ಕನ್ನಡಪ್ರಭ ವಾರ್ತೆ ಲೋಕಾಪುರ
ಗ್ರಾಮೀಣ ಭಾಗದ ಮಹಿಳೆಯರು ಹೊಲಿಗೆ ತರಬೇತಿ ಪಡೆದು ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಲು ಸೌಥ್ ಆ್ಯಂಡ್ ವೆಸ್ಟ್ ಮೈನ್ಸ್ (ಮುದ್ದಾಪುರ) ಅವರು ಅವಕಾಶ ನೀಡಿದ್ದು ಇದರ ಸದುಪಯೋಗ ಪಡೆಯುವಂತೆ ಪ್ರಧಾನ ವ್ಯವಸ್ಥಾಪಕ ಚಿದಾನಂದ ಪಡದಪ್ಪನವರ ಹೇಳಿದರು.ಪಟ್ಟಣದ ಲೋಕೇಶ್ವರ ಶಿಕ್ಷಣ ಸಮಿತಿಯ ಆರ್.ಬಿ.ಜಿ. ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಉಚಿತ ೧೫ ಹೊಲಿಗೆ ಯಂತ್ರಗಳನ್ನು ದೇಣಿಗೆಯಾಗಿ ನೀಡಿ ಮಾತನಾಡಿದ ಅವರು, ಇದರಿಂದ ಮಹಿಳೆಯರು ಬಿಡುವಿನ ಸಮಯದಲ್ಲಿ ಸ್ವಲ್ಪ ಹಣ ಸಂಪಾದನೆ ಮಾಡಿಕೊಳ್ಳಬಹುದೆಂದು ಸಂತಸ ವ್ಯಕ್ತಪಡಿಸಿದರು.
ಪಪಂ ಮುಖ್ಯಾಧಿಕಾರಿ ಜ್ಯೋತಿ ಉಪ್ಪಾರ ಮಾತನಾಡಿ, ಹೆಣ್ಮಕ್ಕಳು ಸ್ವಾವಲಂಬಿಯಾಗಿ ಬದುಕುವುದು ಮತ್ತು ಹೊಲಿಗೆ ಕಲಿಯುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ವಿದ್ಯಾರ್ಥಿನಿಯರಿಗೆ ಮಾರ್ಗದರ್ಶನ ನೀಡಿದರು.ನಿವೃತ್ತ ಪ್ರಾಚಾರ್ಯ ಎಸ್.ಬಿ. ಕೃಷ್ಣಗೌಡರ ಮಾತನಾಡಿ, ಹಳ್ಳಿಯಲ್ಲಿ ಓರ್ವ ವಿದ್ಯಾವಂತನಾದರೆ ಆತನಿಂದ ಹಳ್ಳಿ ಅಭಿವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಗುರಿಯನ್ನು ಸ್ಪಷ್ಟಪಡಿಸಿಕೊಂಡು ಹೆಜ್ಜೆಗಳನ್ನಿಡಬೇಕು. ಜೊತೆಗೆ ಚಿಂತನಾ ಶಕ್ತಿ ಬೆಳೆಸಿಕೊಳ್ಳಬೇಕು. ತಮ್ಮ ಗುರಿ, ಸಾಧನೆಯ ಮನೋಸ್ಥೈರ್ಯ ಗಟ್ಟಿಯಾಗಿದ್ದರೆ ಯಾವುದೇ ಸಾಧನೆಯನ್ನಾದರೂ ಸಾಧಿಸಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪ್ರಾಚಾರ್ಯ ಸಿವಿ ಬನ್ನಿ ಮಾತನಾಡಿ, ಮೇ.ಸೌಥ್ ವೆಸ್ಟ್ ಮೈನಿಂಗ್ ಕಂಪನಿಯಿಂದ ಶಾಲೆಗೆ ನೀಡಿದ ಹೊಲಿಗೆ ಯಂತ್ರ ಕೊಡಮಾಡಿದ ಪ್ರಧಾನ ವ್ಯವಸ್ಥಾಪಕರಿಗೆ ಹಾಗೂ ಸಿಬ್ಬಂದಿಗೆ ಧನ್ಯವಾದ ಅರ್ಪಿಸಿದರು. ಈ ಯಂತ್ರಗಳಿಂದ ನಮ್ಮ ಶಾಲೆಯ ಹೆಣ್ಣು ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.ಈ ವೇಳೆ ನಿ.ಪ್ರಾಚಾರ್ಯ ಡಿ.ಎಂ.ತುಬಾಕಿ, ನಿರ್ದೇಶಕರಾದ ಎನ್.ವಿ. ತುಳಸಿಗೇರಿ, ಗುತ್ತಿಗೆದಾರ ಕಾಶಲಿಂಗ ನಿರ್ವಾಣಿ, ಸೌತ್ ವೆಸ್ಟ್ ಮೈನಿಂಗ್ ಕಂಪನಿ ಸಿಬ್ಬಂದಿ ಶರಣಪ್ಪ, ಸಂತೋಷ, ವಿ.ಆರ್. ಪಾಟೀಲ, ಎಸ್.ಎಫ್. ನಾಯ್ಕ, ಮಂಜುನಾಥ ಪಾಟೀಲ, ಸಹ ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿ ಇದ್ದರು.