್ಲವಾಗಿದೆ ಎಂದು ದೂರಿದರು.

145 ವರ್ಷಗಳಲ್ಲೇ ನೀರಿಲ್ಲದೆ ಜಲ ವಿದ್ಯುತ್ ಉತ್ಪಾದನಾ ಘಟಕ ನಿಂತು ಹೋಗಿರುವುದು ಇದೇ ಮೊದಲು. ಇದಕ್ಕೆ ಯಾವ ರೀತಿ ಕ್ರಮ ಕೈಗೊಳ್ಳಬೇಕೆಂದು ಸರ್ಕಾರಕ್ಕೆ ತಿಳಿಸುತ್ತೇವೆ. ರೈತರಿಗೆ ಪರಿಹಾರ ನೀಡುವುದು ಸೇರಿದಂತೆ ವಿದ್ಯುತ್ ಘಟಕಗಳು ನಿಂತಿರುವ ಕುರಿತು ಅಗತ್ಯ ಕ್ರಮಗಳನ್ನು ಕುರಿತು ರಾಜ್ಯ ಮತ್ತು ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.

ಕಾವೇರಿ ನೀರು ನಿಯಂತ್ರಣ ಸಮಿತಿ ತಮಿಳುನಾಡಿಗೆ 3.5 ಟಿ.ಎಂ.ಸಿ ನೀರು ಹರಿಸುವಂತೆ ಆದೇಶ ಮಾಡಿದೆ. ಆದರೆ, ರಾಜ್ಯದ ಕೆ.ಆರ್.ಎಸ್ ಅಣೆಕಟ್ಟೆಯಲ್ಲಿ ನೀರಿಲ್ಲದೆ ನದಿಗಳು ಬರಿದಾಗಿ ವಿದ್ಯುತ್ ಉತ್ಪಾದನಾ ಘಟಕಗಳೇ ನಿಂತುಹೋಗಿವೆ. ರೈತರ ಬೆಳೆಗಳಿಗೆ ನೀರಿಲ್ಲದೆ ಬೆಳೆಗಳು ಒಣಗುತ್ತಿವೆ. ಈ ಪರಿಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ ಎಂದು ಸರ್ಕಾರ ತಿಳಿಸಬೇಕು ಎಂದು ಹೇಳಿದರು.

ರಾಜ್ಯ ಸರ್ಕಾರ ಕಾವೇರಿ ನೀರು ನಿರ್ವಹಣಾ ಮಂಡಳಿ ಮುಂದೆ ಅರ್ಜಿ ಹಾಕಿ ನಮ್ಮ ಪರಿಸ್ಥಿತಿಯನ್ನು ವಿವರಿಸಬೇಕು‌. ಅಗತ್ಯ ಬಿದ್ದರೆ ಸುಪ್ರೀಂ ಕೋರ್ಟ್ ಮೋರೆ ಹೋಗಬೇಕು. ಇದನ್ನು ಬಿಟ್ಟು ತಮಿಳುನಾಡಿಗೆ ರಾತ್ರೋರಾತ್ರಿ ನೀರು ಹರಿಸಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಸಿದರು.

ಭಾರತೀಯ ಜನತಾ ಪಕ್ಷದ ವತಿಯಿಂದ ಹಲವು ತಂಡಗಳನ್ನು ರಚನೆ ಮಾಡಿಕೊಂಡು ರಾಜ್ಯಾದ್ಯಂತ ಬರ ಪರಿಸ್ಥಿತಿ ಅವಲೋಕನ ಮಾಡಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವರಿಗೆ ಮಾಡುವ ಕೆಲಸ ಮಾಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಎನ್.ಮಹೇಶ್, ಶಾಸಕರಾದ ಗೋಪಿನಾಥ್ ರೆಡ್ಡಿ, ಶ್ರೀವತ್ಸ, ಮಾಜಿ ಶಾಸಕ ನಿರಂಜನ್ ಕುಮಾರ್, ಮೈಸೂರು ವಿಭಾಗದ ಸಂಘಟನಾ ಪ್ರಭಾರಿ ಸ್ವಾಮಿ ಮರಳಾಪುರ, ಸಹ ಪ್ರಭಾರಿ ಇ .ಸಿ.ನಿಂಗರಾಜೇಗೌಡ, ರಾಜ್ಯ ಕಾರ್ಯದರ್ಶಿ ಎಚ್.ಆರ್.ಅಶೋಕ್ ಕುಮಾರ್, ಒಬಿಸಿ ಜಿಲ್ಲಾಧ್ಯಕ್ಷ ಹನೂರು ವೆಂಕಟೇಶ್, ಮಂಡ್ಯ ಜಿಲ್ಲಾಧ್ಯಕ್ಷ ಇಂದ್ರೇಶ್, ಕಾರ್ಯಕ್ರಮ ಸಂಯೋಜಕ ಫಣೀಶ್, ಮಾಧ್ಯಮ ವಕ್ತಾರ ಶಿವಲಿಂಗಸ್ವಾಮಿ , ಹೆಬ್ಬಣಿ ಬಸವರಾಜು, ಸಿದ್ಧರಾಜು, ರಾಮಣ್ಣ, ಕೃಷ್ಣ, ನಾಗೇಗೌಡ, ತೆಂಕಳ್ಳಿ ಮಹೇಶ್, ಒಕ್ಕರಹಳ್ಳಿ ಬಸವರಾಜು, ಕೆಪಿಸಿಎಲ್ ಇಇ ಸತೀಶ್ ಕುಮಾರ್, ಎಇ ಶ್ರೀನಿವಾಸ್, ಜೆಇ ಹರೀಶ್, ವೆಂಕಟೇಶ್ ಗೌಡ ಸೇರಿದಂತೆ ಇತರರಿದ್ದರು.