ಹುಬ್ಬಳ್ಳಿ:
ಜನ ಸಂಪರ್ಕ ಸಭೆಯಲ್ಲಿ ಸಲ್ಲಿಕೆಯಾದ ಅರ್ಜಿಗಳನ್ನು ಅಧಿಕಾರಿಗಳು ತ್ವರಿತಗತಿಯಲ್ಲಿ ಇತ್ಯರ್ಥಪಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.ಅವರು ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಮಟ್ಟದ ಜನಸಂಪರ್ಕ ಸಭೆ ಉದ್ಘಾಟಿಸಿ ಮಾತನಾಡಿದರು.
ಹು-ಧಾ ಮಹಾನಗರದಲ್ಲಿನ ಕೆಲವು ನಿವೇಶನಗಳಿಗೆ ದಾಖಲೆಗಳಿಲ್ಲ. ಅಲ್ಲದೇ ಅನಧಿಕೃತ ಬಡಾವಣೆಗಳು ಸಹ ಇಲ್ಲಿವೆ. ಕೆಲವು ಬಡಾವಣೆಗಳು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿವೆ. ₹ 200 ಕೋಟಿ ಅನುದಾನದಲ್ಲಿ ವಿವಿಧ ವಾರ್ಡ್‌ಗಳನ್ನು ಅಭಿವೃದ್ಧಿಪಡಿಸಲಾಗುವುದು. ಕೆಲವು ಅರ್ಜಿಗಳು ನ್ಯಾಯಾಲಯಗಳಲ್ಲಿವೆ. ಕುಡಿಯುವ ನೀರಿನ ಸಮಸ್ಯೆಗೆ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಸಮಸ್ಯೆ ಪರಿಹರಿಸುವಂತೆ ಸಚಿವರು ಸೂಚಿಸಿದರು.ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿ, ಸಾರ್ವಜನಿಕರ ಅಹವಾಲು ಆಲಿಸುವ ನಿಟ್ಟಿನಲ್ಲಿ ಜನ ಸಂಪರ್ಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಲ್ಲಿ ಸಲ್ಲಿಕೆಯಾದ ಅರ್ಜಿಗಳನ್ನು ಐಪಿಜಿಆರ್‌ಎಸ್ ನಲ್ಲಿ ದಾಖಲಿಸಲಾಗುತ್ತದೆ. ಮುಂದಿನ 30 ದಿನಗಳಲ್ಲಿ ಸಂಬಂಧಪಟ್ಟ ಇಲಾಖೆಗಳು ಸಮಸ್ಯೆಗಳಿಗೆ ಪರಿಹಾರ ಒದಗಿಸಲಿವೆ ಎಂದರು.
ಮಹಾನಗರದಲ್ಲಿ ವಾರ್ಡ್ ಸಮಿತಿ ರಚನೆಗೆ ಮೂರು ಬಾರಿ ಅರ್ಜಿ ಕರೆದರೂ ಸಮಿತಿ ರಚನೆಗೆ ಅವಕಾಶ ಮಾಡಿಕೊಟ್ಟಿಲ್ಲ. ಕೋರಂ ಇಲ್ಲವೆಂದು ಸಮಿತಿ ರಚನೆಗೆ ಅವಕಾಶ ನೀಡುತ್ತಿಲ್ಲ ಎಂದು ಅರ್ಜಿದಾರರು ದೂರಿದರು. ಇದಕ್ಕೆ ಉತ್ತರಿಸಿದ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಎಲ್ಲ ವಾರ್ಡ್‌ಗಳಿಂದ 10 ಅರ್ಜಿಗಳಂತೆ ಒಟ್ಟು 820 ಅರ್ಜಿಗಳು ಸಲ್ಲಿಕೆಯಾಗಬೇಕು. ಆಗ ಮಾತ್ರ ವಾರ್ಡ್ ಸಮಿತಿ ರಚಿಸಬಹುದು ಎಂದು ಹೇಳಿದರು.ಇದಕ್ಕೆ ಉತ್ತರಿಸಿದ ಸಚಿವ ಲಾಡ್, ವಾರ್ಡ್ ಸಮಿತಿ ರಚನೆಗೆ ವಾರ್ಡ್‌ವಾರು ಸಮಿತಿ ರಚನೆ ಅವಕಾಶವಿದೆಯೇ ಎಂಬುದನ್ನು ವಿಚಾರಿಸಿ. ಯಾವ ವಾರ್ಡ್‌ಗಳಲ್ಲಿ 10ಕ್ಕಿಂತ ಹೆಚ್ಚು ಅರ್ಜಿ ಬಂದಿವೆಯೇ ಅಂತಹ ವಾರ್ಡ್‌ಗಳನ್ನು ಗುರುತಿಸಿ ಅಲ್ಲಿ ವಾರ್ಡ್ ಸಮಿತಿ ರಚನೆ ಮಾಡಬಹುದಾ? ಎಂಬುದರ ಕುರಿತು ಮಾಹಿತಿ ನೀಡಿದರೆ ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ವಾರ್ಡ್ ಸಮಿತಿ ರಚನೆ ಕುರಿತು ಪ್ರಚಾರ ಮಾಡುವಂತೆ ಆಯುಕ್ತರಿಗೆ ಸೂಚಿಸಿದರು.
ಜನತಾ ಬಜಾರ್ ಕಟ್ಟಡದಲ್ಲಿ ವ್ಯಾಪಾರ ನಡೆಸಲು ಅವಕಾಶ ಮಾಡಿಕೊಡಬೇಕು ಎಂಬ ವ್ಯಾಪಾರಸ್ಥರ ಅರ್ಜಿಗೆ ಉತ್ತರಿಸಿದ ಸಚಿವರು, ಸ್ಮಾರ್ಟ್‌ಸಿಟಿ ಯೋಜನೆಯ ಅಡಿ ಜನತಾ ಬಜಾರ್ ಕಟ್ಟಡ ನಿರ್ಮಿಸಿದ್ದು ಶೀಘ್ರವೇ ವ್ಯಾಪಾರಸ್ಥರಿಗೆ ವ್ಯಾಪಾರಕ್ಕೆ ಅವಕಾಶ ನೀಡುವಂತೆ ಪಾಲಿಕೆ ಆಯುಕ್ತರಿಗೆ ಹೇಳಿದರು.ಈಗಾಗಲೇ 545 ಪಿಎಸ್‌ಐ ನೇಮಕಾತಿಗೆ ಸಂಬಂಧಿಸಿದಂತೆ ಪರೀಕ್ಷೆಗೆ ಮುಗಿದಿವೆ. ಆದರೆ, ತಾತ್ಕಾಲಿಕ ಪಟ್ಟಿ ಬಿಡುಗಡೆ ಮಾಡುವಲ್ಲಿ ವಿಳಂಬವಾಗುತ್ತಿದೆ ಎಂಬ ಅರ್ಜಿಗೆ ಉತ್ತರಿಸಿದ ಸಚಿವರು, ಈ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು. ಗೃಹ ಸಚಿವರ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ಶಾಸಕ ಎನ್.ಎಚ್. ಕೋನರಡ್ಡಿ, ಪಾಲಿಕೆ ಮೇಯರ್ ರಾಮಣ್ಣ ಬಡಿಗೇರ, ಉಪಮೇಯರ್ ದುರ್ಗಮ್ಮ ಬಿಜವಾಡ, ತಹಸೀಲ್ದಾರ್, ಇಒಗಳು, ವಿವಿಧ ಇಲಾಖೆಗಳ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರಿದ್ದರು.113 ಅರ್ಜಿ ಸಲ್ಲಿಕೆ:ಜನ ಸಂಪರ್ಕ ಕಾರ್ಯಕ್ರಮದಲ್ಲಿ ಒಟ್ಟು 113 ಅರ್ಜಿಗಳು ಸಲ್ಲಿಕೆಯಾದವು. ಅವುಗಳಲ್ಲಿ 27 ಹು-ಧಾ ಮಹಾನಗರ ಪಾಲಿಕೆ, 30 ಕಂದಾಯ ಇಲಾಖೆ, 29 ಜಿಲ್ಲಾ ಪಂಚಾಯಿತಿ, 3 ಹೆಸ್ಕಾಂ ಹಾಗೂ 25 ಅರ್ಜಿಗಳು ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಅರ್ಜಿಗಳಿದ್ದವು.
ಅವ್ಯವಸ್ಥೆಯ ಗೂಡು:ಜನಸಂಪರ್ಕ ಸಭೆ ಅವ್ಯವಸ್ಥೆಯ ಗೂಡಾಗಿ ಮಾರ್ಪಟ್ಟಿತು. ಜಿಲ್ಲೆಯ ವಿವಿಧ ಭಾಗಗಳಿಂದ ಸಮಸ್ಯೆ ಹೊತ್ತುಕೊಂಡು ಬಂದಿದ್ದ ಸಾರ್ವಜನಿಕರು ಅಲ್ಲಿನ ಅವ್ಯವಸ್ಥೆ ಕಂಡು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾ ಉಸ್ತುವಾರಿ ಸಚಿವರ, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಜನಸಂಪರ್ಕ ಕಾರ್ಯಕ್ರಮದಲ್ಲಿ ಅರ್ಜಿ ಸಲ್ಲಿಸಲು ಆಗಮಿಸಿದ ಜನರಿಗೆ ಸರಿಯಾದ ವ್ಯವಸ್ಥೆ ಕಲ್ಪಿಸಿರಲಿಲ್ಲ. ಅರ್ಜಿ ಸಲ್ಲಿಸುವವರು ಯಾರು, ಅಧಿಕಾರಿಗಳು ಯಾರು ಎಂಬ ಗೊಂದಲ ಮಾರ್ಪಟ್ಟಿತು.