ವೈದ್ಯಾಧಿಕಾರಿಗಳ ಜಾಗೃತಿ ಸಭೆಯಲ್ಲಿ ಕಲಬುರಗಿ ವಿಭಾಗದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಉಪನಿರ್ದೇಶಕ
ನಿರ್ಲಕ್ಷಿಸಿದರೆ ಅಪಾಯಕಾರಿಯಾಗುವ ದಡಾರ ರೋಗ ತಡೆಯಲು ಮಗುವಿನ ವಯಸ್ಸು ಒಂಬತ್ತು ತಿಂಗಳು ತುಂಬಿದ ನಂತರ ತಪ್ಪದೇ ದಡಾರ-ರುಬೆಲ್ಲಾ ಲಸಿಕೆ ಹಾಕಿಸಬೇಕು ಎಂದು ಕಲಬುರಗಿ ವಿಭಾಗದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಉಪನಿರ್ದೇಶಕ ಡಾ. ಶರಣಬಸಪ್ಪ ಗಣಜಲಖೇಡ ಹೇಳಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಾಲಯದಲ್ಲಿ ಆಯೋಜಿಸಿದ್ದ ವೈದ್ಯಾಧಿಕಾರಿಗಳ ಜಾಗೃತಿ ಸಭೆಯಲ್ಲಿ ಮಾತನಾಡಿದರು.ಸಾಮಾನ್ಯವಾಗಿ ಬೇಸಿಗೆಯಲ್ಲಿ ಬೆವರುಸಾಲೆಯಿಂದ ದೇಹದ ಮೇಲೆ ನುಚ್ಚು ಗುಳ್ಳೆಗಳು ಕಂಡು ಬರುವುದು ಸಹಜ. ದಡಾರ ಸೋಂಕು ಸಹ ನೋಡಲು ಇದೇ ರೀತಿ ಕಂಡು ಬರುತ್ತದೆ. ಮುಂಜಾಗ್ರತೆ ಕ್ರಮವಾಗಿ ಯಾವುದೇ ತಪ್ಪು ನಂಬಿಕೆಗಳನ್ನು ನಂಬದೆ ಮಕ್ಕಳಿಗೆ ದಡಾರ- ರೂಬೆಲ್ಲಾ ಲಸಿಕೆ ಹಾಕಿಸಬೇಕು ಎಂದರು.
ಪಾಲಕರು ಸಹ ತಮ್ಮ ಮಕ್ಕಳಿಗೆ 9 ತಿಂಗಳು ತುಂಬಿದ ನಂತರ ಹಾಗೂ ಒಂದುವರೆ ವರ್ಷದ ಅವಧಿಯಲ್ಲಿ ತಪ್ಪದೆ ದಡಾರ ಲಸಿಕೆ ಹಾಕಿಸಲು ಮುಂದಾಗಬೇಕು. ಈ ಕುರಿತು ವ್ಯಾಪಕ ಜಾಗೃತಿ ನೀಡಬೇಕು ಎಂದು ತಿಳಿಸಿದರು.
ದಡಾರದ ದದ್ದು ಸಾಮಾನ್ಯವಾಗಿ ತಲೆಯ ಮೇಲೆ ಪ್ರಾರಂಭವಾಗುತ್ತದೆ ಮತ್ತು ನಂತರ ದೇಹದ ಉಳಿದ ಭಾಗಗಳಿಗೆ ಹರಡುತ್ತದೆ. ಇದು ಸಾಮಾನ್ಯವಾಗಿ 4 ರಿಂದ 7 ದಿನಗಳವರೆಗೆ ಇರುತ್ತದೆ. ಒಂದು ವೇಳೆ ನಿರ್ಲಕ್ಷಿಸಿದರೆ ವಾಂತಿ-ಭೇದಿ, ನ್ಯೂಮೋನಿಯಾ ಉಂಟಾಗಿ ಮಗು ಮರಣ ಸಹ ಹೊಂದಬಹುದು, ಈ ಹಿನ್ನಲೆ ಪ್ರಸ್ತುತ 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಹೆಚ್ಚುವರಿಯಾಗಿ ಒಂದು ಡೊಸ್ ಲಸಿಕೆ ಹಾಗೂ ಇದರೊಂದಿಗೆ ವಿಟಾಮಿನ್-ಎ ಅನ್ನಾಂಗ ದ್ರಾವಣವನ್ನು ಸಹ ನೀಡಲಾಗುತ್ತಿದ್ದು, ಈ ಹಿನ್ನೆಲೆ ನಗರ ಪ್ರದೇಶದ ಕೊಳಚೆ ಪ್ರದೇಶಗಳು ಮತ್ತು ಗ್ರಾಮೀಣ ಪ್ರದೇಶ, ವಲಸೆ ಸ್ಥಳಗಳಲ್ಲಿ ಹೆಚ್ಚು ಜಾಗೃತಿ ನೀಡಿ ಲಸಿಕೆ ಹಾಕಿಸಲು ಸೂಚಿಸಿದರು.
ಸಭೆಯಲ್ಲಿ ಡಬ್ಲ್ಯುಎಚ್‌ಒ ಸರ್ವೆಕ್ಷಣಾ ವೈದ್ಯಾಧಿಕಾರಿ ಡಾ. ಆರ್.ಎಸ್. ಶ್ರೀಧರ, ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ.ಆರ್.ಅಬ್ದುಲ್ಲಾ, ಜಿಲ್ಲಾ ಸರ್ವೇಕ್ಷಾಧಿಕಾರಿ ಡಾ. ಮರಿಯಂಬಿ ವಿ.ಕೆ., ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಹನುಮಂತಪ್ಪ, ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅಧಿಕಾರಿ ಡಾ. ಪೂರ್ಣಿಮಾ ಕಟ್ಟಿಮನಿ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ವಿರೇಂದ್ರಕುಮಾರ ಸೇರಿದಂತೆ ತಾಲ್ಲೂಕು ಆರೋಗ್ಯಾಧಿಕಾರಿಗಳು, ಆಡಳಿತ ವೈದ್ಯಾಧಿಕಾರಿಗಳು ಇತರರಿದ್ದರು.